ADVERTISEMENT

ಮಂಗಳೂರು: ನವದೆಹಲಿಗೆ ಮರಳಿದ ರಾಷ್ಟ್ರಪತಿ

ಮಂಗಳೂರಿನಲ್ಲಿ ವಾಸ್ತವ್ಯ ಮಾಡಿದ ರಾಮನಾಥ ಕೋವಿಂದ್‌

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 7:47 IST
Last Updated 9 ಅಕ್ಟೋಬರ್ 2021, 7:47 IST
ರಾಷ್ಟ್ರಪತಿ ರಾಮನಾಥ ಕೋವಿಂದ್‌, ಅವರ ಪತ್ನಿ, ಪುತ್ರಿ ವಿಶೇಷ ವಿಮಾನದಲ್ಲಿ ಮಂಗಳೂರಿನಿಂದ ನವದೆಹಲಿಗೆ ತೆರಳಿದರು.
ರಾಷ್ಟ್ರಪತಿ ರಾಮನಾಥ ಕೋವಿಂದ್‌, ಅವರ ಪತ್ನಿ, ಪುತ್ರಿ ವಿಶೇಷ ವಿಮಾನದಲ್ಲಿ ಮಂಗಳೂರಿನಿಂದ ನವದೆಹಲಿಗೆ ತೆರಳಿದರು.   

ಮಂಗಳೂರು: ಎರಡು ದಿನ ನಗರದಲ್ಲಿ ವಾಸ್ತವ್ಯ ಮಾಡಿದ್ದ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು, ಶುಕ್ರವಾರ ಸಂಜೆ ಶೃಂಗೇರಿಯಿಂದ ಮರಳಿದ್ದು, ಮಂಗಳೂರಿನಿಂದ ನವದೆಹಲಿಗೆ ಪ್ರಯಾಣ ಬೆಳೆಸಿದರು.

ಗುರುವಾರ ರಾತ್ರಿ ನಗರದ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಮಾಡಿದ್ದ ರಾಷ್ಟ್ರಪತಿಗಳಿಗೆ, ಕರಾವಳಿಯ ತಿನಿಸುಗಳು ಸೇರಿದಂತೆ ವಿವಿಧ ಬಗೆಯ ಭೋಜನಗಳನ್ನು ಸಿದ್ಧಪಡಿಸಲಾಗಿತ್ತು.

ಶುಕ್ರವಾರ ಬೆಳಿಗ್ಗೆ ನಗರದ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್‌ ಮೂಲಕ ಶೃಂಗೇರಿಗೆ ತೆರಳಿದ್ದ ರಾಷ್ಟ್ರಪತಿ ರಾಮನಾಥ ಕೋವಿಂದ್‌, ಸಂಜೆ ಶೃಂಗೇರಿಯಿಂದ ಹೆಲಿಕಾಪ್ಟರ್‌ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಮರಳಿದರು. ಅಲ್ಲಿಂದಲೇ ವಾಯುಪಡೆಯ ವಿಶೇಷ ವಿಮಾನದಲ್ಲಿ ನವದೆಹಲಿಗೆ ಪ್ರಯಾಣಿಸಿದರು.

ADVERTISEMENT

ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು. ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಎಡಿಜಿಪಿ ಜಿತೇಂದ್ರ, ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಉಪ ವಿಭಾಗಾಧಿಕಾರಿ ಮದನ್ ಮೋಹನ್, ರಾಷ್ಟ್ರಪತಿ ಭವನದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಇತರರು ಇದ್ದರು. ಇದೇ ಸಂದರ್ಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಷ್ಟ್ರಪತಿಗೆ ಪುಸ್ತಕವೊಂದನ್ನು ಕಾಣಿಕೆಯಾಗಿ ನೀಡಿದರು.

ಕರಾವಳಿಯ ಖಾದ್ಯ: ಕದ್ರಿಹಿಲ್ಸ್‌ನ ನೂತನ ಪ್ರವಾಸಿ ಮಂದಿರದ ಸೂಟ್‌ ನಂ. 1, 2 ಮತ್ತು 3 ಅನ್ನು ರಾಷ್ಟ್ರಪತಿ ಹಾಗೂ ಅವರ ಕುಟುಂಬದವರ ವಾಸ್ತವ್ಯಕ್ಕೆ ಅಣಿಗೊಳಿಸಲಾಗಿತ್ತು.

