ADVERTISEMENT

ಮಂಗಳೂರು | ಬಂದರು ಅಭಿವೃದ್ಧಿ: ನಿರೀಕ್ಷೆಯ ಅಲೆ

ನಿಗದಿಯಂತೆ ಕಾಮಗಾರಿ ನಡೆದರೆ ಇನ್ನೆರಡು ವರ್ಷಗಳಲ್ಲಿ ಮಂಗಳೂರು ಹಳೆ ಬಂದರಿಗೆ ಹೊಸ ಕಳೆ

ಸಂಧ್ಯಾ ಹೆಗಡೆ
Published 15 ಡಿಸೆಂಬರ್ 2025, 6:21 IST
Last Updated 15 ಡಿಸೆಂಬರ್ 2025, 6:21 IST
ಮಂಗಳೂರಿನ ಹಳೆ ಬಂದರಿನಲ್ಲಿ ಲಕ್ಷದ್ವೀಪಕ್ಕೆ ಮೀಸಲಿರುವ ಜೆಟ್ಟಿ ಅಭಿವೃದ್ಧಿಗೆ ಗುರುತಿಸಿರುವ ಜಾಗ
ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್
ಮಂಗಳೂರಿನ ಹಳೆ ಬಂದರಿನಲ್ಲಿ ಲಕ್ಷದ್ವೀಪಕ್ಕೆ ಮೀಸಲಿರುವ ಜೆಟ್ಟಿ ಅಭಿವೃದ್ಧಿಗೆ ಗುರುತಿಸಿರುವ ಜಾಗ ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್   

ಮಂಗಳೂರು: ಮಂಗಳೂರಿನ ಹಳೆ ಬಂದರಿನಲ್ಲಿ ಒಂದು ಮತ್ತು ಎರಡನೇ ಹಂತದ ಜೆಟ್ಟಿ ಉನ್ನತೀಕರಣ, ಲಕ್ಷದ್ವೀಪಕ್ಕೆ ಮೀಸಲಿರುವ ಜೆಟ್ಟಿ ಅಭಿವೃದ್ಧಿ, ಬೆಂಗ್ರೆಯಲ್ಲಿ ಕೋಸ್ಟಲ್ ಬರ್ತ್, ಕುಳಾಯಿಯಲ್ಲಿ ಜೆಟ್ಟಿ ನಿರ್ಮಾಣ ಹೀಗೆ ಹಲವಾರು ಯೋಜನೆಗಳು ಮೀನುಗಾರರು, ಬೋಟ್ ಮಾಲೀಕರು, ಬಂದರು ಕಾರ್ಮಿಕರಲ್ಲಿ ಆಶಾಭಾವ ಮೂಡಿಸಿವೆ. ವಾಣಿಜ್ಯ ಚಟುವಟಿಕೆಗಳು ವೇಗ ಪಡೆದುಕೊಳ್ಳುವ ಭರವಸೆ ಹುಟ್ಟಿಸಿವೆ.

ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಒಂದು ಹಾಗೂ ಎರಡನೇ ಹಂತದ ಜೆಟ್ಟಿ ಮೇಲ್ದರ್ಜೆಗೇರಿಸುವ ₹37.90 ಕೋಟಿ ಕಾಮಗಾರಿಗೆ ಇತ್ತೀಚೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಕಾಮಗಾರಿ ಪ್ರಾರಂಭವಾಗಿದೆ. 

ಹಳೆ ಬಂದರಿನಲ್ಲಿ ಮೊದಲ ಹಂತದ ಕಾಮಗಾರಿ 1991ರಲ್ಲಿ ಪೂರ್ಣಗೊಂಡಿದ್ದರೆ, ಎರಡನೇ ಹಂತದ ಕಾಮಗಾರಿ 2004ರಲ್ಲಿ ನಡೆದಿತ್ತು. ಈ ವೇಳೆ ಮೀನು ಹರಾಜು ಪ್ರಾಂಗಣ, ರಸ್ತೆಗಳ ಕಾಂಕ್ರಿಟೀಕರಣ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲಾಗಿತ್ತು.

