ADVERTISEMENT

ಪೊಲೀಸ್‌ ಅಧಿಕಾರಿ ವಿರುದ್ಧ ಕ್ರಮಕ್ಕೆ 24 ಗಂಟೆ ಗಡುವು

ಯುವ ವಕೀಲಗೆ ಪೊಲೀಸ್‌ ದೌರ್ಜನ್ಯ ಆರೋಪ– ವಕೀಲರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 9:34 IST
Last Updated 7 ಡಿಸೆಂಬರ್ 2022, 9:34 IST
ಪ್ರತಿಭಟನೆಯಲ್ಲಿ ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಪೃಥ್ವಿರಾಜ್‌ ರೈ ಮಾತನಾಡಿದರು– ಪ್ರಜಾವಾಣಿ ಚಿತ್ರ
ಪ್ರತಿಭಟನೆಯಲ್ಲಿ ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಪೃಥ್ವಿರಾಜ್‌ ರೈ ಮಾತನಾಡಿದರು– ಪ್ರಜಾವಾಣಿ ಚಿತ್ರ   

ಮಂಗಳೂರು: ಯುವ ವಕೀಲ ಕುಲದೀಪ್‌ ವಿರುದ್ಧ ಬಂಟ್ವಾಳ ತಾಲ್ಲೂಕಿನ ಪುಂಜಾಲಕಟ್ಟೆ ಠಾಣೆಯ ಪೊಲೀಸ್‌ ಅಧಿಕಾರಿಗಳು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಮಂಗಳೂರು ವಕೀಲರ ಸಂಘದ ನೇತೃತ್ವದಲ್ಲಿ ನಗರದ ದಕ್ಷಿಣ ಕನ್ನಡ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ಎದುರು ವಕೀಲರು ಬುಧವಾರ ಪ್ರತಿಭಟನೆ ನಡೆಸಿದರು.

’ಕುಲದೀಪ್‌ ಮೇಲೆ ದೌರ್ಜನ್ಯ ನಡೆಸಿರುವ ಪಿಎಸ್‌ಐ ಸುತೇಶ್‌ ವಿರುದ್ಧ 24 ಗಂಟೆ ಒಳಗೆ ಎಫ್‌ಐಆರ್‌ ದಾಖಲಿಸಿ, ಅಮಾನತು ಮಾಡಿ, ವಿಚಾರಣೆಗೆ ಒಳಪಡಿಸಬೇಕು’ ಎಂದು ಪ್ರತಿಭಟನಾಕಾರರು ಗಡುವು ನೀಡಿದರು. ಪೊಲೀಸ್‌ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳದೇ ಹೋದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಪೃಥ್ವಿರಾಜ್‌ ರೈ, ‘ಕುಲದೀಪ್‌ ಅವರು ವಕೀಲರು ಎಂದು ಗೊತ್ತಿದ್ದರೂ, ಅವರ ಮೇಲೆ ಗೇಟ್‌ ಕಳವಿನ ಆರೋಪ ಹೊರಿಸಿ ರಾತ್ರೋರಾತ್ರಿ ಅಮಾನುಷವಾಗಿ ಬಂಧಿಸಿದ್ದಾರೆ. ವಕೀಲನಾದರೆ ನ್ಯಾಯಾಲಯದಲ್ಲಿ ನೋಡಿಕೊಳ್ಳು ಎಂದು ಉಡಾಫೆಯಿಂದ ಪೊಲೀಸ್‌ ಅಧಿಕಾರಿ ಮಾತನಾಡಿದ್ದಾರೆ. ಠಾಣೆಗೆ ಕರೆದೊಯ್ಯುವಾಗ ದಾರಿ ಮಧ್ಯೆ ವಾಹನ ನಿಲ್ಲಿಸಿ ಹಲ್ಲೆ ನಡೆಸಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ವ್ಯಕ್ತಿಯ ಬಂಧನದ ವೇಳೆ ಪಾಲಿಸಬೇಕಾದ ಸುಪ್ರೀಂ ಕೋರ್ಟ್‌ ಮಾರ್ಗಸೂಚಿಗಳನ್ನು ಪೊಲೀಸ್‌ ಅಧಿಕಾರಿಯು ಉಲ್ಲಂಘಿಸಿದ್ದಾರೆ. ಅವರು ಕರ್ತವ್ಯದಲ್ಲಿ ಮುಂದುವರಿಯಲು ಅರ್ಹರಲ್ಲ. ಅವರ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ನೀಡಿದ್ದೇವೆ. ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ’ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಎಣ್ಮಕಜೆ, ‘ ಪೊಲೀಸ್‌ ಅಧಿಕಾರಿಯು ಕುಲದೀಪ್‌ ಮನೆಗೆ ರಾತ್ರೋ ರಾತ್ರಿ ನುಗ್ಗಿ, ಅವರ ತಂದೆ ತಾಯಿಗೂ ಬೆದರಿಕೆ ಒಡ್ಡಿದ್ದಾರೆ. ಸಿವಿಲ್‌ ವ್ಯಾಜ್ಯಕ್ಕೆ ಸಂಬಂಧಿಸಿ ನ್ಯಾಯಾಲಯದ ಪ್ರತಿಬಂಧಕಾಜ್ಞೆ ಇದ್ದರೂ ಎದುರುದಾರರು ದೂರು ನೀಡಿದ ಒಂದೇ ಗಂಟೆಯಲ್ಲಿ ಎಫ್ಐಆರ್‌ ದಾಖಲಿಸಿದ್ದಾರೆ. ಕುಲದೀಪ್‌ ಅವರ ವಿಡಿಯೊ ಕಸಿದುಕೊಂಡು ಅದರಲ್ಲಿದ್ದ ವಿಡಿಯೊಗಳನ್ನು ಡಿಲಿಟ್‌ ಮಾಡುವ ಮೂಲಕ ಸಾಕ್ಷ್ಯಗಳನ್ನು ನಾಶಪಡಿಸಿದ್ದಾರೆ’ ಎಂದು ಆರೋಪಿಸಿದರು.