ಗುರುವಾರ ರಾತ್ರಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋಟ್‌, ರಾಷ್ಟ್ರಪತಿ ಹಾಗೂ ಅವರ ಪತ್ನಿ, ಪುತ್ರಿಗೆ ಕರಾವಳಿ ಭೋಜನ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿಯ ಭೋಜನ, ಊಟೋಪಚಾರ ವ್ಯವಸ್ಥೆಗಾಗಿ ನವದೆಹಲಿಯಿಂದ ಬಂದಿದ್ದ ಬಾಣಸಿಗನ ನೇತೃತ್ವದಲ್ಲಿ ಖಾದ್ಯಗಳನ್ನು ಸಿದ್ಧಪಡಿಸಲಾಗಿತ್ತು.

ನಗರದ ಹೋಟೆಲ್‌ ಓಷಿಯನ್‌ ಪರ್ಲ್‌ನ 15ಕ್ಕೂ ಹೆಚ್ಚು ಮಂದಿ ಅಡುಗೆ ಸಿಬ್ಬಂದಿ ಸಹಕರಿಸಿದರು. ಗ್ರೀನ್‌ ಸಲಾಡ್‌, ಪರ್ವಾಲ್‌ ಸಬ್ಜಿ, ಹಾಗಲಕಾಯಿ ಪಲ್ಯ, ಬೇಳೆಸಾರು, ಮೊಸರು, ದಾಲ್‌, ರೋಟಿ, ಅನ್ನವನ್ನು ಸಿದ್ಧಪಡಿಸಲಾಗಿತ್ತು.

ರಾಷ್ಟ್ರಪತಿ ಶುಕ್ರವಾರ ಬೆಳಿಗ್ಗೆ ಉಪಾಹಾರ ಸ್ವೀಕರಿಸಿ, 10.30ಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. 10.55ಕ್ಕೆ ವಾಯುಸೇನೆಯ ಹೆಲಿಕಾಪ್ಟರ್‌ ಮೂಲಕ ಶೃಂಗೇರಿಗೆ ತೆರಳಿದ್ದರು. ಉಪಾಹಾರಕ್ಕೆ ದಕ್ಷಿಣ ಭಾರತದ ಖಾದ್ಯವಾದ ಇಡ್ಲಿ, ಉತ್ತಪ್ಪ, ಚಟ್ನಿ, ಸಾಂಬಾರು, ಹಣ್ಣು ಹಂಪಲು ವ್ಯವಸ್ಥೆಗೊಳಿಸಲಾಗಿತ್ತು. ರಾಷ್ಟ್ರಪತಿಯವರ ಪತ್ನಿ ಸವಿತಾ ಕೋವಿಂದ್‌ ಅವರಿಗೂ ಕರಾವಳಿಯ ಜನಪ್ರಿಯ ತಿಂಡಿಗಳಾದ ನೀರುದೋಸೆ, ಸಂಜೀರ, ಬಾಳೆ ಹಣ್ಣು ಪೋಡಿ, ಮದ್ದೂರು ವಡೆ ಸೇರಿದಂತೆ ಪ್ರತ್ಯೇಕ ಮೆನು ವ್ಯವಸ್ಥೆಗೊಳಿಸಲಾಗಿತ್ತು.

ವಾಸ್ತವ್ಯ ಮಾಡಿದ ಮೊದಲ ರಾಷ್ಟ್ರಪತಿ
ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಗುರುವಾರ ಸಂಜೆ ನಗರದಲ್ಲಿ ವಾಸ್ತವ್ಯ ಮಾಡುವ ಮೂಲಕ ಪ್ರಥಮ ಬಾರಿಗೆ ರಾಷ್ಟ್ರಪತಿಗಳು ಮಂಗಳೂರಿನಲ್ಲಿ ವಾಸ್ತವ್ಯ ಮಾಡಿದಂತಾಗಿದೆ.

ಈ ಹಿಂದೆ ರಾಷ್ಟ್ರಪತಿಗಳು ಮಂಗಳೂರಿಗೆ ಭೇಟಿ ನೀಡಿದ್ದರೂ, ವಾಸ್ತವ್ಯ ಮಾಡಿರಲಿಲ್ಲ. ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ರಾಷ್ಟ್ರಪತಿಯಾಗಿದ್ದ ವೇಳೆ ಮಂಗಳೂರಿಗೆ ಭೇಟಿ ನೀಡಿದ್ದರು. ಆದರೆ ಅವರು ಮಂಗಳೂರಿನಲ್ಲಿ ವಾಸ್ತವ್ಯ ಮಾಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.