ಪುತ್ತೂರು: ನಗರದ ವಿಶ್ವಕರ್ಮ ಸಮಾಜದ ಯುವತಿಯನ್ನು ವಿವಾಹವಾಗುವುದಾಗಿ ನಂಬಿಸಿ ಗರ್ಭವತಿಯನ್ನಾಗಿಸಿ ವಂಚಿಸಿದ ಪ್ರಕರಣದಲ್ಲಿ ಸಂತ್ರಸ್ತೆಗೆ ನ್ಯಾಯ ಸಿಗದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಹೇಳಿದರು.
ನಗರದ ಕರ್ಮಲದ ವಿಶ್ವಕರ್ಮ ಸಮಾಜ ಸೇವಾ ಸಭಾಂಗಣದಲ್ಲಿ ವಿಶ್ವಕರ್ಮ ಒಕ್ಕೂಟದ ನೇತೃತ್ವದಲ್ಲಿ ಬುಧವಾರ ನಡೆದ ಸಮಾಜದ ತುರ್ತುಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಸಮಾಜದ ಹೆಣ್ಣು ಮಗಳಿಗೆ ಬಿಜೆಪಿ ಮುಖಂಡನೊಬ್ಬನ ಮಗನಿಂದ ಅನ್ಯಾಯವಾಗಿದೆ. ಸಂತ್ರಸ್ತೆಯ ಮನೆಗೆ ಹೋಗಿ ಮಾತನಾಡಿ ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕ್ರಮಕ್ಕೆ ಒತ್ತಾಯಿಸಲಾಗುವುದು. ಆ ಬಳಿಕವೂ ಪೊಲೀಸರು ಸರಿಯಾದ ಕ್ರಮ ಕೈಗೊಳ್ಳದಿದ್ದಲ್ಲಿ ಅನ್ಯಾಯ ಮಾಡಿರುವ ಯುವಕನ ಮನೆ ಮುಂದೆ ಮತ್ತು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.
‘ರಾಜಕೀಯ ಪಕ್ಷದಲ್ಲಿ ನಮ್ಮ ಸಮಾಜದವರಿಗೆ ಯಾವ ಸ್ಥಾನವನ್ನೂ ಕೊಡುವುದಿಲ್ಲ. ನಮಗೆ ದೊಡ್ಡ ಅನ್ಯಾಯ ಆಗಿದೆ. ಆರೋಪಿಯ ತಂದೆ ಬಿಜೆಪಿ ಮುಖಂಡ, ಜ್ಯೋತಿಷಿ ಆಗಿರಬಹುದು, ದೇವಸ್ಥಾನದಲ್ಲಿ ಇರಬಹುದು. ಆದರೆ ನಾವೆಲ್ಲರೂ ಒಗ್ಗಟ್ಟಿನಲ್ಲಿರಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅನ್ಯಾಯವಾಗಲು ಬಿಡಬಾರದು. ನಮಗೆ ಯಾರನ್ನೂ ಗೆಲ್ಲಿಸಲಾಗದಿದ್ದರೂ ಸೋಲಿಸಲಂತೂ ಖಂಡಿತಾ ಸಾಧ್ಯವಿದೆ’ ಎಂದು ಅವರು ಹೇಳಿದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮುರಳಿಧರ ಆಚಾರ್ಯ, ಉಪಾಧ್ಯಕ್ಷ ಅಲೆವೂರು ಯೋಗೀಶ್ ಆಚಾರ್ಯ, ಹರ್ಷವರ್ಧನ್ ನಿಟ್ಟೆ, ಜಯರಾಮ ಆಚಾರ್ಯ ಸಾಲಿಗ್ರಾಮ, ಜಯರಾಮ ಆಚಾರ್ಯ ಕುಲಾಯಿ, ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘದ ಗೌರವಾಧ್ಯಕ್ಷ ಭಾಸ್ಕರ್ ಆಚಾರ್ಯ ಕಾಣಿಯೂರು, ವಿಶ್ವಕರ್ಮ ಬೀರಮಲೆ ಸಮಿತಿಯ ಅಧ್ಯಕ್ಷ ಗಂಗಾಧರ ಆಚಾರ್ಯ, ಕೋಶಾಧಿಕಾರಿ ನಿರಂಜನ ಆಚಾರ್ಯ, ಪುತ್ತೂರು ವಿಶ್ವಕರ್ಮ ಸಮಾಜ ಸಭಾದ ಸುರೇಂದ್ರ ಆಚಾರ್ಯ, ಯುವ ಮಿಲನ ಅಧ್ಯಕ್ಷ ಹರೀಶ್ ಆಚಾರ್ಯ, ಆನೆಗುಂದಿ ಗುರುದೇವ ಪರಿಷತ್ ಪುತ್ತೂರು ಸಮಿತಿ ಅಧ್ಯಕ್ಷ ವಿ.ಪುರುಷೋತ್ತಮ ಆಚಾರ್ಯ, ಉಮೇಶ್ ಆಚಾರ್ಯ, ಮಹಿಳಾ ಸಂಘದ ಅಧ್ಯಕ್ಷೆ ಇಂದಿರ ಪುರುಷೋತ್ತಮ ಆಚಾರ್ಯ, ವಿಶ್ವ ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಶ್ರೀಧರ ಆಚಾರ್ಯ, ಪುರಸಭೆ ಮಾಜಿ ಸದಸ್ಯ ಉದಯ ಆಚಾರ್ಯ ಹಾಜರಿದ್ದರು.
ಶಾಸಕರೇ ಖುದ್ದು ನಿಂತು ವಿವಾಹ ಮಾಡಿಸಲಿ
‘ಸಂತ್ರಸ್ತೆ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದ ಸಂದರ್ಭದಲ್ಲಿ ಶಾಸಕರ ಮನವಿಯಂತೆ ವಿವಾಹ ಮಾತುಕತೆಯಾಗಿ ಆರೋಪಿ ಮುಚ್ಚಳಿಕೆ ಬರೆದು ಕೊಟ್ಟಿದ್ದಾನೆ. ಆ ಬಳಿಕ ಯುವಕ ವಿವಾಹವಾಗಲು ಒಪ್ಪದೆ ಮೋಸ ಮಾಡಿದ್ದಾನೆ. ಈ ಪ್ರಕರಣ ಸಂಬಂಧ ಈಗಾಗಲೇ ಕ್ಷೇತ್ರದ ಶಾಸಕರು ಪ್ರವೇಶ ಮಾಡಿರುವುದರಿಂದ ಅವರೇ ಈಗ ಖುದ್ದಾಗಿ ನಿಂತು ವಿವಾಹ ಮಾಡಿಸಬೇಕು. ಯುವಕನ ಕಡೆಯವರು ವಿವಾಹಕ್ಕೆ ಒಪ್ಪದಿದ್ದರೆ ಸಂತ್ರಸ್ತೆಗೆ ನ್ಯಾಯ ಸಿಗುವ ತನಕ ಸಮಾಜದಿಂದ ಹೋರಾಟ ಮಾಡಬೇಕು’ ಎಂದು ಮಧು ಆಚಾರ್ಯ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.