ADVERTISEMENT

ಇಂದಿನಿಂದ ಖಾಸಗಿ ಬಸ್‌ ಸಂಚಾರ: ದರ ಏರಿಕೆ

ಸಂಜೆ 5 ರವರೆಗೆ ವಹಿವಾಟಿಗೆ ಅವಕಾಶ– ಇಂದು ಆದೇಶ: ಸಚಿವ ಕೋಟ

​ಪ್ರಜಾವಾಣಿ ವಾರ್ತೆ
Published 1 ಜುಲೈ 2021, 4:19 IST
Last Updated 1 ಜುಲೈ 2021, 4:19 IST
ಮಂಗಳೂರಿನಲ್ಲಿ ಖಾಸಗಿ ಬಸ್ ಸಂಚಾರ ಆರಂಭವಾಗಲಿದ್ದು, ಖಾಸಗಿ ಬಸ್ ಅನ್ನು ಸ್ವಚ್ಛಗೊಳಿಸಲಾಯಿತು.
ಮಂಗಳೂರಿನಲ್ಲಿ ಖಾಸಗಿ ಬಸ್ ಸಂಚಾರ ಆರಂಭವಾಗಲಿದ್ದು, ಖಾಸಗಿ ಬಸ್ ಅನ್ನು ಸ್ವಚ್ಛಗೊಳಿಸಲಾಯಿತು.   

ಮಂಗಳೂರು: ಲಾಕ್‌ಡೌನ್‌ನಿಂದಾಗಿ ಎರಡು ತಿಂಗಳಿನಿಂದ ಸ್ಥಗಿತಗೊಂಡಿದ್ದ ಖಾಸಗಿ ಸಿಟಿ ಮತ್ತು ಸರ್ವಿಸ್ ಬಸ್ ಸಂಚಾರವು ಜಿಲ್ಲೆಯಲ್ಲಿ ಜುಲೈ 1ರಿಂದ ಆರಂಭಗೊಳ್ಳಲಿದೆ. ಈ ಮಧ್ಯೆ ಜು.1ರಿಂದ ಅನ್ವಯಗೊಳ್ಳುವಂತೆ ಖಾಸಗಿ ಸಿಟಿ, ಸರ್ವಿಸ್ ಬಸ್ ಪ್ರಯಾಣ ದರವೂ ಹೆಚ್ಚಳಗೊಂಡಿದೆ.

‘ಸದ್ಯ ಜಾರಿಯಲ್ಲಿರುವ ಬಸ್ ಪ್ರಯಾಣ ದರವು ಡೀಸೆಲ್‌ ಬೆಲೆ ₹56 ಇದ್ದಾಗ ಏರಿಕೆ ಮಾಡಿದ್ದಾಗಿದೆ. ಆ ಬಳಿಕ ಏರಿಕೆ ಮಾಡಿಲ್ಲ. ಈಗ ಡೀಸೆಲ್‌ ಬೆಲೆ ₹93 ದಾಟಿದೆ. ಸದ್ಯ ನಾವು ಶೇ 20ರಷ್ಟು ಮಾತ್ರ ದರ ಹೆಚ್ಚಿಸಿದ್ದೇವೆ. ಡೀಸೆಲ್ ಮತ್ತು ವಾಹನಗಳ ಬಿಡಿ ಭಾಗಗಳಿಗೆ ಏರಿಕೆಯಾದ ದರಕ್ಕೆ ಅನ್ವಯಿಸಿದಾಗ ಸದ್ಯ ಏರಿಕೆಯಾದ ಬಸ್ ಪ್ರಯಾಣ ದರವು ಹೆಚ್ಚೇನೂ ಅಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಬಸ್ ಪ್ರಯಾಣ ದರವನ್ನು ಶೇ 20ರಷ್ಟು ಮಾಡಲು ಮಾಲೀಕರಿಗೆ ಅವಕಾಶವಿದೆ. ಅದರಂತೆ ಅವರು ಶೇ 20ರಷ್ಟು ಪ್ರಯಾಣ ದರವನ್ನು ಏರಿಸಿದ್ದಾರೆ. ಆದರೆ ಸಾರಿಗೆ ಪ್ರಾಧಿಕಾರವು ಬಸ್ ಪ್ರಯಾಣ ದರ ಹೆಚ್ಚು ಮಾಡುವುದಕ್ಕೆ ಅನುಮತಿ ನೀಡಿಲ್ಲ ಎಂದು ಜಿಲ್ಲಾ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ADVERTISEMENT

2020ರ ಜೂನ್‌ 1ರಂದು ಕನಿಷ್ಠ ಪ್ರಯಾಣ ದರ ₹10 ಇದ್ದುದು ಇದೀಗ ₹12 ಕ್ಕೆ ಏರಿಸಲಾಗಿದೆ. 2.1 ಕಿ.ಮೀ.ನಿಂದ 4 ಕಿ.ಮೀ.ವರೆಗೆ ಕಳೆದ ವರ್ಷ ₹10 ಇದ್ದುದು ಈ ಬಾರಿ ₹13 ಕ್ಕೆ ಏರಿಸಲಾಗಿದೆ.

ಲಾಕ್‌ಡೌನ್‌ ಸಡಿಲಿಕೆ: ಜಿಲ್ಲೆಯಲ್ಲಿ ಇದೀಗ ಕೋವಿಡ್‌–19 ಪಾಸಿಟಿವಿಟಿ ರೇಟ್ ಶೇ 5ಕ್ಕಿಂತ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಅಂಗಡಿಗಳನ್ನು ತೆರೆಯಲು ಹಾಗೂ ಬಸ್‌ಗಳ ಸಂಚಾರಕ್ಕೆ ಅವಕಾಶ ನೀಡಿ ಲಾಕ್‌ಡೌನ್‌ ಸಡಿಲಿಕೆ ಮಾಡಲಾಗುವುದು. ಈ ಬಗ್ಗೆ ಈಗಾಗಲೇ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಗುರುವಾರ ಅಧಿಕೃತ ಆದೇಶ ಹೊರಬೀಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಉಡುಪಿ: ಶೇ 25 ರಷ್ಟು ಪ್ರಯಾಣದರ ಏರಿಕೆ

ಉಡುಪಿ: ಜಿಲ್ಲೆಯಲ್ಲಿ ಜುಲೈ 1ರಿಂದ ಖಾಸಗಿ ಬಸ್‌ಗಳ ಸಂಚಾರ ಆರಂಭವಾಗಲಿದ್ದು, ಪ್ರಯಾಣ ದರವನ್ನು ಶೇ 25ರಷ್ಟು ಹೆಚ್ಚಿಸಲು ಖಾಸಗಿ ಬಸ್‌ ಮಾಲೀಕರು ತೀರ್ಮಾನಿಸಿದ್ದಾರೆ. ಜುಲೈ 1ರಿಂದ ಬಸ್‌ಗಳನ್ನು ರಸ್ತೆಗಿಳಿಸಲು ಸಿದ್ಧರಿದ್ದು, ಶೇ 25 ಪ್ರಯಾಣದರ ಹೆಚ್ಚಳ ಮಾಡುವುದು ಅನಿವಾರ್ಯ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.