ADVERTISEMENT

ಮಂಗಳೂರು: ವಿದ್ವಾಂಸ ಪ್ರೊ. ‌ಅಮೃತ ಸೋಮೇಶ್ವರ ನಿಧನ

​ಪ್ರಜಾವಾಣಿ ವಾರ್ತೆ
Published 6 ಜನವರಿ 2024, 5:49 IST
Last Updated 6 ಜನವರಿ 2024, 5:49 IST
   

ಉಳ್ಳಾಲ (ದಕ್ಷಿಣ ಕನ್ನಡ): ಕನ್ನಡ ಮತ್ತು ತುಳು ಭಾಷೆಯ ಉನ್ನತಿಗಾಗಿ ಶ್ರಮಿಸಿದ ವಿದ್ವಾಂಸ ಪ್ರೊ. ಅಮೃತ ಸೋಮೇಶ್ವರ (88) ವಯೋಸಹಜ ಅನಾರೋಗ್ಯದಿಂದ ಶನಿವಾರ ಬೆಳಿಗ್ಗೆ ಸೋಮೇಶ್ವರದ ತಮ್ಮ ಮನೆ ‘ಒಲುಮೆ’ ಯಲ್ಲಿ ನಿಧನರಾದರು.

ಕರಾವಳಿ ಕರ್ನಾಟಕದ ಯಕ್ಷಗಾನ, ಜಾನಪದ, ಭೂತಾರಾಧನೆ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆ ನಡೆಸಿ ನೂರಕ್ಕೂ ಹೆಚ್ಚು ಕೃತಿಯನ್ನು ಹೊರತಂದಿದ್ದರು. 

ತುಳುವಿನಲ್ಲಿ ಕವನ‌ ಸಂಗ್ರಹ, ಪಾಡ್ದನ‌ ಸಂಗ್ರಹ, ನಾಟಕ‌, ಅನುವಾದಿತ ಕಾವ್ಯ, ನೃತ್ಯ ರೂಪಕ, ರೇಡಿಯೋ ರೂಪಕ, ಅನುವಾದಿತ ನಾಟಕ, ತುಳು ಜಾನಪದ ಕುರಿತಾದ ಸಂಶೋಧನೆ, ಸ್ವತಂತ್ರ ಗಾದೆ, ಭಕ್ತಿಗೀತೆ, ಭಾವಗೀತೆಗಳ ಕೃತಿಗಳನ್ನು ರಚಿಸಿದ್ದರು.

ADVERTISEMENT

ಇವರಿಗೆ ಮಂಗಳೂರು‌ ವಿವಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ ಪ್ರಶಸ್ತಿ,  ಕರ್ನಾಟಕ ಸಾಹಿತ್ಯ ಅಕಾಡೆಮಿಯ 2020 ನೇ ಸಾಲಿನ ’ಗೌರವಶ್ರೀ’ ಪ್ರಶಸ್ತಿ, ಮಣಿಪಾಲ ಅಕಾಡೆಮಿಯ ಮಾಹೆ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಇವರಿಗೆ ಸಂದಿದ್ದವು.

ತುಳು ಭಾಷೆ ಹಾಗೂ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ 2016ನೇ ಸಾಲಿನಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಅವರಿಗೆ ಪತ್ನಿ ನರ್ಮದಾ, ಮಕ್ಕಳಾದ ಚೇತನ್ ಸೋಮೇಶ್ವರ, ಜೀವನ್ ಸೋಮೇಶ್ವರ, ಸೊಸೆಯಂದಿರಾದ ರಾಜೇಶ್ವರಿ, ಸತ್ಯ ಜೀವನ್, ಮೊಮ್ಮಕ್ಕಳಾದ ಸೃಜನ್ ಸೋಮೇಶ್ವರ ಹಾಗೂ ಸೃಷ್ಟಿ ಸೋಮೇಶ್ವರ ಇದ್ದಾರೆ.

ಸೋಮೇಶ್ವರ ಪುರಸಭೆ ಕಚೇರಿ ಬಳಿಯ ಅವರ ಸ್ವಗೃಹದಲ್ಲಿ ಮೃತದೇಹದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಭಾನುವಾರ ಅಂತ್ಯ ಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.