ADVERTISEMENT

ಪುತ್ತೂರು | ಶಾರ್ಟ್‌ಸರ್ಕ್ಯೂಟ್‌ನಿಂದ ಕಿಡಿ: 300 ಎಕರೆ ಗೇರು ತೋಟ ಬೆಂಕಿಗಾಹುತಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 3:17 IST
Last Updated 9 ಜನವರಿ 2026, 3:17 IST
<div class="paragraphs"><p>300 ಎಕರೆ ಗೇರು ತೋಟ ಬೆಂಕಿಗಾಹುತಿ</p></div>

300 ಎಕರೆ ಗೇರು ತೋಟ ಬೆಂಕಿಗಾಹುತಿ

   

ಪುತ್ತೂರು (ದಕ್ಷಿಣ ಕನ್ನಡ): ನಗರದ ಹೊರವಲಯದಲ್ಲಿರುವ ಗೇರು ಅಭಿವೃದ್ಧಿ ನಿಗಮದ ಗೇರು ತೋಟದಲ್ಲಿ ಗುರುವಾರ ಬೆಂಕಿ ಅವಘಡ ಸಂಭವಿಸಿದ್ದು, ಸುಮಾರು 300 ಎಕರೆ ಗುಡ್ಡದಲ್ಲಿ ವ್ಯಾಪಿಸಿರುವ ಗೇರು ತೋಟ ಬಹುತೇಕ ಬೆಂಕಿಗಾಹುತಿಯಾಗಿದೆ.

ಪುತ್ತೂರು ತಾಲ್ಲೂಕಿನ ಕೋಡಿಂಬಾಡಿ, ಬನ್ನೂರು, ಪಡ್ನೂರು ಮತ್ತು ಬಂಟ್ವಾಳ ತಾಲ್ಲೂಕಿನ ಪೆರ್ನೆ, ಬಿಳಿಯೂರು ಗ್ರಾಮ ವ್ಯಾಪ್ತಿಯಲ್ಲಿ ಸುಮಾರು 300 ಎಕರೆಗಳಷ್ಟು ಗೇರು ತೋಟವನ್ನು ನಿಗಮವು ಹೊಂದಿದೆ. 

ADVERTISEMENT

ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಸಿಬ್ಬಂದಿ, ಗೇರು ಅಭಿವೃದ್ಧಿ ನಿಗಮದ ಸಿಬ್ಬಂದಿ ಹಾಗೂ ಸಾರ್ವಜನಿಕರು ಸೇರಿಕೊಂಡು ಬೆಂಕಿ ನಂದಿಸಲು ಹರಸಾಹಸ ಪಟ್ಟರು.

ಬನ್ನೂರಿನ ಸೇಡಿಯಾಪುವಿನಲ್ಲಿ ವೈದ್ಯಕೀಯ ಕಾಲೇಜಿಗೆ ಕಾಯ್ದಿರಿಸಿದ  ಜಾಗಕ್ಕೂ ಸಂಜೆ ವೇಳೆ ಬೆಂಕಿ ಹರಡಿತ್ತು. ರಾತ್ರಿ ವೇಳೆ ಕೆಲ ಪ್ರದೇಶಗಳಲ್ಲಿ ಬೆಂಕಿ ತಕ್ಕ ಮಟ್ಟಿಗೆ ಹತೋಟಿಗೆ ಬಂದಿತ್ತು. ಸೇಡಿಯಾಪು ಭಾಗದಲ್ಲಿ ಜನವಸತಿ ಪ್ರದೇಶದ ಸಮೀಪ  ಕೆಲ ಮರಗಳು ಹೊತ್ತಿ ಉರಿಯುತ್ತಿದ್ದುದು ಕಂಡು ಬಂದಿದೆ. ಇದರಿಂದ ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ.  

‘ಕೋಡಿಂಬಾಡಿ ವ್ಯಾಪ್ತಿಯಿಂದ ಬನ್ನೂರಿನ ಸೇಡಿಯಾಪುವರೆಗೂ ಬೆಂಕಿ ವ್ಯಾಪಿಸಿದೆ. ಸುಮಾರು 300 ಎಕರೆಯಷ್ಟು ಜಾಗದಲ್ಲಿದ್ದ ಗೇರುಮರಗಳು ಸುಟ್ಟು ಹೋಗಿವೆ. ಆಗಿರುವ ನಷ್ಟದ ಲೆಕ್ಕಾಚಾರ ಹಾಕುವುದು ಕಷ್ಟ. ಕೋಡಿಂಬಾಡಿಯಿಂದ 1 ಕಿ.ಮೀ ದೂರದಲ್ಲಿ ರಸ್ತೆ ಬದಿಯಲ್ಲಿ ಹಾದು ಹೋಗಿರುವ ವಿದ್ಯುತ್ ಮಾರ್ಗದಲ್ಲಿ ಆದ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಅವಘಡಕ್ಕೆ ಕಾರಣ. ಬೆಂಕಿ ಬಿದ್ದ ಭಾಗಕ್ಕೆ ಹೋಗಲು ರಸ್ತೆ ವ್ಯವಸ್ಥೆ ಇಲ್ಲದಿರುವುದರಿಂದ ಬೆಂಕಿ ನಂದಿಸುವ ಕಾರ್ಯಾಚರಣೆ  ಕಷ್ಟವಾಗಿದೆ’ ಎಂದು ಅಗ್ನಿಶಾಮಕ  ದಳದ ಅಧಿಕಾರಿಯೊಬ್ಬರು ತಿಳಿಸಿದರು. 

ಅರಣ್ಯ ಸಿಬ್ಬಂದಿಗೆ ಹಾವು ಕಡಿತ:

ಬನ್ನೂರಿನ ಸೇಡಿಯಾಪುವಿನಲ್ಲಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದ  ಅರಣ್ಯ ವೀಕ್ಷಕರೊಬ್ಬರಿಗೆ ವಿಷಪೂರಿತ ಹಾವು ಕಚ್ಚಿದೆ. ತಕ್ಷಣ ಅವರನ್ನು ಗೇರು ನಡುತೋಪು ಅಧೀಕ್ಷಕ ರವಿಪ್ರಸಾದ್ ಅವರು ಕಾರಿನಲ್ಲಿ ಕರೆದೊಯ್ದು ಪುತ್ತೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.