ನಾಲ್ಕೈದು ತಿಂಗಳ ಹಿಂದಷ್ಟೇ ಕಾಂಕ್ರಿಟೀಕರಣಗೊಂಡ ಪಕ್ಕಲಡ್ಕ-ಕಾನಕರಿಯ ರಸ್ತೆಯ ಈಗಿನ ಸ್ಥಿತಿ
ಮಂಗಳೂರು: ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಗೆ (ಎನ್‌ಎಚ್ 73) ಪಕ್ಕದಲ್ಲಿರುವ ಅಳಪೆ ದಕ್ಷಿಣ ವಾರ್ಡ್ ಪಾಲಿಗೆ ಈಚೆಗಷ್ಟೇ ಉದ್ಘಾಟನೆಗೊಂಡ ಜಿಲ್ಲಾ ಕಚೇರಿಗಳ ಸಂಕೀರ್ಣ ‘ಪ್ರಜಾ ಸೌಧ’ ಕಲಶಪ್ರಾಯದಂತಿದೆ. ಆದರೆ, ಜಿಲ್ಲೆಯ ಶಕ್ತಿ ಕೇಂದ್ರವಾದ ‘ಪ್ರಜಾ ಸೌಧ’ದ ಆಸುಪಾಸಿನ ಪ್ರದೇಶಗಳು ಮಾತ್ರ ಹಲವಾರು ಸಮಸ್ಯೆಗಳನ್ನು ಹೊದ್ದು ಮಲಗಿವೆ.
ಈ ವಾರ್ಡ್‌ನಲ್ಲಿ ಮಂಗಳೂರು ಜಂಕ್ಷನ್ ರೈಲು ನಿಲ್ದಾಣವಿದೆ. ಬಜಾಲ್ –ಪಡೀಲ್ ರಸ್ತೆಯಲ್ಲಿ ರೈಲ್ವೆ ಕೆಳಸೇತುವೆ ಇರಲಿಲ್ಲ. ಪ್ರತಿ ಸಲ ರೈಲುಗೇಟ್ ಬಿದ್ದಾಗ ವಾಹನ ಸವಾರರು ಅರ್ಧ ತಾಸು ಕಾಯಬೇಕಾಗುತ್ತಿತ್ತು. ರೈಲ್ವೆ ಕೆಳಸೇತುವೆ ನಿರ್ಮಾಣವಾದ ಬಳಿಕ ಹೊಸ ಸಮಸ್ಯೆ ಸೃಷ್ಟಿಯಾಗಿದೆ. ಮಳೆಯಾದಾಗಲೆಲ್ಲ ಕೆಳಸೇತುವೆಯಡಿ ನೀರು ನಿಲ್ಲುತ್ತದೆ. ಅದನ್ನು ಪಂಪ್ ಮಾಡಿ ಹೊರಹಾಕಬೇಕು. ‘ಪ್ರಜಾಸೌಧ’ದ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲೂ ಮಳೆ ನೀರು ನಿಲ್ಲುತ್ತದೆ.
ಪಡೀಲ್‌ನಿಂದ ಪಕ್ಕಲಡ್ಕ ಮಾರ್ಗವಾಗಿ ಜಪ್ಪಿನಮೊಗರುವನ್ನು ಸಂಪರ್ಕಿಸುವ ಜುಮ್ಮಾ ಮಸೀದಿ (ಜೆ.ಎಂ). ರಸ್ತೆಯನ್ನು ವಿಸ್ತರಿಸಿ ಕಾಂಕ್ರೀಟೀಕರಣಗೊಳಿಸಲಾಗಿದೆ. ಅದರ ಇಕ್ಕೆಲಗಳಲ್ಲಿ ಮಳೆ ನೀರು ಚರಂಡಿ ಮತ್ತು ಪಾದಚಾರಿ ಮಾರ್ಗವನ್ನು ಇನ್ನೂ ನಿರ್ಮಿಸಿಲ್ಲ. ಜಲ್ಲಿಗುಡ್ಡೆ ಬಳಿ ಮಳೆ ನೀರು ರಸ್ತೆಯಲ್ಲೇ ಹರಿಯುತ್ತದೆ. ಆಗ ಇಲ್ಲಿನ ಕಾಂಕ್ರೀಟ್ ರಸ್ತೆಯ ಇಳಿಜಾರಿನಲ್ಲಿ ದ್ವಿಚಕ್ರವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಾಗಬೇಕಾಗುತ್ತದೆ.
