ADVERTISEMENT

ಸಿದ್ಧಕಟ್ಟೆ: ಕ್ಯಾನ್ಸರ್ ಪೀಡಿತ ಮಹಿಳೆಗೆ ನೆರವು ಯಾಚನೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 12:13 IST
Last Updated 17 ಸೆಪ್ಟೆಂಬರ್ 2019, 12:13 IST
ಸುಮತಿ
ಸುಮತಿ   

ಬಂಟ್ವಾಳ: ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಶೆಟ್ಟಿಕಟ್ಟೆ ಎಂಬಲ್ಲಿ ತೀರಾ ಬಡತನದ ನಡುವೆಯೂ ಬೀಡಿ ಕಟ್ಟಿಕೊಂಡು ಸುಂದರ ಬದುಕು ನಡೆಸುತ್ತಿದ್ದ ಗೃಹಿಣಿ ಸುಮತಿ (45) ಎಂಬುವರಿಗೆ ಮಾರಕ ಕಾಯಿಲೆ ಬದುಕನ್ನೇ ಮಂಕಾಗಿಸಿದೆ.

ಪತಿ ಶ್ರೀನಿವಾಸ ಪೂಜಾರಿ ಸಿದ್ಧಕಟ್ಟೆ ಹೂವಿನ ಅಂಗಡಿಯೊಂದರಲ್ಲಿ ದುಡಿಯುತ್ತಿದ್ದರೆ,ಸುಮತಿ ಬೀಡಿ, ಕೂಲಿ ಮತ್ತು ಮನೆ ಕೆಲಸ ಮಾಡಿಕೊಂಡು ಇಬ್ಬರು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಜನವರಿ 1ರಂದು ಗಂಟಲು ನೋವು ಕಾಣಿಸಿಕೊಂಡ ಸುಮತಿ ಅವರಿಗೆ ಮಂಗಳೂರು ಕೆಎಂಸಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಮತ್ತೆ ನೋವು ಉಲ್ಬಣಿಸಿದ ಪರಿಣಾಮ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 'ಸಂಪೂರ್ಣ ಸುರಕ್ಷಾ' ಯೋಜನೆಯಡಿ ಮತ್ತೆ ₹1.5ಲಕ್ಷ ವೆಚ್ಚದಲ್ಲಿ ಮತ್ತೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಒಟ್ಟು ಏಳು ಬಾರಿ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರು ಕೆಲವು ಸಮಯ ಮನೆಯಲ್ಲಿ ಅಡುಗೆ ಸಹಿತ ಮಕ್ಕಳ ಆರೈಕೆ ಮತ್ತಿತರ ಕೆಲಸಗಳನ್ನು ಸ್ವಾವಲಂಬಿಯಾಗಿ ನಡೆಸುತ್ತಿದ್ದರು. ಆದರೆ ಒಂದು ತಿಂಗಳಿನಿಂದ ಮನೆಯಲ್ಲಿ ಹಾಸಿಗೆ ಹಿಡಿದಿರುವ ಇವರ ಆರೈಕೆಗೆ ಪತಿ ಶ್ರೀನಿವಾಸ ಪೂಜಾರಿ ಕೂಡಾ ಮನೆಯಲ್ಲೇ ಉಳಿದುಕೊಂಡಿದ್ದಾರೆ.

ಕೇವಲ ಐದು ಸೆಂಟ್ಸ್ ಜಮೀನಿನಲ್ಲಿ ವಾಸಿಸುತ್ತಿರುವ ಇವರಿಗೆ ಕುಕ್ಕಿಪಾಡಿ ಗ್ರಾಮ ಪಂಚಾಯಿತಿ ವತಿಯಿಂದ ಉಚಿತ ಮನೆ ನಿರ್ಮಿಸಲಾಗಿದೆ. ಇವರ ಇಬ್ಬರು ಮಕ್ಕಳು ಶಾಲೆಗೆ ಹೋಗುತ್ತಿದ್ದು, ಇದೀಗ ಕುಟುಂಬ ನಿರ್ವಹಣೆ ತೀರಾ ಕಷ್ಟವಾಗಿದೆ. ಊಟಕ್ಕೂ ತತ್ವಾರ ಬಂದೊದಗಿದೆ.

ADVERTISEMENT

ಕೊಡುಗೆ: ಸಿದ್ಧಕಟ್ಟೆ ವಲಯ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ₹ 5ಸಾವಿರ ಮೊತ್ತದ ಸಹಾಯಧನ ಚೆಕ್ ನೀಡಲಾಗಿದೆ ಎಂದು ಕುಕ್ಕಿಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ ಸುಂದರ ಶಾಂತಿ ತಿಳಿಸಿದ್ದಾರೆ.

ಬೇಡಿಕೆ: ಅನಾರೋಗ್ಯಪೀಡಿತ ಸುಮತಿ ಅವರಿಗೆ ಮತ್ತೆ ಚಿಕಿತ್ಸೆಗಾಗಿ ₹5ಲಕ್ಷ ಮೊತ್ತದ ಅವಶ್ಯಕತೆ ಇದೆ. ಇದಕ್ಕಾಗಿ ಆರ್ಥಿಕ ಸಹಾಯ ನೀಡುವವರು ಸಿದ್ಧಕಟ್ಟೆ ವಿಜಯಾ ಬ್ಯಾಂಕಿನ ಎಸ್ ಬಿ ಖಾತೆ ಸಂಖ್ಯೆ 119801011000569, ಐ ಎಫ್ ಎಸ್ ಸಿ ಕೋಡ್: ವಿ ಐ ಜೆ ಬಿ 0001198 ಇಲ್ಲಿಗೆ ಸಂದಾಯ ಆಗುವಂತೆ ಕಳುಹಿಸಲು ಅವರು ವಿನಂತಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.