ಫೇಸ್‌ಬುಕ್
ಮಂಗಳೂರು: ಸಾರ್ವಜನಿಕ ಶಾಂತಿಭಂಗಗೊಳಿಸುವಂತಹ ಪ್ರಚೋದನಾಕಾರಿ ಸಂದೇಶವನ್ನು ಪ್ರಕಟಿಸಿದ ಆರೋಪದ ಮೇಲೆಗೆ ಪೊಲೀಸ್ ಇಲಾಖೆಯ ಸೂಚನೆ ಮೇರೆಗೆ ಒಂದು ಫೇಸ್‌ಬುಕ್ ಪುಟ ಹಾಗೂ ನಾಲ್ಕು ಇನ್‌ಸ್ಟಾಗ್ರಾಂ ಪುಟಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
‘ವಿಎಚ್‌ಪಿ_ಬಜರಂಗದಳ_ಅಶೋಕನಗರ’, ‘ಶಂಖನಾದ’, ‘_ಡಿಜೆ_ಭರತ್_2008’, ‘ಕರಾವಳಿ_ಅಫಿಷಿಯಲ್’ ಎಂಬ ಇನ್‌ಸ್ಟಾಗ್ರಾಂ ಪುಟಗಳನ್ನು ಹಾಗೂ ‘ಆಶಿಕ್ ಮೈಕಾಲ’ ಪೇಸ್ ಬುಕ್ ಪುಟವನ್ನು ನಿಷ್ಕ್ರಿಯಗೊಂಡಿದೆ’ ಎಂದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.
‘ಒಂದು ಸಮುದಾಯವನ್ನು ಮತ್ತೊಂದು ಸಮುದಾಯದ ವಿರುದ್ಧ ಎತ್ತಿ ಕಟ್ಟುವಂತಹ, ವಿವಿಧ ಧರ್ಮ ಹಾಗೂ ವರ್ಗಗಳ ಜನರಲ್ಲಿ ದ್ವೇಷದ ಭಾವನೆ ಮೂಡಿಸುವ ಹಾಗೂ ಅಪರಾಧ ಕೃತ್ಯಕ್ಕೆ ಪ್ರಚೋದಿಸುವಂತಹ ಸಂದೇಶಗಳನ್ನು ಪ್ರಕಟಿಸುವ ಮೂಲಕ ಈ ಪುಟಗಳನ್ನು ಕಾನೂನುಬಾಹಿರ ಚಟುವಟಿಕೆಗೆ ಬಳಸಲಾಗಿತ್ತು’ ಎಂದು ಅವರು ತಿಳಿಸಿದ್ದಾರೆ,
‘ವಿಎಚ್‌ಪಿ_ಬಜರಂಗದಳ_ಅಶೋಕನಗರ’, ‘ಶಂಖನಾದ’ ಇನ್‌ಸ್ಟಾಗ್ರಾಂ ಪುಟಗಳ ವಿರುದ್ಧ ಉರ್ವ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 353(1) ಮತ್ತು 353(2) (ಸುಳ್ಳು ಮಾಹಿತಿ ಅಥವಾ ಸುಳ್ಳು ಸುದ್ದಿ ಹರಡುವುದು) ಅಡಿ ಎಫ್‌ಐಆರ್ ದಾಖಲಾಗಿತ್ತು. ‘_ಡಿಜೆ_ಭರತ್_2008’ ಇನ್‌ಸ್ಟಾಗ್ರಾಂ ಪುಟದ ವಿರುದ್ಧ ಕಾವೂರು ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 353 (1) ಮತ್ತು 353(2) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿತ್ತು.’
‘ಕರಾವಳಿ_ಅಫಿಷಿಯಲ್’ ಇನ್‌ಸ್ಟಾಗ್ರಾಂ ಪುಟದ ವಿರುದ್ಧ ನಗರ ದಕ್ಷಿಣ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 353(2), ಸೆಕ್ಷನ್ 351(3) (ಜೀವ ಬೆದರಿಕೆ) ಹಾಗೂ ಸೆಕ್ಷನ್ 196ರ (ಧರ್ಮ, ಜನಾಂಗ, ಜನ್ಮಸ್ಥಳ, ನಿವಾಸ, ಭಾಷೆಗಳ ಆಧಾರದಲ್ಲಿ ಬೇರೆ ಬೇರೆ ಗುಂಪುಗಳ ನಡುವೆ ದ್ವೇಷ ಮೂಡಿಸುವುದು) ಅಡಿ ಎಫ್‌ಐಆರ್ ದಾಖಲಾಗಿತ್ತು. ‘ಆಶಿಕ್ ಮೈಕಾಲ’ ಪೇಸ್ ಬುಕ್ ಪುಟದ ವಿರುದ್ಧ ಬರ್ಕೆ ಠಾಣೆಯಲ್ಲಿ ಬಿಎನ್‌ಎಸ್ 353(2)ರ ಅಡಿ ಎಫ್‌ಐಆರ್ ದಾಖಲಾಗಿತ್ತು’ ಎಂದು ಅವರು ಮಾಹಿತಿ ನೀಡಿದ್ದಾರೆ.
‘ಈ ಪ್ರಕರಣಗಳ ತನಿಖೆಯನ್ನು ನಗರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಈ ಇನ್‌ಸ್ಟಾಗ್ರಾಮ ಹಾಗೂ ಫೇಸ್ ಬುಕ್ ಪುಟಗಳನ್ನು ನಿಷ್ಕ್ರಿಯಗೊಳಿಸುವಂತೆ ಕಾನೂನು ಜಾರಿ ಏಜೆನ್ಸಿಗೆ ಪತ್ರ ಬರೆದಿದ್ದೆವು. ಈ ಪುಟಗಳು ಭಾರತದ ದೇಶದಲ್ಲಿ ಕಾರ್ಯನಿರ್ವಹಿಸದಂತೆ ಅವರು ಕ್ರಮವಹಿಸಿದ್ದಾರೆ’ ಎಂದು ಕಮಿಷನರ್ ತಿಳಿಸಿದ್ದಾರೆ.
ಮಂಗಳೂರು ಪೊಲೀಸ್ ಕಮಿಷನರೇಟ್‌ನ ಶಿಫಾರಸಿನ ಮೇಲೆ ಎರಡು ಇನ್‌ಸ್ಟಾಗ್ರಾಂ ಪುಟಗಳನ್ನು ಈ ಹಿಂದೆಯೇ ನಿಷ್ಕ್ರಿಯಗೊಳಿಸಲಾಗಿತ್ತು. ದ್ವೇಷ ಹರಡಿಸಿದ ಕಾರಣಕ್ಕೆ ಒಟ್ಟು ಆರು ಇನ್‌ಸ್ಟಾಗ್ರಾಂ ಹಾಗೂ ಒಂದು ಫೇಸ್‌ಬುಕ್ ಪುಟ ನಿಷ್ಕ್ರಿಯಗೊಂಡಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.