
ಮಂಗಳೂರು: ಸಹಪಾಠಿ ಯುವತಿಯೊಂದಿಗೆ ಸ್ನೇಹ ಬೆಳೆಸಿ, ಆಕೆ ತಾಯಿಯಾಗುವಂತೆ ಮಾಡಿ, ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ, ಆರೋಪಿ ಕೃಷ್ಣ ಜೆ. ರಾವ್ ಜೊತೆ ಸಂತ್ರಸ್ತ ಯುವತಿಯ ಮದುವೆ ಮಾಡುವುದಾಗಿ ಮಾತು ದೊರೆತಿರುವ ಕಾರಣ, ಜ.24ರಂದು ಕಲ್ಲಡ್ಕದಲ್ಲಿ ನಿಗದಿಯಾಗಿದ್ದ ಮಗುವಿನ ನಾಮಕರಣ ಶಾಸ್ತ್ರವನ್ನು ಮುಂದೂಡಲಾಗಿದೆ. ಜ.31ರೊಳಗೆ ಮದುವೆ ನಡೆಯದಿದ್ದರೆ ಫೆಬ್ರುವರಿ 7ರಂದು ನಾಮಕರಣ ಕಾರ್ಯಕ್ರಮ ನಡೆಸಲಾಗುವುದು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಹೇಳಿದರು.
ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆತನಿಂದಲೇ ಜನಿಸಿರುವ ಮಗು ಎಂದು ಡಿಎನ್‌ಎ ಪರೀಕ್ಷೆಯಲ್ಲಿ ಸಾಬೀತಾಗಿದ್ದರೂ, ಕೃಷ್ಣ ರಾವ್, ಸಂತ್ರಸ್ತ ಯುವತಿಯನ್ನು ಮದುವೆಯಾಗಲು ಒಪ್ಪಿರಲಿಲ್ಲ. ಈ ಮಗುವಿನ ನಾಮಕರಣ ಕಾರ್ಯಕ್ರಮವನ್ನು ಜ.24ಕ್ಕೆ ಕಲ್ಲಡ್ಕದಲ್ಲಿ ನಿಗದಿಪಡಿಸಲಾಗಿತ್ತು. ಆದರೆ, ಸಂತ್ರಸ್ತ ಯುವತಿಯ ತಾಯಿಗೆ, ಆಚಾರ್ಯ ಸಮುದಾಯದ ಉಡುಪಿ ಒಕ್ಕೂಟದ ಪದಾಧಿಕಾರಿ ಮಧು ಆಚಾರ್ಯ ಎಂಬುವವರು ಕರೆ ಮಾಡಿ, ಕೃಷ್ಣ ರಾವ್ ಮದುವೆಯಾಗಲು, ಆತನ ಕುಟುಂಬದವರು ಒಪ್ಪಿರುವುದಾಗಿ ಹೇಳಿದ್ದು, ಸ್ವಲ್ಪ ದಿನ ಕಾಲಾವಕಾಶ ಕೇಳಿದ್ದಾರೆ. ಮಗುವಿಗೆ ತೊಟ್ಟಿಲು ಹಾಕುವ ಕಾರ್ಯಕ್ರಮ ನಡೆಸಿದಂತೆಯೂ ಮನವಿ ಮಾಡಿದ್ದಾರೆ’ ಎಂದರು.
ಜ.31ರವರೆಗೆ ಮದುವೆಗೆ ಕಾಲಾವಕಾಶ ನೀಡಲಾಗಿದೆ. ಮದುವೆ ಆಗದಿದ್ದರೆ ಇನ್ನು ಯಾವುದೇ ಸಂಧಾನ ಇಲ್ಲ. ಫೆ.7ರಂದು ನಾಮಕರಣ ಮಾಡಲಾಗುವುದು ಮತ್ತು ಕಾನೂನು ಹೋರಾಟ ಮುಂದುವರಿಸಲಾಗುವುದು. ಆರು ತಿಂಗಳ ಹಿಂದೆ ಇದೇ ರೀತಿ ಮಾತು ಕೊಟ್ಟು ನಮ್ಮನ್ನು ದಾರಿ ತಪ್ಪಿಸಿದ್ದರು. ಈ ಬಾರಿ ಹಾಗಾಗಲು ಬಿಡುವುದಿಲ್ಲ. ಸಂಧಾನಕ್ಕೆ ಸಂತ್ರಸ್ತ ಯುವತಿ ಹಾಗೂ ಆಕೆಯ ತಾಯಿ ಮಾತ್ರ ಬರಬೇಕು ಎಂಬ ಷರತ್ತನ್ನು ವಿಧಿಸಿದ್ದಾರೆ. ಇದನ್ನು ಒಪ್ಪಲಾಗದು, ಪುತ್ತೂರು ಪೊಲೀಸ್ ಠಾಣೆ ಅಥವಾ ಮಂಗಳೂರು ಎಸ್‌ಪಿ ಕಚೇರಿಯಲ್ಲಿ ಸಂಧಾನ ನಡೆಯಲಿ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.