ಅಳಪೆ ದಕ್ಷಿಣ ಮತ್ತು ಕಂಕನಾಡಿ ಬಿ. ವಾರ್ಡ್‌ಗಳನ್ನು ಬೇರ್ಪಡಿಸುವ ತೋಡು ಪಕ್ಕಲಡ್ಕದಲ್ಲಿ ಹೂಳಿನಿಂದ ಮುಚ್ಚಿಹೋಗಿದೆ. ಹಾಗಾಗಿ ಮಳೆ ನೀರು ಪಕ್ಕಲಡ್ಕ ಕಾವು ಪಂಚಲಿಂಗೇಶ್ವರ ದೇವಸ್ಥಾನ ರಸ್ತೆಯ ಮೇಲೆಯೇ ಹರಿಯುತ್ತದೆ.
‘ಪ್ರತಿ ಮಳೆಗಾಲದಲ್ಲೂ ಈ ಸಮಸ್ಯೆ ತಪ್ಪಿದ್ದಲ್ಲ. ಪಾಲಿಕೆಯ ಗಮನಕ್ಕೆ ತಂದಾಗ ಪೌರಕಾರ್ಮಿಕರು ಬಂದು ಹೂಳು ತೆರವುಗೊಳಿಸುತ್ತಾರೆ. ಕಸ ಕಡ್ಡಿ- ಹೂಳು ಮತ್ತೆ ತಂಬಿಕೊಳ್ಳುತ್ತದೆ. ಈ ಚರಂಡಿಯನ್ನು ಸ್ವಲ್ಪ ಅಗಲಗೊಳಿಸಿ ಕಾಂಕ್ರೀಟ್ ತಡೆಗೋಡೆ ನಿರ್ಮಿಸಿ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಕಲ್ಪಿಸಬೇಕು’ ಎಂದು ಸ್ಥಳೀಯರಾದ ಜಗದೀಶ ಶೆಟ್ಟಿ ಒತ್ತಾಯಿಸಿದರು.
ಬಸ್ ಸೇವೆ ಪಡೀಲ್‌ವರೆಗೆ ವಿಸ್ತರಿಸಿ: ಪಕ್ಕಲಡ್ಕಕ್ಕೆ ಸ್ಟೇಟ್‌ಬ್ಯಾಂಕ್‌ನಿಂದ ಜಪ್ಪಿನಮೊಗರು ಮಾರ್ಗವಾಗಿ ಖಾಸಗಿ ಸಿಟಿ ಬಸ್ ವ್ಯವಸ್ಥೆ ಇದೆ. ಈ ಬಸ್‌ಗಳ ಸೇವೆಯನ್ನು ಒಂದೂವರೆ ಕಿ.ಮೀ. ದೂರದ ಪಡೀಲ್‌ಗೆ ವಿಸ್ತರಿಸಬೇಕು. ಪ್ರಜಾಸೌಧವನ್ನು ತಲುಪಲು ಅನುಕೂಲವಾಗುತ್ತದೆ ಎಂಬುದು ಸ್ಥಳೀಯರ ಬೇಡಿಕೆ.
