
ಪುತ್ತೂರು: ವಿದ್ಯುತ್ ತಂತಿ ತುಂಡಾಗಿ ಬಿದ್ದು ಸಂಭವಿಸಿದ ಬೆಂಕಿ ಅವಘಡದಲ್ಲಿ 3 ಎಕರೆಯಲ್ಲಿದ್ದ ಅಡಿಕೆ ಸಸಿಗಳು ಮತ್ತು ಗೇರು ಮರಗಳು ಸಂಪೂರ್ಣವಾಗಿ ಬೆಂಕಿಹಾಗುತಿಯಾದ ಘಟನೆ ಪುತ್ತೂರು ತಾಲ್ಲೂಕಿನ ಕುರಿಯ ಗ್ರಾಮದ ಬೂಡಿಯಾರ್ ಎಂಬಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಬೂಡಿಯಾರ್ ಗಣೇಶ್ ರೈ ಅವರಿಗೆ ಸೇರಿದ ಸುಮಾರು 1ಸಾವಿರ ಅಡಿಕೆ ಸಸಿಗಳು ಹಾಗೂ ಅವರ ಸಹೋದರ ಬಾಲಕೃಷ್ಣ ರೈ ಅವರಿಗೆ ಸೇರಿದ 50 ಗೇರು ಮರಗಳು ಬೆಂಕಿಗಾಹುತಿಯಾಗಿವೆ. ಗಣೇಶ್ ರೈ ಅವರ ತೋಟದ ಮೂಲಕ ಹಾದು ಹೋಗಿರುವ ತ್ರೀಫೇಸ್ ವಿದ್ಯುತ್ ತಂತಿ ತುಂಡಾಗಿ ಅವಘಡ ನಡೆದಿದೆ.
ಗಣೇಶ್ ರೈ ಅವರು ಅಡಿಕೆ ಸಸಿಗಳನ್ನು ನೆಟ್ಟ ಮೂರು ಎಕರೆ ಸ್ಥಳದಲ್ಲಿ ಒಣಗಿದ ಹುಲ್ಲು ಆವರಿಸಿಕೊಂಡಿತ್ತು. ಕಟಾವು ಮಾಡಿದ ಹುಲ್ಲುಗಳು ಹರಡಿತ್ತು. ಬೆಂಕಿಯ ಜ್ವಾಲೆ ವೇಗವಾಗಿ ಹರಡಿತು. ಪುತ್ತೂರು ಅಗ್ನಿ ಶಾಮಕ ಸಿಬ್ಬಂದಿ ಘಟನಾ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ. ಬೆಂಕಿ ಆವರಿಸಿದ ಭಾಗದ ಪಕ್ಕದಲ್ಲೇ ಗಣೇಶ್ ರೈ ಅವರ ಸಹೋದರ ಬೂಡಿಯಾರ್ ರಾಧಾಕೃಷ್ಣ ರೈ ಅವರಿಗೆ ಸೇರಿದ ಇಂಡಿಯನ್ ಗ್ಯಾಸ್ ಸಿಲಿಂಡರ್ ದಾಸ್ತಾನು ಕಟ್ಟಡವಿದ್ದು, ಆ ಕಟ್ಟಡದ ಬಳಿಗೆ ಮತ್ತು ಇನ್ನೊಂದು ಭಾಗದಲ್ಲಿದ್ದ ಕೋಳಿ ಫಾರ್ಮ್‌ಗೆ ಬೆಂಕಿ ಆವರಿಸುವುದನ್ನು ತಡೆಯುವ ಮೂಲಕ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.