ADVERTISEMENT

34 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಜೆಟ್ಟಿಯ ಕೆಲವು ಕಡೆ ಕುಸಿದಿದ್ದು, 300 ಮೀಟರ್‌ನಷ್ಟು ಮರು ನಿರ್ಮಾಣ, ನೀರಿನ ಟ್ಯಾಂಕ್ ನಿರ್ಮಾಣ, ಹರಾಜು ಕೇಂದ್ರದ ಮರು ನಿರ್ಮಾಣ, ಮೀನುಗಾರಿಕಾ ಇಲಾಖೆಯ ಕಚೇರಿ ಕಟ್ಟಡ, ಶೌಚಾಲಯ, ಪ್ರವೇಶ ದ್ವಾರ ಅಭಿವೃದ್ದಿ, ಸಿಸಿಟಿವಿ, ಸೋಲಾರ್ ಲೈಟಿಂಗ್ , ಚರಂಡಿ, ಒಳಚರಂಡಿ ದುರಸ್ತಿ ಮೊದಲಾದ ಕಾಮಗಾರಿಗಳು ಈ ಯೋಜನೆಯಲ್ಲಿ ಒಳಗೊಂಡಿವೆ.

‘ಬಂದರಿನಲ್ಲಿ ಚಟುವಟಿಕೆಗಳು ಹೆಚ್ಚಿವೆ. ಬೋಟ್‌ಗಳು, ಕಾರ್ಮಿಕರು, ವಹಿವಾಟು ಎಲ್ಲವೂ ಹೆಚ್ಚಾಗಿದೆ. ಪ್ರಸ್ತುತ ಇರುವ ಜಾಗದಲ್ಲಿ ತುಂಬಾ ಕಿರಿದಾಗಿದೆ. ಮತ್ಸ್ಯ ಸಂಪದ ಯೋಜನೆ ಪೂರ್ಣಗೊಂಡ ಮೇಲೆ ಐಸ್‌ ಲೋಡಿಂಗ್, ನೀರು ಲೋಡಿಂಗ್‌ನಂತಹ ಕೆಲಸಕ್ಕೆ ಅನುಕೂಲ. ಸ್ವಚ್ಛತೆ ಕಾಪಾಡಿಕೊಳ್ಳುವುದು ಸುಲಭವಾಗಬಹುದು’ ಎನ್ನುತ್ತಾರೆ ಬಂದರು ಇಲಾಖೆಯ ಅಧಿಕಾರಿಯೊಬ್ಬರು.

ಮೂರನೇ ಹಂತದ ಜೆಟ್ಟಿ ವಿಸ್ತರಣೆ ಉಳಿಕೆ ಕಾಮಗಾರಿಯು ₹49.50 ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ. ಇದರಿಂದ 300 ಮೀಟರ್‌ನಷ್ಟು ಹೆಚ್ಚುವರಿ ಜಾಗ ಬೋಟ್‌ ನಿಲುಗಡೆ ಲಭ್ಯವಾಗಬಹುದು. ಇದರಿಂದ ಮೀನುಗಾರಿಕಾ ಋತು ಪೂರ್ಣಗೊಂಡ ಮೇಲೆ ಬೋಟ್‌ಗಳ ನಿಲುಗಡೆಗೆ ಅನುಕೂಲ. ಆದರೆ, 1,500ಕ್ಕೂ ಹೆಚ್ಚು ಬೋಟ್‌ಗಳು ಇರುವ ಕಾರಣ, ಸಮಸ್ಯೆ ಪೂರ್ಣ ಪರಿಹಾರ ಆಗುವುದಿಲ್ಲ. ಭಾಗಶಃ ಅನುಕೂಲ ಆಗಬಹುದು ಎನ್ನುತ್ತಾರೆ ಬೋಟ್ ಮಾಲೀಕ ಅಶ್ರಫ್.

