ADVERTISEMENT

ಪುತ್ತೂರು: ಕ್ರಿಮಿನಲ್ ಪ್ರಕರಣ ದಾಖಲಿಸಲು ಮಹಮ್ಮದ್ ಅಲಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 5:53 IST
Last Updated 27 ಅಕ್ಟೋಬರ್ 2025, 5:53 IST
ಎಚ್.ಮಹಮ್ಮದ್ ಅಲಿ
ಎಚ್.ಮಹಮ್ಮದ್ ಅಲಿ   

ಪುತ್ತೂರು: ‘ತಾಲ್ಲೂಕಿನ 34 ನೆಕ್ಕಿಲಾಡಿ ಗ್ರಾಮದ ಸರ್ವೆ ನಂಬ್ರ 54/1ರಲ್ಲಿ 0.06 ಎಕರೆ ಹಾಗೂ 0.16 ಎಕರೆ ವಿಸ್ತೀರ್ಣದ ಜಮೀನಿನ ಏಕ ನಿವೇಶನ ವಾಣಿಜ್ಯ ವಿನ್ಯಾಸ ನಕ್ಷೆಯ ಮಂಜೂರಾತಿ ಆದೇಶದಲ್ಲಿ ನಕಲು ಸಹಿ, ಕಚೇರಿ ಲೆಟರ್ ಹೆಡ್, ಮೊಹರು ನಕಲಿ ಮಾಡಿರುವ ಪ್ರಕರಣದ ಕುರಿತು ತನಿಖೆ ನಡೆಸಿ, ಪ್ರಕರಣದ ಹಿಂದಿರುವ ಜಾಲವನ್ನು ಪತ್ತೆಮಾಡಿ ಕಾನೂನುಕ್ರಮ ಕೈಗೊಳ್ಳಲು ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು’ ಎಂದು ಆಗ್ರಹಿಸಿ ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಮಹಮ್ಮದ್ ಅಲಿ ಅವರು ಪುತ್ತೂರು ಪೂಡಾದ ಸದಸ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದಾರೆ.

‘ಆ ಜಮೀನಿನ ಏಕನಿವೇಶನ ವಾಣಿಜ್ಯ ವಿನ್ಯಾಸ ನಕ್ಷೆಯ ಬಗ್ಗೆ ಮಾಡಿರುವ ಮಂಜೂರಾತಿ ಆದೇಶದ ಪತ್ರದಲ್ಲಿ ಸಹಿಯನ್ನು ನಕಲು ಮಾಡಿರುವುದು ಹಾಗೂ ತಪ್ಪು ಮಾಹಿತಿ ನೀಡಿ ವಿನ್ಯಾಸ ಅನುಮೋದನೆ ಪಡೆದಿರುವುದು ಕಂಡು ಬಂದಿದೆ. ಈ ವಿನ್ಯಾಸ ನಕ್ಷೆಯನ್ನು ರದ್ದು ಪಡಿಸಿ, ಈ ಕುರಿತು ನೀಡಲಾಗಿರುವ 9/11 ರದ್ದು ಪಡಿಸುವಂತೆ 34 ನೆಕ್ಕಿಲಾಡಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಪತ್ರ ಬರೆದಿದ್ದೀರಿ. ಆದರೆ, ನಿಮ್ಮ ಸಹಿ ಹಾಗೂ ಕಚೇರಿಯ ಮೊಹರು ಹಾಗೂ ಲೆಟರ್ ಹೆಡ್‌ನ್ನು ನಕಲಿ ಮಾಡಿರುವ ಗಂಭೀರ ಪ್ರಕರಣದ ಬಗ್ಗೆ ತನಿಖೆ ನಡೆಸಲು ಪೊಲೀಸ್ ಠಾಣೆಗೆ ದೂರು ನೀಡಬೇಕಾಗಿತ್ತು. ನಿಮ್ಮ ಧೋರಣೆ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ’ ಎಂದು ಅವರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

‘ಪ್ರಕರಣದ ಹಿಂದಿರುವ ಜಾಲವನ್ನು ಪತ್ತೆ ಹಚ್ಚಲು ಪೋಲಿಸ್‌ ಠಾಣೆಗೆ ದೂರು ನೀಡದೆ ಕರ್ತವ್ಯ ಲೋಪ ಎಸಗಿದ್ದೀರಿ. ಈ ಮಧ್ಯೆ ಸುದ್ದಿಗೋಷ್ಠಿಯೊಂದರಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಪ್ರಕರಣದಲ್ಲಿ ಪ್ರಮುಖ ಆರೋಪಿ 34-ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಸದಸ್ಯ ಪ್ರಶಾಂತ್ ಎಂಬುದಾಗಿ ಹೇಳಿಕೆ ನೀಡಿದ್ದೀರಿ. ಕಚೇರಿಯ ಸಿಬ್ಬಂದಿಗೆ ತೊಂದರೆಯಾಗಿರುವ ಕಾರಣಕ್ಕಾಗಿ ಪೊಲೀಸ್‌ ದೂರು ನೀಡಿಲ್ಲ ಎಂದು ಉತ್ತರಿಸಿದ್ದೀರಿ’ ಎಂದು ತಿಳಿಸಿದ್ದಾರೆ.

ADVERTISEMENT

‘ಈ ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದಾಗ ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಕಚೇರಿಯಿಂದ ತಾಂತ್ರಿಕ ಅನುಮೋದನೆ ನೀಡುವ ಮಾದರಿಯಂತಿರದೆ ವ್ಯತಿರಿಕ್ತ ಏಕ ವಿನ್ಯಾಸ ನಕ್ಷೆಯ ತಾಂತ್ರಿಕ ಅನುಮೋದನೆ ಪತ್ರವಿದೆ. ಈ ಪತ್ರದಲ್ಲಿ ರಾಜ್ಯ ಸರ್ಕಾರದ ಲಾಂಛನವನ್ನು ಮುದ್ರಿಸಲಾಗಿದೆ. ನಕ್ಷೆಯಲ್ಲಿ ಸದಸ್ಯ ಕಾರ್ಯದರ್ಶಿಯ ಮೊಹರುಗಳನ್ನು ನಕಲಿ ಮಾಡಲಾಗಿದೆ. ಈ ಪ್ರಕರಣದಲ್ಲಿ ಈ ಗಂಭೀರ ಅಂಶಗಳು ಇರುವುದರಿಂದ ಇದನ್ನು ತನಿಖೆ ನಡೆಸಿ ಇದರ ಹಿಂದಿರುವ ಜಾಲವನ್ನು ಪತ್ತೆ ಹಚ್ಚಬೇಕಾದದ್ದು ಕರ್ತವ್ಯವಾಗಿದೆ’ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

‘ಈ ಜಾಲದಲ್ಲಿರುವ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಈ ಜಾಲವನ್ನು ಪತ್ತೆಮಾಡಲು ಪೋಲಿಸ್ ಠಾಣೆಗೆ ದೂರು ನೀಡುವುದು ಅಗತ್ಯವಾಗಿದೆ’ ಎಂದು ಅವರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.