ವಕೀಲ ಪರಮೇಶ್ವರ ಜೋಯಿಸ್‌, ’ತಪ್ಪಿತಸ್ಥ ಪೊಲೀಸ್‌ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಈ ಹೋರಾಟ ನಿಲ್ಲದು’ ಎಂದರು.

ವಕೀಲ ಎಸ್‌.ಪಿ.ಚೆಂಗಪ್ಪ ಮಾತನಾಡಿದರು.

–0–

ಕಲಾಪ ಬಹಿಷ್ಕಾರಕ್ಕೆ ಒತ್ತಾಯ

‘ಯುವ ವಕೀಲರ ಮೇಲೆ ಪೊಲೀಸ್‌ ದೌರ್ಜನ್ಯ ಖಂಡಿಸಿ ಶಾಂತಿಯುತ ನಡೆಸಿದರೆ ಸಾಲದು. ಕೋರ್ಟ್‌ ಕಲಾಪವನ್ನು ಬಹಿಷ್ಕರಿಸಿ ಪ್ರತಿಭಟಿಸಬೇಕು’ ಎಂದು ವಕೀಲ ದಿನಕರ ಶೆಟ್ಟಿ ಒತ್ತಾಯಿಸಿದರು.

‘ಸದ್ಯಕ್ಕೆ ನ್ಯಾಯಾಲಯವೂ ಈ ಪ್ರಕರಣದಲ್ಲಿ ಅಧಿಕಾರಿಯನ್ನು ವಿಚಾರಣೆಗೆ ಒಳಪಡಿಸುವಂತೆ ಸೂಚಿಸಿದೆ. ಅಧಿಕಾರಿ ವಿರುದ್ಧ 24 ಗಂಟೆಗಳಲ್ಲಿ ಕ್ರಮ ಆಗದಿದ್ದಲ್ಲಿ ಹೋರಾಟದ ಮುಂದಿನ ರೂಪುರೇಷೆ ಬಗ್ಗೆ ಬಗ್ಗೆ ತೀರ್ಮಾನಿಸುವ’ ಎಂದು ಪೃಥ್ವಿರಾಜ್‌ ರೈ ತಿಳಿಸಿದರು.

–0–

‘ಪ್ರತಿಬಂಧಕ ಆದೇಶವನ್ನು ಠಾಣೆಗೆ ನೀಡಿದ್ದೆ’

’ಜಮೀನಿನ ದಾರಿಗೆ ಸಂಬಂಧಿಸಿದ ವ್ಯಾಜ್ಯ ಸಂಬಂಧ ನಾನು ನ್ಯಾಯಾಲಯದಿಂದ ಪ್ರತಿಬಂಧಕ ಆದೇಶವನ್ನು ಪಡೆದಿದ್ದು, ಅದನ್ನು ಪುಂಜಾಲಕಟ್ಟೆ ಪೊಲೀಸ್‌ ಠಾಣೆಗೆ ಹಾಜರುಪಡಿಸಿದ್ದೆ. ಆ ಬಳಿಕ ನನ್ನ ಎದುರುದಾರರು ನನ‌ನ ವಿರುದ್ಧ ದೂರು ನೀಡಿದ್ದು, ಅದರ ಆಧಾರದಲ್ಲಿ ನನ್ನ ಮೇಲೆ ಎಫ್‌ಐಆರ್‌ ದಾಖಲಿಸಿದ್ದಾರೆ. ರಾತ್ರೋ ರಾತ್ರಿಗೆ ಮನೆಗೆ ಬಂದು ಬಂಧಿಸಿದ್ದಾರೆ. ನನ್ನಿಂದ ಬಲವಂತವಾಗಿ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ’ ಎಂದು ಕುಲದೀಪ್‌ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.