ಬೆಂಗ್ರೆ ಸಮೀಪ ₹65 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕೋಸ್ಟಲ್ ಬರ್ತ್ ಕಾಮಗಾರಿ ಅಂತಿಮ ಹಂತದಲ್ಲಿದೆ. ಡ್ರೆಜ್ಜಿಂಗ್ ಕೂಡ ಈ ಕಾಮಗಾರಿಯಲ್ಲಿ ಒಳಗೊಂಡಿದ್ದು, ಮಾರ್ಚ್‌ ವೇಳೆಗೆ ಪೂರ್ಣಗೊಳ್ಳಬಹುದು. ಕುಳಾಯಿಯಲ್ಲಿ ಜೆಟ್ಟಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಕೆಲವು ಬೋಟ್‌ಗಳಿಗೆ ಅಲ್ಲಿ ಲಂಗರು ಹಾಕಲು ಅವಕಾಶವಾಗಬಹುದು. ಇದರಿಂದ ಹಳೆ ಬಂದರು ದಕ್ಕೆಯ ಮೇಲಿನ ಒತ್ತಡ ಕಡಿಮೆಯಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಯೋಜನೆಯಲ್ಲಿ ಏನೆಲ್ಲ ಇದೆ?: ಹಳೆ ಬಂದರಿನ ಉತ್ತರ ದಕ್ಕೆಯಲ್ಲಿ ಲಕ್ಷದ್ವೀಪಕ್ಕೆ ಮೀಸಲಿರುವ ಜೆಟ್ಟಿಯ ಸ್ಥಳದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಸಾಗರಮಾಲಾ ಯೋಜನೆಯಡಿ ₹65 ಕೋಟಿ ಅನುದಾನ ದೊರೆತಿದೆ. 2022ರಲ್ಲಿ ಅನುಮೋದನೆಗೊಂಡ ಯೋಜನೆಗೆ, 2025 ಮೇನಲ್ಲಿ ಸಿಆರ್‌ಝಡ್ ಅನುಮತಿ ದೊರೆತಿದೆ. ಇನ್ನು ಪರಿಸರ ಇಲಾಖೆ ಅನುಮತಿ ಪಡೆದು ಕಾಮಗಾರಿ ಪ್ರಾರಂಭವಾಗಬೇಕಾಗಿದೆ. ಹೀಗಾಗಿ, ಕಾಮಗಾರಿ ಆರಂಭ ವಿಳಂಬವಾಗುವ ಸಾಧ್ಯತೆ ಇದೆ. ಪ್ರಾರಂಭವಾದ ಮೇಲೆ ಪೂರ್ಣಗೊಳಿಸಲು ಮಳೆಗಾಲ ಸೇರಿ 30 ತಿಂಗಳುಗಳ ಕಾಲಾವಕಾಶ ಇದೆ.

ಮಂಗಳೂರು ಭಾಗದ ಜನರು ಲಕ್ಷದ್ವೀಪಕ್ಕೆ ಪ್ರವಾಸ ಹೋಗುತ್ತಿದ್ದರೆ, ಅಲ್ಲಿನ ಜನರು ದೈನಂದಿನ ಅಗತ್ಯಗಳಿಗೆ ಮಂಗಳೂರನ್ನು ಅವಲಂಬಿಸಿದ್ದರು. ಕೋವಿಡ್–19ರ ನಂತರ ಇಲ್ಲಿನ ಬರುವ ಹಡಗುಗಳ ಸಂಖ್ಯೆ ಇಳಿಮುಖವಾಗಿದೆ. ಹೀಗಾಗಿ, ವಾಣಿಜ್ಯ ಚಟುವಟಿಕೆ ಹೆಚ್ಚಿಸಲು, ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಉದ್ದೇಶಿತ ಯೋಜನೆಯಡಿ ಸರಕು (ಕಾರ್ಗೊ) ನಿರ್ವಹಣೆಗೆ 303.60 ಮೀ ಉದ್ದದ ದಕ್ಕೆ ಹಾಗೂ ಪ್ರಯಾಣಿಕರ ನಿರ್ವಹಣೆಗೆ 76 ಮೀ ಉದ್ದದ ದಕ್ಕೆ ನಿರ್ಮಾಣವಾಗಲಿದೆ. ವಾರ್ಷಿಕ ಸರಕು ನಿರ್ವಹಣೆ ಸಾಮರ್ಥ್ಯವನ್ನು 5 ಲಕ್ಷ ಟನ್ ವರೆಗೆ ಹೆಚ್ಚಿಸುವ ಗುರಿಯನ್ನು ಯೋಜನೆ ಹೊಂದಿದೆ.

