ADVERTISEMENT

ಮಂಗಳೂರು | ಕದ್ರಿ ದೇವಸ್ಥಾನ ಶಾರಿಕ್‌ ಗುರಿಯಾಗಿತ್ತು: ಎನ್‌ಐಎ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 7:06 IST
Last Updated 19 ಮಾರ್ಚ್ 2023, 7:06 IST
ಮೊಹಮ್ಮದ್‌ ಶಾರಿಕ್‌
ಮೊಹಮ್ಮದ್‌ ಶಾರಿಕ್‌   

ಮಂಗಳೂರು: ನಗರದಲ್ಲಿ 2022ರ ನವೆಂಬರ್‌ 19ರಂದು ರಿಕ್ಷಾದಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟಗೊಂಡ ಪ್ರಕರಣದ ಆರೋಪಿ ಮೊಹಮ್ಮದ್‌ ಶಾರಿಕ್‌, ‘ನಗರದ ಕದ್ರಿ ದೇವಸ್ಥಾನವನ್ನು ಗುರಿಯಾಗಿಸಿಕೊಂಡು ಬಾಂಬ್‌ ಸ್ಫೋಟಿಸಲು ಸಿದ್ಧತೆ ನಡೆಸಿದ್ದ’ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹೇಳಿದೆ.

ಐಎಸ್ ಸಂಘಟನೆ ಜೊತೆ ನಂಟು ಮತ್ತು ರಾಷ್ಟ್ರಧ್ವಜ ಸುಟ್ಟ ಪ್ರಕರಣ ಸೇರಿದಂತೆ ವಿವಿಧ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿರುವ ಆರೋಪಿಗಳಾದ ಶಿವಮೊಗ್ಗದ ಮಾಝ್‌ ಮುನೀರ್‌ ಅಹಮದ್‌ (23) ಮತ್ತು ಸಯ್ಯದ್‌ ಯಾಸಿನ್‌ (22) ಎಂಬುವವರ ವಿರುದ್ಧ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪಪಟ್ಟಿಗೆ ಸಂಬಂಧಿಸಿದಂತೆ ಎನ್‌ಐಎ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಅದರಲ್ಲಿ ಈ ಅಂಶಗಳನ್ನು ಉಲ್ಲೇಖಿಸಿದೆ.

‘ಐಎಸ್‌ನ ದೊಡ್ಡ ಸಂಚಿನ ಭಾಗವಾಗಿ ಆರೋಪಿ ಮೊಹಮ್ಮದ್‌ ಶಾರಿಕ್‌ ಮಂಗಳೂರಿನ ಕದ್ರಿ ದೇವಸ್ಥಾನದಲ್ಲಿ 2022ರ ನ.19ರಂದು ಸುಧಾರಿತ ಸ್ಫೋಟಕ ಸಾಧನವನ್ನು(ಕುಕ್ಕರ್‌ ಬಾಂಬ್‌) ಅಳವಡಿಸಲು ಯೋಜಿಸಿದ್ದ. ಶಾರಿಕ್‌ ಸ್ಫೋಟಕ ಸಾಧನವನ್ನು
ಅಳವಡಿಸಲು ಕೊಂಡೊಯ್ಯುತ್ತಿದ್ದಾಗ ಟೈಮರ್‌ ಕೈಕೊಟ್ಟಿದ್ದರಿಂದ ಅದು ಮೊದಲೇ ಸ್ಫೋಟಗೊಂಡು, ದುರಂತ ತಪ್ಪಿತ್ತು. ಈ
ಪ್ರಕರಣದಲ್ಲಿ ಇನ್ನೂ ಆರು ಆರೋಪಿಗಳ ವಿರುದ್ಧದ ತನಿಖೆ ಮುಂದುವರಿದಿದೆ’ ಎಂಬ ಅಂಶ ಎನ್‌ಐಎ ಶುಕ್ರವಾರ ನವದೆಹಲಿಯಲ್ಲಿ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.