ಉಜಿರೆ: ಧರ್ಮಸ್ಥಳ ಗ್ರಾಮದ ಬೊಳಿಯಾರು ನಿವಾಸಿ, ಪ್ರಸ್ತುತ ಲಾಯಿಲ ಗ್ರಾಮದ ಕಾಶಿಬೆಟ್ಟು ಎಂಬಲ್ಲಿ ವಾಸ್ತವ್ಯ ಇರುವ ಸಿವಿಲ್ ಗುತ್ತಿಗೆದಾರ ಸುರೇಂದ್ರ ಮತ್ತು ಸಿಂಧೂದೇವಿ ದಂಪತಿ ಪುತ್ರಿ ಆಕಾಂಕ್ಷ ಎಸ್. ನಾಯರ್ (22) ಮೇ 17ರಂದು ಪಂಜಾಬ್‌ನಲ್ಲಿ ನಿಗೂಢವಾಗಿ ಮೃತಪಟ್ಟಿದ್ದಾರೆ.
ಪಂಜಾಬ್‌ನ ಎಲ್‌ಪಿಯು ಪಗ್ವಾಡ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದಿದ್ದ ಅವರು ಆರು ತಿಂಗಳಿನಿಂದ ದೆಹಲಿಯಲ್ಲಿ ಜೆಟ್ ಏರೊಸ್ಪೇಸ್ ಎಂಜಿನಿಯರ್ ಆಗಿ ಉದ್ಯೋಗದಲ್ಲಿದ್ದರು. ಮುಂದೆ ಉದ್ಯೋಗ ನಿಮಿತ್ತ ಜಪಾನ್‌ಗೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದ ಅವರು, ಓದಿದ್ದ ಕಾಲೇಜಿನಿಂದ ಪ್ರಮಾಣಪತ್ರ ಪಡೆಯಲು ಶನಿವಾರ ತೆರಳಿದ್ದರು.
ಮಿತ್ರನ ಜತೆ ಬೈಕ್‌ನಲ್ಲಿ ಕಾಲೇಜಿಗೆ ಹೋಗಿದ್ದ ಅವರು, ಪ್ರಮಾಣಪತ್ರ ಪಡೆದ ಬಳಿಕ ಕುಟುಂಬದ ಸದಸ್ಯರ ಜೊತೆ ಮಾತನಾಡಿದ್ದರು. ಕೆಲವೇ ಕ್ಷಣಗಳ ಬಳಿಕ ಆಕೆ ಕಾಲೇಜಿನ ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿರುವುದಾಗಿ ಮಾಹಿತಿ ಬಂದಿತ್ತು. ಈ ಸಂಬಂಧ ಪಂಜಾಬ್‌ನ ಜಲಂಧರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
ಆಕೆಯ ಕುಟುಂಬದ ಸದಸ್ಯರೆಲ್ಲರೂ ಶನಿವಾರ ರಾತ್ರಿಯೇ ಪಂಜಾಬ್‌ಗೆ ತೆರಳಿದ್ದಾರೆ. ಸುರೇಂದ್ರ ಮತ್ತು ಸಿಂಧೂದೇವಿ ದಂಪತಿಗೆ ಪುತ್ರಿ ಆಕಾಂಕ್ಷ, ಮತ್ತೊಬ್ಬ ಪುತ್ರ ಇದ್ದು, ಅವರಿಗೆ ಇತ್ತೀಚೆಗೆ ಕೇರಳದಲ್ಲಿ ವಿವಾಹವಾಗಿತ್ತು.
ಶಾಸಕ ಹರೀಶ್ ಪೂಂಜ ಅವರು ಆಕಾಂಕ್ಷ ಕುಟುಂಬದವರನ್ನು ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ‘ಆಕಾಂಕ್ಷ ಅವರನ್ನು ಕೊಲೆ ಮಾಡಲಾಗಿದ್ದು, ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಈ ಬಗ್ಗೆ ತನಿಖೆ ಆಗಬೇಕು’ ಎಂದು ಆಕಾಂಕ್ಷ ಅವರ ಪೋಷಕರು ಶಾಸಕರಲ್ಲಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.