4, 5 ನೇ ಹಂತದ ಯೋಜನೆಗೆ ಅರ್ಜಿ: 18 ವರ್ಷಗಳ ಹಿಂದಿನ ಯೋಜನೆ ಕಾರಣಾಂತರಗಳಿಂದ ಈಗ ಅನುಷ್ಠಾನಗೊಳ್ಳುತ್ತಿದೆ. ಹಳೆ ಬಂದರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಎರಡು ವರ್ಷಗಳಲ್ಲಿ ಮಂಗಳೂರು ಬಂದರು ಕಣ್ತುಂಬ ನೋಡುವಂತೆ ಆಗಬಹುದು. ಆದರೆ, ಬಂದರು ಪರಿಪೂರ್ಣ ಅಭಿವೃದ್ಧಿ ಕಾಣಲು ಇನ್ನೂ ಶೇ 50ರಷ್ಟು ಕೆಲಸ ಆಗಬೇಕು. ಬೋಟ್‌ಗಳ ನಿಲುಗಡೆಗೆ ಜಾಗಬೇಕು. ಚಿಕ್ಕ ದೋಣಿಗಳಿಗೆ ಪ್ರತ್ಯೇಕ ಜೆಟ್ಟಿ ನಿರ್ಮಾಣವಾಗಬೇಕು. ಹಳೆ ಬಂದರಿನ 4, 5 ಮತ್ತು 6ನೇ ಹಂತದ ವಿಸ್ತರಣೆಗೆ ಈಗಲೇ ಯೋಜನೆ ರೂಪಿಸಿ, ಅರ್ಜಿ ಸಲ್ಲಿಸಬೇಕಾಗಿದೆ. ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಈಗಾಗಲೇ 4 ಮತ್ತು 5ನೇ ಹಂತದ ಕಾಮಗಾರಿಗಳು ನಡೆದಿವೆ ಎನ್ನುತ್ತಾರೆ ಟ್ರಾಲ್‌ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಚೇತನ್ ಬೆಂಗ್ರೆ. 

ಮಂಗಳೂರಿನ ದಕ್ಕೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ
ದಕ್ಕೆಯಲ್ಲಿ ನಿಲ್ಲಿಸಿರುವ ದೋಣಿಯನ್ನು ಶುಚಿಗೊಳಿಸಿದ ಕಾರ್ಮಿಕರು
ಲಕ್ಷದ್ವೀಪದಿಂದ ಬರುವ ಹಡುಗಗಳ ಸಂಖ್ಯೆ ಕಡಿಮೆಯಾಗಿದ್ದು ದೈನಂದಿನ ಅವಶ್ಯಕತೆಗೆ ಇಲ್ಲಿಗೆ ಬರುತ್ತಿದ್ದ ಅಲ್ಲಿನ ನಿವಾಸಿಗಳು ಈಗ ಕೊಚ್ಚಿಯನ್ನು ಅವಲಂಬಿಸಿದ್ದಾರೆ. ನದಿಯಲ್ಲಿ ತುಂಬಿರುವ ಹೂಳಿನಿಂದ ಇಲ್ಲಿ ದೊಡ್ಡ ಹಡಗುಗಳು ಬರಲು ಸಾಧ್ಯವಾಗುತ್ತಿಲ್ಲ.
ಎ.ಕೆ. ಉಸ್ಮಾನ್ ಸ್ಥಳೀಯ ಮೀನುಗಾರ

