ಉಜಿರೆ: ಮನುಕುಲದ ವಾಸ್ತವ್ಯಕ್ಕೆ ಪೂರಕ ವಾತಾವರಣ ಹೊಂದಿರುವ ಏಕೈಕ ನೆಲೆಯಾದ ಭೂಮಿಯ ಸುಸ್ಥಿರತೆಯನ್ನು ಕಾಪಾಡುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದು ಜರ್ಮನಿಯ ಹಿರಿಯ ಸಂಶೋಧಕಿ ಸಹನಾ ರೊಝಲರ್ ಹೇಳಿದರು.
ಉಜಿರೆಯ ಎಸ್‌ಡಿಎಂ ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ರಸಾಯನಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗದ ವತಿಯಿಂದ ಶುಕ್ರವಾರ ನಡೆದ ಸುಸ್ಥಿರ ಸಮಾಜಕ್ಕಾಗಿ ರಸಾಯನಶಾಸ್ತ್ರದಲ್ಲಿ ಸಂಶೋಧನೆ ಎಂಬ ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಪ್ರಗತಿ ಹೊಂದಿರುವ ಹಾಗೂ ಹೊಂದುತ್ತಿರುವ ದೇಶಗಳಲ್ಲಿ ಕೂಡ ಪರಿಸರ ಸಂರಕ್ಷಣೆಯ ಸವಾಲು ಎದುರಾಗುತ್ತಿದೆ. ಪ್ಲಾಸ್ಟಿಕ್ ಸೇರಿದಂತೆ ಹಾನಿಕಾರಕ ತ್ಯಾಜ್ಯಗಳನ್ನು ಎಸೆಯುವಂತಹ ಪರಿಸರ ವಿರೋಧಿ ಚಟುವಟಿಕೆಗಳು ಜಾಗತಿಕ ಮಟ್ಟದಲ್ಲಿ ಹೆಚ್ಚಾಗುತ್ತಿವೆ. ಭೂಮಿಯ ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ ಹಾಗೂ ಸುಸ್ಥಿರತೆ ಕಾಪಾಡುವ ಬಗ್ಗೆ ಎಲ್ಲರೂ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಪಿ.ವಿಶ್ವನಾಥ ಮಾತನಾಡಿ, ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದವರಿಗೆ ಸಂಸೋಧನಾ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳಿದ್ದು, ಅದರ ಸದುಪಯೋಗ ಪಡೆದು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.
ಮಂಗಳೂರು ವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಶಿವರಾಮ ಹೊಳ್ಳ. ಬೆಂಗಳೂರಿನ ಹಿರಿಯ ಉದ್ಯಮಿ ಡಾ.ಸುಮೇಶ್ ಈಶ್ವರನ್ ಮಾತನಾಡಿದರು. ವಿಚಾರಸಂಕಿರಣದ ಸಂಘಟನಾ ಕಾರ್ಯದರ್ಶಿ ಪ್ರೊ.ಶಶಿಪ್ರಭಾ ಉಪಸ್ಥಿತರಿದ್ದರು.
ಡಾ.ನೆಫಿಸತ್ ಸ್ವಾಗತಿಸಿದರು.
ಅಧ್ಯಯನ ಕೇಂದ್ರದ ಡೀನ್ ಪ್ರೊ.ಸೌಮ್ಯ ಬಿ.ಪಿ. ಧನ್ಯವಾದವಿತ್ತರು. ಉತ್ತಮ ಸಂಶೋಧನಾ ಪ್ರಬಂಧ ಮತ್ತು ಪೋಸ್ಟರ್ ಸಾದರಪಡಿಸಿದವರಿಗೆ ಬಹುಮಾನ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.