ADVERTISEMENT

ತಿಂಗಳಾಡಿ: ಮಹಿಳೆಗೆ ಲೈಂಗಿಕ ಕಿರುಕುಳ ಆರೋಪಿ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2022, 18:53 IST
Last Updated 14 ಸೆಪ್ಟೆಂಬರ್ 2022, 18:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪುತ್ತೂರು (ದಕ್ಷಿಣ ಕನ್ನಡ): ತಾಲ್ಲೂಕಿನ ತಿಂಗಳಾಡಿಯಲ್ಲಿ ಸೂಪರ್ ಬಜಾರ್ ಮಳಿಗೆಯಲ್ಲಿ ಮಹಿಳೆಗೆ ಬುಧವಾರ ಸಂಜೆ ಲೈಂಗಿಕ ಕಿರುಕುಳ ನೀಡಿದ‌ ಆರೋಪಿಯನ್ನು ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ರಾತ್ರಿಯೇ ವಶಕ್ಕೆ‌ ಪಡೆದಿದ್ದಾರೆ.

ಆರೋಪಿಯನ್ನು ಸರ್ವೆ ಗ್ರಾಮದ ಸೊರಕೆಯ ಬದ್ರುದ್ದೀಬ್ ಎಂದು ಗುರುತಿಸಲಾಗಿದೆ.

ಮಹಿಳೆಯೊಬ್ಬರು ತಿಂಗಳಾಡಿಯ ನ್ಯೂ ಸೂಪರ್ ಬಜಾರ್ ಜನರಲ್ ಸ್ಟೋರ್ ಸ್ಟೀಟ್ ಸ್ಟಾಲ್ ಗೆ ಬುಧವಾರ ಸಂಜೆ ತೆರಳಿದ್ದರು. ಸಂಜೆ ಸುಮಾರು 6.35 ಗಂಟೆಗೆ ಸ್ವೀಟ್ ಖರೀದಿಸಿ ಅಂಗಡಿಯ ಮಾಲಿಕರಿಗೆ ಹಣವನ್ನು ನೀಡುತ್ತಿರುವಾಗ ಅಂಗಡಿಯೊಳಗೆ ಬಂದ ಆರೋಪಿಯು ಏಕಾಏಕಿ ಫಿರ್ಯಾದುದಾರರ ಸೊಂಟದ ಹಿಂಬದಿಗೆ ಕೈ ಹಾಕಿ ಫಿರ್ಯಾದುದಾರರ ನಿತಂಬವನ್ನು ಹಿಚುಕಿದ್ದ. ಆ ವೇಳೆ ಮಹಿಳೆ ಬೊಬ್ಬೆ ಹಾಕಿ ಆರೋಪಿಯನ್ನು ದೂರ ತಳ್ಳಲು ಯತ್ನಿಸಿದಾಗ ಆತನು ಅಂಗಡಿಯಿಂದ ಹೊರಗೆ ಓಡಿ ಹೋಗಿದ್ದ. ಅಂಗಡಿಯ ಮಾಲೀಕರಲ್ಲಿ ವಿಚಾರಿಸಿದಾಗ ಆ ಯುವಕನು ಸೊರಕೆಯ ಬದ್ರುದ್ದೀನ್ ಎಂದು ಗೊತ್ತಾಗಿದೆ. ಆರೋಪಿ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಮಹಿಳೆ ದೂರಿನಲ್ಲಿ ಕೋರಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನೆಯ ಬಗ್ಗೆ ಮಾಹಿತಿ ತಿಳಿದು ಸ್ಥಳೀಯ ಮುಖಂಡರು ಹಾಗೂ ಸಂಘ ಪರಿವಾರದ ಸಂಘಟನೆಗಳ ಪ್ರಮುಖರು ಸೇರಿದಂತೆ ನೂರಾರು ಮಂದಿ ಮಳಿಗೆ ಬಳಿ ಸೇರಿದ್ದರು. ಆರೋಪಿಯನ್ನು ತಕ್ಷಣ ಬಂಧಿಸದಿದ್ದರೆ ಗುರುವಾರ, ತಿಂಗಳಾಡಿ ಬಂದ್ ಮಾಡಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.