ಡ್ರೆಜ್ಜಿಂಗ್: ಒಂಬತ್ತು ಬಾರಿ ಟೆಂಡರ್‌

ನದಿಯಲ್ಲಿ ಹೂಳು ತುಂಬಿರುವ ಕಾರಣ ಮೀನುಗಾರಿಕೆ ಹಾಗೂ ವಾಣಿಜ್ಯ ಹಡಗುಗಳು ದಕ್ಕೆಗೆ ಬರಲು ಸಮಸ್ಯೆಯಾಗುತ್ತಿದೆ. ಮೀನುಗಾರರ ಬೇಡಿಕೆಯಂತೆ ಸಾಗರಮಾಲಾ ಯೋಜನೆಯಡಿ ₹35.5 ಕೋಟಿ ವೆಚ್ಚದಲ್ಲಿ ಡ್ರೆಜ್ಜಿಂಗ್ ಕಾಮಗಾರಿಗೆ 2018–19ರಲ್ಲಿ ಅನುಮೋದನೆ ದೊರೆತಿದೆ. ಈ ಕಾಮಗಾರಿ ನಡೆದರೆ ವಾಣಿಜ್ಯ ಬಂದರಿನ ಸಮಸ್ಯೆಗಳು ಪರಿಹಾರ ಕಾಣುತ್ತವೆ. ಆದರೆ ಈ ಕಾಮಗಾರಿಗೆ ಈವರೆಗೆ ಒಂಬತ್ತು ಬಾರಿ ಟೆಂಡರ್‌ ಕರೆದರೂ ಟೆಂಡರ್‌ದಾರರು ಮುಂದೆ ಬರುತ್ತಿಲ್ಲ ಎಂಬುದು ಅಧಿಕಾರಿಗಳು ನೀಡುವ ಮಾಹಿತಿ. ಅಳಿವೆಬಾಗಿಲಿನಿಂದ (ನೇತ್ರಾವತಿ ಮತ್ತು ಫಲ್ಗುಣಿ ನದಿಗಳು ಸಮುದ್ರ ಸೇರುವ ಸ್ಥಳ) ಬಂದರಿನವರೆಗೆ ಅಂದಾಜು 3.5 ಕಿ.ಮೀ ವ್ಯಾಪ್ತಿಯಲ್ಲಿ ಹೂಳೆತ್ತುವ (ಡ್ರೆಜ್ಜಿಂಗ್) ಕಾಮಗಾರಿ ಇದಾಗಿದೆ. ರಾಷ್ಟ್ರ ಮಟ್ಟದಲ್ಲಿ ಇದಕ್ಕೆ ಟೆಂಡರ್ ಕರೆಯಬೇಕಾಗುತ್ತದೆ. ದೊಡ್ಡ ಮಟ್ಟದ ಡ್ರೆಜ್ಜಿಂಗ್ ಕಾಮಗಾರಿ ಟೆಂಡರ್‌ ಪಡೆಯುವ ಗುತ್ತಿಗೆದಾರರ ಸಂಖ್ಯೆ ಕಡಿಮೆ ಇದ್ದು ಹಾಲಿ ಇರುವ ಗುತ್ತಿಗೆದಾರರು ಈಗಾಗಲೇ ದೇಶದ ಬೇರೆ ಬೇರೆ ಬಂದರುಗಳಲ್ಲಿ ಅಧಿಕ ಮೊತ್ತದ ಕಾಮಗಾರಿ ನಡೆಸುತ್ತಿದ್ದಾರೆ. ಹೀಗಾಗಿ ಈ ಕಾಮಗಾರಿಗೆ ಟೆಂಡರ್ ಹಾಕುವವರು ಇಲ್ಲವಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ‘ಅಲ್ಲದೆ ಮುಂಬೈನಲ್ಲಿ ಒಂದು ಕ್ಯೂಬಿಕ್ ಮೀಟರ್ ಹೂಳೆತ್ತಲು ₹350 ದರ ಇದೆ. ಕೇರಳದಲ್ಲೂ ಇದೇ ದರವಿದೆ. ಕರ್ನಾಟಕದಲ್ಲಿ ಒಂದು ಕ್ಯೂಬಿಕ್ ಮೀಟರ್ ಹೂಳೆತ್ತಲು ನಿಗದಿಪಡಿಸಿರುವ ದರ ₹234 ಮಾತ್ರ. ಮಂಗಳೂರಿನ ನವಮಂಗಳೂರು ಬಂದರು ಪ್ರಾಧಿಕಾರದಲ್ಲೂ ಹೆಚ್ಚಿನ ದರವಿದೆ. ಗುತ್ತಿಗೆದಾರರು ನಿರಾಸಕ್ತರಾಗಲು ಇದೂ ಕಾರಣವಾಗಿರಬಹುದು’ ಎಂದು ಅವರು ಮಾಹಿತಿ ನೀಡಿದರು.

ಕಾಮಗಾರಿ ವಿಳಂಬ?

ಸಾರ್ವಜನಿಕ ಅಭಿಪ್ರಾಯ ಆಲಿಕೆ ಸಭೆಯ ವರದಿ ಸಲ್ಲಿಕೆಯೊಂದಿಗೆ ಪರಿಸರ ಇಲಾಖೆ ಅನುಮತಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ರಾಜ್ಯ ಮಟ್ಟದ ಪ‍ರಿಸರ ಮೌಲ್ಯಮಾಪನ ಸಮಿತಿ ಸಭೆಯಲ್ಲಿ ಈ ವರದಿ ಚರ್ಚೆಯಾಗಿ ಇತ್ಯರ್ಥಗೊಳ್ಳಬೇಕು. ಸಿಆರ್‌ಝಡ್ ಈಗಾಗಲೇ ಅನುಮತಿ ನೀಡಿದರೂ ನಿಯಮದಂತೆ ಸಿಆರ್‌ಝಡ್ ಮತ್ತು ಪರಿಸರ ಇಲಾಖೆ ಜಂಟಿಯಾಗಿ ಅನುಮತಿ ನೀಡಬೇಕಾಗುತ್ತದೆ. ಹೀಗಾಗಿ ಲಕ್ಷದ್ವೀಪಕ್ಕೆ ಮೀಸಲಿರುವ ಜೆಟ್ಟಿ ಅಭಿವೃದ್ಧಿ ಯೋಜನೆ ಕಾಮಗಾರಿ ಪ್ರಾರಂಭವಾಗಲು ಒಂದೆರಡು ತಿಂಗಳು ಆಗಬಹುದು ಎಂದು ಬಂದರು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