ಜಲ್ಲಿಗುಡ್ಡೆಯ ರೈಲ್ವೆಗೇಟ್ ಬಳಿಯಿಂದ ವಿಜಯನಗರಕ್ಕೆ ತೋಡಿನ ಪಕ್ಕದಲ್ಲಿ ರೈಲ್ವೆ ಇಲಾಖೆಯೇ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಿದೆ. ಆದರೆ ವಿಜಯನಗರ ಪ್ರದೇಶದಲ್ಲಿ ಸುಮಾರು 300 ಮೀ ಉದ್ದದ ರಸ್ತೆ ಹೊಂಡ ಗುಂಡಿಗಳಿಂದ ಕೂಡಿದೆ. ಈ ರಸ್ತೆ ಪಾಲಿಕೆ ವ್ಯಾಪ್ತಿಗೆ ಸೇರಿದ್ದು, ಪಾಲಿಕೆ ಅನುದಾನದಿಂದಲೇ ಇದನ್ನು ಅಭಿವೃದ್ಧಿಪಡಿಸಬೇಕಿದೆ.
ಈ ವಾರ್ಡ್‌ನಲ್ಲಿ ನಾಲ್ಕೈದು ವರ್ಷಗಳ ಹಿಂದೆ ಮಲತ್ಯಾಜ್ಯ ಸಂಸ್ಕರಣಾ ಘಟಕ (ಎಸ್‌ಟಿಪಿ) ಕಾರ್ಯಾಚರಣೆ ಆರಂಭಿಸಿದಾಗ ಇಲ್ಲಿನ ಪರಿಸರದಲ್ಲಿ ದುರ್ವಾಸನೆ ಬರುತ್ತಿತ್ತು. ಈಗ ಸಮಸ್ಯೆ ಹಿಂದಿನಷ್ಟು ಇಲ್ಲ. ದಕ್ಷಿಣ ಭಾಗದಲ್ಲಿ ಗದ್ದೆಯ ಕಡೆಗೆ ಈ ಘಟಕದಿಂದ ಶುದ್ಧೀಕರಿಸದ ತ್ಯಾಜ್ಯ ನೀರು ಕೆಲವೊಮ್ಮೆ ಸೋರಿಕೆಯಾಗುತ್ತದೆ’ ಎಂದು ದೂರುತ್ತಾರೆ ಸ್ಥಳೀಯರು.
‘ಜಲ್ಲಿಗುಡ್ಡೆಯ ರೈಲ್ವೆ ಕೆಳಸೇತುವೆಯಿಂದ ಜಲ್ಲಿಗುಡ್ಡೆ ಕ್ರಾಸ್‌ವರೆಗಿನ ರಸ್ತೆಯನ್ನು ವಿಸ್ತರಣೆ ಮಾಡಿ ಕಾಂಕ್ರಿಟೀಕರಣಗೊಳಿಸಲಾಗಿದೆ. ಇದರ ಪಾದಚಾರಿ ಮಾರ್ಗ ಇನ್ನಷ್ಟೇ ನಿರ್ಮಿಸಬೇಕಿದೆ. ರಸ್ತೆಗೆ ಕೆಲವರು ಜಾಗ ಬಿಟ್ಟುಕೊಡದ ಕಾರಣ ಈ ಕೆಲಸ ಬಾಕಿಯಾಗಿದೆ. ಬಜಾಲ್ ಪೆರ್ಜಿಲವರೆಗೆ ರಸ್ತೆ ವಿಸ್ತರಣೆ ಕಾಮಗಾರಿ ಪ್ರಗತಿಯಲ್ಲಿದೆ. ಒಳಚರಂಡಿ ಸಂಪರ್ಕಿಸಲು ಬಾಕಿಯಾಗಿದ್ದ ಕೆಲಸಗಳೆಲ್ಲ ಪೂರ್ಣವಾಗಿದೆ. ಶಾಸಕರ ಅನುದಾನ ಹಾಗೂ ಪಾಲಿಕೆ ಅನುದಾನಗಳು ಸೇರಿ ಒಟ್ಟು ₹ 20 ಕೋಟಿಗೂ ಹೆಚ್ಚು ಮೊತ್ತದ ಕಾಮಗಾರಿಗಳು ಆಗಿವೆ. ವಾರ್ಡ್‌ನ ಒಳ ರಸ್ತೆಗಳನ್ನೆಲ್ಲ ಅಭಿವೃದ್ಧಿಪಡಿಸಿದ್ದೇವೆ. ಕರ್ಮಾರ್– ಮಾಣಾಲ್‌ಕೋಡಿ ಬಹುತೇಕ ಪೂರ್ಣವಾಗಿದೆ. ಬೊಲ್ಲದ ರಸ್ತೆ ಕಾಮಗಾರಿ ಬಾಕಿ ಇದೆ ಎನ್ನುತ್ತಾರೆ ವಾರ್ಡ್‌ನ ನಿಕಟಪೂರ್ವ ಪಾಲಿಕೆ ಸದಸ್ಯೆ ಶೋಭಾ ಪೂಜಾರಿ.
