ADVERTISEMENT

ಪ್ರವೀಣ್ ಹತ್ಯೆ ಕುರಿತ ಪ‍್ರಮುಖ ಮಾಹಿತಿ ಲಭ್ಯ: ಆಲೋಕ್ ಕುಮಾರ್

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 13:45 IST
Last Updated 4 ಆಗಸ್ಟ್ 2022, 13:45 IST
ಎಡಿಜಿಪಿ ಅಲೋಕ್ ಕುಮಾರ್ ಅವರು ಗುರುವಾರ ಬೆಳ್ಳಾರೆ ಠಾಣೆಗೆ ಭೇಟಿ ನೀಡಿದರು
ಎಡಿಜಿಪಿ ಅಲೋಕ್ ಕುಮಾರ್ ಅವರು ಗುರುವಾರ ಬೆಳ್ಳಾರೆ ಠಾಣೆಗೆ ಭೇಟಿ ನೀಡಿದರು   

ಸುಳ್ಯ: ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿ ಪ್ರಮುಖ ಮಾಹಿತಿಗಳು ಲಭ್ಯವಾಗಿದ್ದು ಅಪರಾಧಿಗಳನ್ನು ಸದ್ಯದಲ್ಲೇ ಬಂಧಿಸಲಾಗುವುದು ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.

ಗುರುವಾರ ಬೆಳ್ಳಾರೆ ಪೊಲೀಸ್ ಠಾಣೆಗೆ ಭೇಟಿ ನೀಡಿ ಪ್ರವೀಣ್ ಹತ್ಯೆ ಪ್ರಕರಣದ ತನಿಖೆ ಬಗ್ಗೆ ಮಾಹಿತಿ ಪಡೆದ ನಂತರ ಅವರು ಪರ್ತರ್ತರ ಜೊತೆ ಮಾತನಾಡಿದರು.

ಮೂವರ ವಿಚಾರಣೆ ನಡೆಯುತ್ತಿದೆ. ಪ್ರಕರಣದಲ್ಲಿ ಯಾರು ಶಾಮೀಲಾಗಿದ್ದಾರೆ ಮತ್ತು ಸಂಚು ರೂಪಿಸಿದವರು ಯಾರು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಎಲ್ಲರನ್ನೂ ಬಂಧಿಸಲಾಗುವುದು. ಅಮಾಯಕರಿಗೆ ಪೊಲೀಸರು ತೊಂದರೆ ಕೊಡುವುದಿಲ್ಲ ಎಂದು ಅವರು ಹೇಳಿದರು.

ADVERTISEMENT

ಕೊಲೆ ಮಾಡಿದವರನ್ನು ಹಿಡಿಯುವುದರ ಜೊತೆಯಲ್ಲಿ ಅದಕ್ಕೆ ಪ್ರಚೋದನೆ ನೀಡಿದವರು ಯಾರು ಎಂಬುದನ್ನು ಕೂಡ ಪತ್ತೆ ಮಾಡಲಾಗುವುದು. ಎನ್ಐಎ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಯುತ್ತಿದ್ದು ಅವರಿಗೆ ಪ್ರಕರಣವನ್ನು ಯಾವಾಗ ಹಸ್ತಾಂತರ ಮಾಡಬೇಕು ಎನ್ನುವುದರ ಕುರಿತ ಚರ್ಚೆಯೂ ನಡೆಯುತ್ತಿದೆ. ತನಿಖೆ ಎನ್ಐಎ ಮಾಡಿದರೂ ಪ್ರಮುಖ ಆರೋಪಿಯನ್ನು ನಾವೇ ಬಂಧಿಸುತ್ತೇವೆ ಎಂದು ಅವರು ತಿಳಿಸಿದರು.

ಕೇರಳ ಗಡಿಭಾಗದಲ್ಲಿ ಒಟ್ಟು 18 ಚೆಕ್ ಪೋಸ್ಟ್ ಹಾಕಲಾಗಿದ್ದು ಕೆಎಸ್‌ಆರ್‌ಪಿ ಪೊಲೀಸರನ್ನು ನಿಯೋಜಿಸಲಾಗಿದೆ. ಗಡಿ ಭಾಗದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಅಪರಾಧಿಗಳು ಸೆರೆ ಸಿಕ್ಕಿದ ನಂತರವೂ ಈ ವ್ಯವಸ್ಥೆ ಕನಿಷ್ಠ ಒಂದು ವರ್ಷ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.