ADVERTISEMENT

ತಿಂಗಳಾಡಿ: ಸೂಪರ್‌ ಬಜಾರ್‌ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ

ಸ್ಥಳದಲ್ಲಿ ನೂರಾರು ಮಂದಿ ಜಮಾವಣೆ * ಆರೋಪಿ ಬಂಧಿಸದಿದ್ದರೆ ಪೇಟೆ ಬಂದ್‌– ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2022, 18:55 IST
Last Updated 14 ಸೆಪ್ಟೆಂಬರ್ 2022, 18:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪುತ್ತೂರು: ತಾಲ್ಲೂಕಿನ ತಿಂಗಳಾಡಿಯಲ್ಲಿ ಸೂಪರ್‌ ಬಜಾರ್‌ ಮಳಿಗೆಯಲ್ಲಿ ಸಾಮಗ್ರಿ ಖರೀದಿಸುತ್ತಿದ್ದ ಮಹಿಳೆಗೆ ಅಂಗಡಿ ಮಾಲಕನಿಲ್ಲದ ಸಂದರ್ಭ ಯುವಕನೊಬ್ಬ ಬುಧವಾರ ಸಂಜೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ನಡೆದ ಸೂಪರ್‌ ಬಜಾರ್‌ ಬಳಿ ನೂರಾರು ಮಂದಿ ಸೇರಿದ್ದು, ಆರೋಪಿಯನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಮಹಿಳೆಯೊಬ್ಬರು ಬುಧವಾರ ಸಂಜೆ ತಿಂಗಳಾಡಿಯಲ್ಲಿರುವ ಸೂಪರ್ ಬಜಾರ್ ಅಂಗಡಿಗೆ ಸಾಮಾನು ಖರೀದಿಸಲು ಬಂದಿದ್ದರು. ‘ಅಂಗಡಿ ಮಾಲಕರು ಚಹಾ ಕುಡಿಯಲೆಂದು ಹೊರಗಡೆ ಹೋಗಿದ್ದ ಸಂದರ್ಭ ಅಂಗಡಿಯಲ್ಲಿದ್ದ ವ್ಯಕ್ತಿಯೊಬ್ಬ ನನ್ನ ಮೈಮೇಲೆ ಕೈಹಾಕಿದ್ದ’ ಎಂದು ಮಹಿಳೆ ಆರೋಪಿಸಿದ್ದಾರೆ. ಮಹಿಳೆ ಮೇಲೆ ಕೈ ಹಾಕಿದ್ದ ಎನ್ನಲಾದ ವ್ಯಕ್ತಿಯನ್ನುಸೊರಕೆ ಓಲೆ ಮುಂಡೋವು ಸಮೀಪದ ನಿವಾಸಿ ಬದ್ರುದ್ದೀನ್ ಯಾನೆ ಬದ್ರು ಎಂದು ಗುರುತಿಸಲಾಗಿದೆ. ಮಹಿಳೆ ಬೊಬ್ಬೆ ಹೊಡೆದಾಗ ಸ್ಥಳದಲ್ಲಿ ಜನ ಸೇರುತ್ತಿದ್ದಂತೆಯೇ ಆತ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಈ ಮಾಹಿತಿ ತಿಳಿದು ಸ್ಥಳೀಯ ಮುಖಂಡರು ಹಾಗೂ ಸಂಘ ಪರಿವಾರದ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳ ನೂರಾರು ಯುವಕರು ಸ್ಥಳದಲ್ಲಿ ಸೇರಿದ್ದಾರೆ. ಆರೋಪಿಯನ್ನು ಸೆ.15ರ ಬೆಳಿಗ್ಗೆ 8 ಗಂಟೆಯೊಳಗೆ ಬಂಧಿಸದಿದ್ದರೆ, ತಿಂಗಳಾಡಿ ಪೇಟೆಯನ್ನು ಬಂದ್‌ ಮಾಡುವ ಮೂಲಕ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಆರೋಪಿಯನ್ನು ಶೀಘ್ರ ಬಂಧಿಸುವುದಾಗಿ ಪೊಲೀಸರು ಸ್ತಳದಲ್ಲಿ ಸೇರಿದ್ದವರಿಗೆ ಭರವಸೆ ನೀಡಿದ್ದಾರೆ.

ಕೆದಂಬಾಡಿ ಗ್ರಾ.ಪಂ.ಅಧ್ಯಕ್ಷ ರತನ್ ರೈ ಕುಂಬ್ರ, ಉಪಾಧ್ಯಕ್ಷ ಭಾಸ್ಕರ ರೈ ಮಿತ್ರಂಪಾಡಿ, ಸದಸ್ಯರಾದ ಪ್ರವೀಣ್ ಶೆಟ್ಟಿ ತಿಂಗಳಾಡಿ, ವಿಠಲ ರೈ ಮಿತ್ತೋಡಿ, ಟಿಎಪಿಸಿಎಂಎಸ್ ಅಧ್ಯಕ್ಷ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಅಶೋಕ್ ತ್ಯಾಗರಾಜನಗರ ಸೇರಿದಂತೆ ನೂರಾರು ಮಂದಿ ಸ್ಥಳದಲ್ಲಿದ್ದರು.

‘ತಿಂಗಳಾಡಿಯಲ್ಲಿ ಮಹಿಳೆಗೆ ವ್ಯಕ್ತಿಯೊಬ್ಬರು ಲೈಂಗಿಕ ಕಿರುಕುಳ ನೀಡಿದ ಬಗ್ಗೆ ದೂರು ಬಂದಿದ್ದು, ಎಫ್‌ಐಆರ್‌ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೃಷಿಕೇಶ್‌ ಸೊನಾವಣೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ತಿಂಗಳಾಡಿಯಲ್ಲಿ ಹಿಂದೂ ಮಹಿಳೆ ಮೇಲೆ ನಡೆದ ಲೈಂಗಿಕ ಕಿರುಕುಳ ಪ್ರಕರಣವು ಖಂಡನೀಯ.ಈ ವಿಚಾರದಲ್ಲಿ ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು‌ ಹೆಡೆಮುರಿ ಕಟ್ಟಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದ್ದೇನೆ’ ಎಂದು ಪುತ್ತೂರು ಕ್ಷೇತ್ರದ ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.