ಕಟರ್ ಸಕ್ಷನ್ ಡ್ರೆಜ್ಜರ್ ಖರೀದಿಸಲಿ

ಕರ್ನಾಟಕ ಕರಾವಳಿಯ ಹೂಳು ನಿರ್ವಹಣೆಗೆ ಕಟರ್ ಸಕ್ಷನ್ ಡ್ರೆಜ್ಜರ್ ಯಂತ್ರದ ಅಗತ್ಯವಿದೆ. ಇದರಿಂದ ಇಡೀ ರಾಜ್ಯದ ಕರಾವಳಿಯ ಯಾವುದೇ ಪ್ರದೇಶದ ಹೂಳೆತ್ತಲು ಇದರಿಂದ ಅನುಕೂಲವಾಗುತ್ತದೆ. ಮೀನುಗಾರಿಕಾ ಇಲಾಖೆ ಮೂಲಕ ಯಂತ್ರ ಖರೀದಿಸಿದರೆ ಉಪ ಗುತ್ತಿಗೆ ನೀಡುವ ಕ್ರಮವೂ ತಪ್ಪುತ್ತದೆ. ಯಂತ್ರ ಖರೀದಿಸಿ ಅದರ ನಿರ್ವಹಣೆಯನ್ನು ಯಾವುದಾದರೂ ಮೀನುಗಾರಿಕಾ ಸಂಘಗಳಿಗೆ ನೀಡಬಹುದು ಎಂದು ಟ್ರಾಲ್‌ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಚೇತನ್ ಬೆಂಗ್ರೆ ಸಲಹೆ ಮಾಡಿದರು.

‘ಶೇ 50ರಷ್ಟು ಬೇಡಿಕೆ ಪೂರೈಕೆ’

ಪ್ರಸ್ತುತ 250 ಮೀಟರ್ ಜೆಟ್ಟಿಯಲ್ಲಿ ಬೋಟ್‌ಗಳ ನಿಲುಗಡೆ ಮಾಡಲಾಗುತ್ತಿದೆ. ಮಂಗಳೂರಿನಲ್ಲಿ ಅನುಮತಿ ಪಡೆದಿರುವ ಸುಮಾರು 1300 ಬೋಟ್‌ಗಳು ಇವೆ. ಮೂರನೇ ಹಂತದ ವಿಸ್ತರಣೆಯಲ್ಲಿ 700 ಮೀಟರ್‌ನಷ್ಟು ಉದ್ದದ ಜೆಟ್ಟಿ ಲಭ್ಯವಾಗಬಹುದು. ಇದರಿಂದ ಶೇ 50ರಷ್ಟು ಬೋಟ್ ನಿಲುಗಡೆಗೆ ಮಾತ್ರ ಅನುಕೂಲ ಆಗಬಹುದು. 3ನೇ ಹಂತದ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆ ಹಂತ ಹಂತವಾಗಿ ಬಿಟ್ಟುಕೊಡಲು ವಿನಂತಿಸಲಾಗಿದೆ ಎಂದು ಮೀನುಗಾರ ಮುಖಂಡ ಮೋಹನ್ ಬೆಂಗ್ರೆ ಹೇಳಿದರು.

