ADVERTISEMENT

ಅಕ್ಷರ ದಾಸೋಹ ನೌಕರರ ಪ್ರತಿಭಟನೆ, ಕಾಲ್ನಡಿಗೆ ಜಾಥಾ

ಅಕ್ಷರ ದಾಸೋಹ ನೌಕರರ ಪ್ರತಿಭಟನೆ, ಕಾಲ್ನಡಿಗೆ ಜಾಥಾ; ಭಾರಿ ಹೋರಾಟದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 5:34 IST
Last Updated 18 ಆಗಸ್ಟ್ 2022, 5:34 IST
ಪುತ್ತೂರು ಮತ್ತು ಕಡಬ ತಾಲ್ಲೂಕು ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ಬುಧವಾರ ಪುತ್ತೂರು ನಗರದ ಕಿಲ್ಲೆ ಮೈದಾನದ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಪ್ರತಿಭಟನೆ ನಡೆಯಿತು (ಎಡ ಚಿತ್ರ). ಬೆಳ್ತಂಗಡಿ ತಾಲ್ಲೂಕು ಅಕ್ಷರ ದಾಸೋಹ ನೌಕರರ ಸಂಘಟನೆಯ ನೇತೃತ್ವದಲ್ಲಿ ಬೆಳ್ತಂಗಡಿ ಮಿನಿ ವಿಧಾನಸೌದದ ಎದುರು ಬಿಸಿಯೂಟ ನೌಕರರ ಪ್ರತಿಭಟಣೆ ನಡೆಯಿತು
ಪುತ್ತೂರು ಮತ್ತು ಕಡಬ ತಾಲ್ಲೂಕು ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ಬುಧವಾರ ಪುತ್ತೂರು ನಗರದ ಕಿಲ್ಲೆ ಮೈದಾನದ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಪ್ರತಿಭಟನೆ ನಡೆಯಿತು (ಎಡ ಚಿತ್ರ). ಬೆಳ್ತಂಗಡಿ ತಾಲ್ಲೂಕು ಅಕ್ಷರ ದಾಸೋಹ ನೌಕರರ ಸಂಘಟನೆಯ ನೇತೃತ್ವದಲ್ಲಿ ಬೆಳ್ತಂಗಡಿ ಮಿನಿ ವಿಧಾನಸೌದದ ಎದುರು ಬಿಸಿಯೂಟ ನೌಕರರ ಪ್ರತಿಭಟಣೆ ನಡೆಯಿತು   

ಪುತ್ತೂರು: ಅಕ್ಷರ ದಾಸೋಹ ನೌಕರರರಿಗೆ ಕನಿಷ್ಠ ವೇತನ ₹ 10 ಸಾವಿರ ನೀಡಬೇಕು, ಬಾಕಿ ಇರುವ ಮೂರು ತಿಂಗಳ ಸಂಬಳ ವಿತರಿಸಬೇಕು. ಬಲವಂತದಿಂದ ನಿವೃತ್ತಿಗೊಳಿಸಿದ ಅಡುಗೆಯವರಿಗೆ ಪರಿಹಾರದ ಜೊತೆ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿ ಪುತ್ತೂರು ಮತ್ತು ಕಡಬ ತಾಲ್ಲೂಕು ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ಬುಧವಾರ ನಗರದ ಕಿಲ್ಲೆ ಮೈದಾನದ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕಾರ್ಮಿಕ ಮುಖಂಡ, ವಕೀಲ ಬಿ.ಎಂ.ಭಟ್ ದುಡಿದು ತಿನ್ನುವ ವರ್ಗಕ್ಕೆ ಸಂಬಳ ನೀಡದ ಸರ್ಕಾರ ಎತ್ತ ಸಾಗುತ್ತಿದೆ ಎಂಬುದು ತಿಳಿಯುವುತ್ತಿಲ್ಲ. ಶಾಲಾ ಮಕ್ಕಳಿಗೆ ಅಡುಗೆ ಮಾಡಿ ಬಿಸಿಯೂಟ ಬಡಿಸುವ ಕೆಲಸ ಮಾಡುತ್ತಿರುವ ಮಾತೆಯರಿಗೆ 3 ತಿಂಗಳಿಂದ ಸಂಬಳ ನೀಡದೆ ಜೀತದಾಳುಗಳಂತೆ ದುಡಿಸಲಾಗುತ್ತಿ ಎಂದರು.

ಅಕ್ಷರ ದಾಸೋಹ ಕಾರ್ಮಿಕರ ಬಗ್ಗೆ ಕಾಳಜಿ ಇದ್ದರೆ 3 ತಿಂಗಳಲ್ಲಿ ಬಾಕಿ ಸಂಬಳ ನೀಡಬೇಕು, ಕನಿಷ್ಠ ವೇತನವನ್ನು ₹ 10 ಸಾವಿರಕ್ಕೆ ಏರಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ವಿಧಾನಸೌಧದ ಜಗಲಿಯಲ್ಲಿ ಮಲಗಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಸೆಪ್ಟೆಂಬರ್ 1ರಿಂದ ಅನಿರ್ದಿಷ್ಟಾವಧಿ ಧರಣಿ ನಡೆಸಲು ಸಂಘ ತೀರ್ಮಾನಿಸಿದೆ ಎಂದು ಅವರು ತಿಳಿಸಿದರು.

ADVERTISEMENT

‘60 ವರ್ಷ ಆಗಿದೆ ಎಂದು ಮಹಿಳೆಯರನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಿರುವ ಸರ್ಕಾರ ಅವರಿಗೆ ಕನಿಷ್ಟ ಪರಿಹಾರವನ್ನಾಗಲಿ ಪಿಂಚಿಣಿಯನ್ನಾಗಲಿ ನೀಡದೆ ಬೀದಿಗೆ ತಳ್ಳಿದೆ. ಜನಹಿತದ ವಿರುದ್ಧ ಕೆಲಸ ಮಾಡುವ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗುವ ಯೋಗ್ಯತೆ ಇಲ್ಲ’ ಎಂದರು.

ಋಣಮುಕ್ತ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಮಂಜುನಾಥ್, ಪುತ್ತೂರಿನ ಸಿಪಿಐಎಂ ಮುಖಂಡ ವಕೀಲ ಪಿ.ಕೆ.ಸತೀಶನ್, ಪುತ್ತೂರು ತಾಲ್ಲೂಕು ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಸುಧಾ ಎಕ್ಕಡ, ಕಾರ್ಯದರ್ಶಿ ರಂಜಿತಾ, ಗೌರವಾಧ್ಯಕ್ಷೆ ವೇದಾ ಕೊಳ್ತಿಗೆ, ಕಡಬ ತಾಲ್ಲೂಕು ಘಟಕದ ಅಧ್ಯಕ್ಷೆ ರೇವತಿ, ಬೀಡಿ ಕಾರ್ಮಿಕರ ಸಂಘಟನೆಯ ಮುಖಂಡರಾದ ಈಶ್ವರಿ ಪದ್ಮುಂಜ, ನೆಬಿಸಾ, ಕಾರ್ಮಿಕ ಮುಖಂಡ ಜಯರಾಮ ಮಯ್ಯ, ಹಮೀದ್, ರಮೀಜ್ ಇದ್ದರು.

ನಗರದಲ್ಲಿ ಕಾಲ್ನಡಿಗೆ ಜಾಥಾ ನಡೆಸಿದ ಪ್ರತಿಭಟನಾಕಾರರು ಉಪವಿಭಾಗಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ತಾಲ್ಲೂಕು ಪಂಚಾಯತಿಗೆ ತೆರಳಿ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕರಿಗೂ ಮನವಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.