ಬಜಾಲ್ ಪಕ್ಕಲಡ್ಕದಿಂದ ಕಾನೆಕರಿಯ ಸಂಪರ್ಕ ರಸ್ತೆಗೆ ಕಾಂಕ್ರೀಟ್ ಹಾಕಿ ನಾಲ್ಕೈದು ತಿಂಗಳುಗಳಷ್ಟೇ ಆಗಿವೆ. ಲಾರಿ ಹಾದು ಹೋಗಿ ಈ ಕಾಂಕ್ರೀಟ್ ರಸ್ತೆ ಕುಸಿದಿದೆ. ಕಾಂಕ್ರೀಟ್ ರಸ್ತೆಯ ಹೆಸರಿನಲ್ಲಿ ನಡೆಸಲಾಗುವ ಕಳಪೆ ಕಾಮಗಾರಿಗೆ ಇದು ಉದಾಹರಣೆ ಎಂದು ದೂರುತ್ತಾರೆ ಸ್ಥಳೀಯರು. ‘ಬಜಾಲ್ ಪಕ್ಕಲಡ್ಕದಿಂದ ಕಾನೆಕರಿಯ ಸಂಪರ್ಕ ರಸ್ತೆ ಸಂಪೂರ್ಣ ಹಾಳಾಗಿತ್ತು. ಗುಂಡಿಗಳಿಂದ ತುಂಬಿದ ಈ ರಸ್ತೆ ಕೆಸರು ಗದ್ದೆಯಂತಿತ್ತು. ಕಾಂಕ್ರೀಟೀಕರಣವಾದಾಗ ನಾವು ಖುಷಿ ಪಟ್ಟಿದ್ದೆವು. ಕಾಂಕ್ರೀಟ್ ರಸ್ತೆಯೂ ನಾಲ್ಕೈದೇ ತಿಂಗಳಲ್ಲಿ ಹದಗೆಟ್ಟಿದ್ದು ನೋಡಿ ಬೇಸರವಾಗುತ್ತಿದೆ’ ಎಂದು ಡೇನಿಯಲ್ ಹೇಳಿದರು.
ಅಳಪೆ ದಕ್ಷಿಣವೂ ಸೇರಿ ಆಸು ಪಾಸಿನಲ್ಲೆಲ್ಲೂ ಪಾಲಿಕೆಯ ಮಾರುಕಟ್ಟೆ ಸಂಕೀರ್ಣ ಇಲ್ಲ. ಇಲ್ಲಿನವರು ಕಂಕನಾಡಿ, ಕದ್ರಿ ಅಥವಾ ಸೆಂಟ್ರಲ್ ಮಾರುಕಟ್ಟೆಗೆ ಹೋಗಬೇಕಿದೆ. ಬಜಾಲ್ ಕೇಂದ್ರಿತವಾಗಿ ಮಾರುಕಟ್ಟೆ ಸಂಕೀರ್ಣ ನಿರ್ಮಿಸಲಿ-ಮುನೀರ್, ಸ್ಥಳೀಯ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.