
ಪುತ್ತೂರು (ದಕ್ಷಿಣ ಕನ್ನಡ): ಪತ್ನಿಗೆ ಹಿಂಸೆ ನೀಡಿದ್ದ ಎನ್ನಲಾದ ವ್ಯಕ್ತಿಯೊಬ್ಬ ಗುರುವಾರ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದೊಳಗೆ ಬಂದು ನ್ಯಾಯಾಧೀಶರ ಎದುರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಗಂಭೀರ ಸ್ಥಿತಿಯಲ್ಲಿರುವ ಆತನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾಲ್ಲೂಕಿನ ಮಾಡ್ನೂರು ಗ್ರಾಮದ ಕಾವು ಮಾಣಿಯಡ್ಕ ನಿವಾಸಿ ರವಿ (37) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.
‘ರವಿ ಮತ್ತು ಪತ್ನಿ ವಿದ್ಯಾಶ್ರೀ ನಡುವೆ ದಾಂಪತ್ಯ ಕಲಹವಿತ್ತು. ರವಿ ಅವರು ಎರಡು ದಿನಗಳ ಹಿಂದೆ ವಿದ್ಯಾಶ್ರೀ ಜೊತೆ ಜಗಳವಾಡಿ ಹಲ್ಲೆ ನಡೆಸಿದ್ದರು. ಈ ಬಗ್ಗೆ ವಿದ್ಯಾಶ್ರೀ, ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದರು. ಅಲ್ಲಿನ ಪೊಲೀಸರ ಸೂಚನೆಯಂತೆ ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದರು. ಈ ನಡುವೆ ಅವರಿಬ್ಬರ ನಡುವೆ ವಿವಾಹ ವಿಚ್ಛೇದನದ ಮಾತುಕತೆಯೂ ನಡೆದಿತ್ತು’ ಎಂದು ಮೂಲಗಳು ತಿಳಿಸಿವೆ.
‘ಇದು ಕೌಟುಂಬಿಕ ವಿಚಾರದ ಕಲಹವಾಗಿರುವ ಕಾರಣ ತಿಳಿವಳಿಕೆ ನೀಡುವ ಸಲುವಾಗಿ ಪೊಲೀಸರು, ರವಿ ಅವರಿಗೆ ಕರೆ ಮಾಡಿ ಗುರುವಾರ ಠಾಣೆಗೆ ವಿಚಾರಣೆಗೆ ಬರುವಂತೆ ತಿಳಿಸಿದ್ದರು. ಈ ಮಧ್ಯೆ ರವಿ ನೇರವಾಗಿ ನ್ಯಾಯಾಲಯದ ಆವರಣಕ್ಕೆ ಹೋಗಿದ್ದರು. ವಿವಾಹ ವಿಚ್ಛೇದನಕ್ಕೆ ಸಂಬಂಧಿಸಿ ವಿದ್ಯಾಶ್ರೀಗೂ ಕೋರ್ಟ್ ಆವರಣಕ್ಕೆ ಬರುವಂತೆ ತಿಳಿಸಿದ್ದರಿಂದ ಆಕೆಯೂ ಅಲ್ಲಿಗೆ ಹೋಗಿದ್ದರು’ ಎಂದು ಮೂಲಗಳು ಹೇಳಿವೆ.
ರವಿ ಅವರು ಬಾಟಲಿಯೊಂದನ್ನು ಹಿಡಿದುಕೊಂಡು ನ್ಯಾಯಾಲಯದ ಒಳಗೆ ಹೋಗಿ ನ್ಯಾಯಾಧೀಶರ ಎದುರು, ಬಾಟಲಿಯಲ್ಲಿದ್ದ ವಿಷವನ್ನು ಸೇವಿಸಿದ್ದರು. ಇದನ್ನು ಗಮನಿಸಿದ ನ್ಯಾಯಾಧೀಶರು ಸಿಬ್ಬಂದಿಗೆ ಸೂಚನೆ ನೀಡುತ್ತಿದ್ದಂತೆ ರವಿ ಅವರು ಅಲ್ಲಿಯೇ ವಾಂತಿ ಮಾಡಿದ್ದರು. ಕೂಡಲೇ ಅವರನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರನ್ನು ಆಂಬುಲೆನ್ಸ್‌ನಲ್ಲಿ ಕರೆದೊಯ್ಯುವ ವೇಳೆ ವಿದ್ಯಾಶ್ರೀಯೂ ಜೊತೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.