ADVERTISEMENT

ಪಿಎಫ್‌ಐ ನಂಟು: ಬಂಧಿತ 14 ಮಂದಿಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2022, 13:42 IST
Last Updated 1 ಅಕ್ಟೋಬರ್ 2022, 13:42 IST
   

ಮಂಗಳೂರು: ಶಾಂತಿ ಸುವ್ಯವಸ್ಥೆ ಕಾಪಾಡುವ ಮುನ್ನೆಚ್ಚರಿಕಾ ಕ್ರಮವಾಗಿ ಬಂಧನಕ್ಕೊಳಗಾಗಿದ್ದ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು ಜಾಮೀನಿನ ಮೇಲೆ ಶನಿವಾರ ಬಿಡುಗಡೆಯಾಗಿದ್ದಾರೆ.

ಪಿಎಫ್‌ಐನ ‘ಮಂಗಳೂರು ಜಿಲ್ಲಾ ಘಟಕ’ದ ಅಧ್ಯಕ್ಷ ಬಂಟ್ವಾಳ ಇಜಾಜ್‌ ಅಹಮದ್‌ ಹಾಗೂ ‘ಪುತ್ತೂರು ಜಿಲ್ಲಾ ಘಟಕ’ದ ಅಧ್ಯಕ್ಷ ಜಾಬೀರ್ ಅರಿಯಡ್ಕ ಸೇರಿದಂತೆ ಒಟ್ಟು 14 ಮಂದಿಯನ್ನು ಪೊಲೀಸರು ಭಾರತೀಯ ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್‌ 107 ಹಾಗೂ 151ರ ಅಡಿ ಮಂಗಳವಾರ ಬಂಧಿಸಿ ತಾಲ್ಲೂಕು ದಂಡಾಧಿಕಾರಿ ಮುಂದೆ ಹಾಜರುಪಡಿಸಿದ್ದರು. ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.

ಮಂಗಳೂರು ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿಪಾಂಡೇಶ್ವರದ ಮಹಮ್ಮದ್‌ ಶರೀಫ್‌, ಕುದ್ರೋಳಿಯ ಮುಝೈರ್‌ ಮತ್ತು ಮಹಮ್ಮದ್ ನೌಫಾಲ್‌ ಹಂಝ, ತಲಪಾಡಿ ಕೆ.ಸಿ.ನಗರದ ಶಬ್ಬೀರ್‌ ಅಹಮದ್‌, ಉಳ್ಳಾಲ ಮಾಸ್ತಿಕಟ್ಟೆಯ ನವಾಜ್‌ ಉಳ್ಳಾಲ್‌, ಉಳಾಯಿಬೆಟ್ಟುವಿನ ಮಹಮ್ಮದ್‌ ಇಕ್ಬಾಲ್‌, ಕಾಟಿಪಳ್ಳದ ಕೃಷ್ಣಾಪುರ ಚೊಕ್ಕಬೆಟ್ಟುವಿನ ದಾವೂದ್‌ ನೌಷಾದ್‌, ಬಜ್ಪೆ ಕಿನ್ನಿಪದವು ಗ್ರಾಮದ ಇಸ್ಮಾಯಿಲ್ ಎಂಜಿನಿಯರ್‌ ಮತ್ತು ಮಹಮ್ಮದ್‌ ನಜೀರ್, ಮೂಡುಬಿದಿರೆ ಪುತ್ತಿಗೆ ಗ್ರಾಮದ ಮುಂಡೇಲುವಿನ ಇಬ್ರಾಹಿಂ ಬಂಧನವಾಗಿತ್ತು. ‘ಮುನ್ನೆಚ್ಚರಿಕಾ ಕ್ರಮವಾಗಿ ಬಂಧನಕ್ಕೊಳಗಾದ ಪಿಎಫ್‌ಐನ ಎಲ್ಲ ಕಾರ್ಯಕರ್ತರೂ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಎನ್‌.ಶಶಿಕುಮಾರ್‌ ತಿಳಿಸಿದರು.

ADVERTISEMENT

‘ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಬಂಧಿಸಿದ್ದ ಬಿ. ಮೂಡಾದ ರಝಿಕ್‌, ಫಿರೋಜ್‌, ಇಜಾಜ್‌ ಅಹ್ಮದ್‌ ಹಾಗೂ ಅರಿಯಡ್ಕದ ಜಬೀರ್‌ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೃಷಿಕೇಶ್‌ ಸೋನಾವಣೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.