ಲಕ್ಷದ್ವೀಪಕ್ಕೆ ಏನೇನು ಸಾಗಣೆ ಮಂಗಳೂರಿನಿಂದ ರವಾನೆಯಾಗುವ ಪ್ರಮುಖ ವಸ್ತುಗಳು: ಅಕ್ಕಿ ಎಂ ಸ್ಯಾಂಡ್ ಕಟ್ಟಡ ನಿರ್ಮಾಣ ಸಾಮಗ್ರಿಗಳು ಜಲ್ಲಿ ತರಕಾರಿ ಸಿಮೆಂಟ್. ಆಮದಾಗುವ ಪ್ರಮುಖ ವಸ್ತುಗಳು: ಒಣ ಕೊಬ್ಬರಿ ಒಣಮೀನು

‘ಜಂಟಿ ಅನುಮತಿ ಅಗತ್ಯ

ಸಾರ್ವಜನಿಕ ಆಲಿಕೆ ಸಭೆಯ ವರದಿಯನ್ನು ಜಿಲ್ಲಾಧಿಕಾರಿ ಮಾನ್ಯತೆಯೊಂದಿಗೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಲ್ಲಿಸಲಾಗುತ್ತದೆ. ನಂತರ ಪರಿಸರ ಮೌಲ್ಯಮಾಪನ ಸಮಿತಿ ಸಭೆಯಲ್ಲಿ ಅನುಮೋದನೆಗೊಂಡ ಮೇಲೆ ಸಿಆರ್‌ಝಡ್ ಮತ್ತು ಪರಿಸರ ಇಲಾಖೆ ಜಂಟಿಯಾಗಿ ಯೋಜನೆಗೆ ಅನುಮತಿ ನೀಡುತ್ತದೆ. ಮುಂದಿನ ಹಂತದಲ್ಲಿ ಕೇಂದ್ರ ಪರಿಸರ ಸಚಿವಾಲಯಕ್ಕೆ ವರದಿ ಸಲ್ಲಿಸಿ ಅನುಮತಿ ಪಡೆದ ಮೇಲೆ ಕಾಮಗಾರಿ ಆರಂಭಕ್ಕೆ ಹಸಿರು ನಿಶಾನೆ ದೊರೆಯುತ್ತದೆ ಎಂದು ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಸನ್ನ ಕುಮಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಲಕ್ಷದ್ವೀಪಕ್ಕೆ ರಫ್ತು–ಆಮದು ವರ್ಷ;ರಫ್ತು;ಆಮದು;ಒಟ್ಟು (ಟನ್‌ಗಳಲ್ಲಿ) 2020–21;35062;393;35455 2021–22;54958;835;55793 2022–23;48368;643;49011 2023–24;48262;375;48637 2024–25;55505;759;56264

ಡ್ರೆಜ್ಜಿಂಗ್: ಭಿನ್ನಾಭಿಪ್ರಾಯ 

‘ನದಿಯಲ್ಲಿ ಡ್ರೆಜ್ಜಿಂಗ್ ಮಾಡುವುದಾದರೆ ಕಟರ್ ಸಕ್ಷನ್ ಡ್ರೆಜ್ಜಿಂಗ್ ಅನ್ನೇ ಮಾಡಬೇಕು. ಅದು ಸಮತಟ್ಟಾಗಿ ಹೂಳನ್ನು ಎತ್ತುತ್ತದೆ. ಗ್ರ್ಯಾಬ್ ಮಾದರಿಯ ಡ್ರೆಜ್ಜಿಂಗ್ ಮಾಡಲು ನಮ್ಮ ವಿರೋಧವಿದೆ’ ಎಂಬುದು ಮೀನುಗಾರಿಕಾ ಮುಖಂಡರ ಹೇಳಿಕೆ. ‘ಮೀನುಗಾರಿಕಾ ಬೋಟ್‌ಗಳ ಸಂಚಾರಕ್ಕೆ –3 ಅಡಿ ಆಳ ನೀರಿದ್ದರೆ ಸಾಕಾಗುತ್ತದೆ. –7 ಅಡಿ ಡ್ರೆಜ್ಜಿಂಗ್ ಮಾಡುವುದರಿಂದ ಯಾವುದೇ ಮಾದರಿಯಲ್ಲಿ ಡ್ರೆಜ್ಜಿಂಗ್ ಮಾಡಿದರೂ ಮೀನುಗಾರಿಕಾ ಬೋಟ್‌ಗಳಿಗೆ ಸಮಸ್ಯೆಯಾಗದು. 5 ಅಡಿ ಆಳ ನೀರಿರುವಲ್ಲಿ ಕಾರ್ಗೊ ಹಡುಗು ಸಂಚರಿಸಬಹುದು’ ಎಂಬುದು ಅಧಿಕಾರಿಗಳ ವಾದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.