
ಪುತ್ತೂರು: ಯಾವುದೇ ಅಧಿಕಾರಿ ಇರಲಿ, ಕ್ಷೇತ್ರದ ಜನರ ಕೆಲಸ ಮಾಡಬೇಕು. ಅದರಲ್ಲೂ ಬಡವರ ಕೆಲಸವನ್ನು ಚಾಚೂ ತಪ್ಪದೆ ಮಾಡಬೇಕು. ಕೆಲಸ ಮಾಡದ ಅಧಿಕಾರಿಗಳು ಇಲ್ಲಿರುವುದು ಬೇಡ. ಜನರ ಕೆಲಸ ಮಾಡುವಲ್ಲಿ ಹಿಂದೇಟು ಹಾಕಿದರೆ ಬೈಗುಳ ಕೇಳಬೇಕಾದೀತು ಎಂದು ಶಾಸಕ ಅಶೋಕ್ ರೈ ಎಚ್ಚರಿಸಿದರು.
ಪಾಣಾಜೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ಸೋಮವಾರ ನಡೆದ ಅಕ್ರಮ ಸಕ್ರಮ ಬೈಠಕ್ ಉದ್ಘಾಟಿಸಿ ಅವರು ಮಾತನಾಡಿದರು.
ಚುನಾವಣಾ ಸಮಯದಲ್ಲಿ ರಾಜಕೀಯ ಪಕ್ಷದವರು, ಅಭ್ಯರ್ಥಿಗಳು ಜನರಿಗೆ ನಾನಾ ಭರವಸೆಗಳನ್ನು ನೀಡುತ್ತಾರೆ. ಚುನಾವಣೆಯ ಬಳಿಕ ಅದನ್ನು ಪೂರ್ಣವಾಗಿ ಮರೆತು ಬಿಡುತ್ತಾರೆ. ಆದರೆ ಕೊಟ್ಟ ಮಾತನ್ನು ಉಳಿಸಿಕೊಳ್ಳದಿದ್ದರೆ ಜನಪ್ರತಿನಿಧಿಗಳಿಗೆ ಜನರು ಗೌರವ ಕೊಡುವುದಿಲ್ಲ. ಕಳೆದ ಚುನಾವಣೆಯಲ್ಲಿ ನಾನು ಕ್ಷೇತ್ರದ ಜನತೆಗೆ ನೀಡಿದ್ದ 5 ಭರವಸೆಗಳ ಪೈಕಿ ಈಗಾಗಲೇ ನಾಲ್ಕನ್ನು ಈಡೇರಿಸಿದ್ದು, ಇನ್ನೊಂದು ಪ್ರಗತಿ ಹಂತದಲ್ಲಿದೆ ಎಂದರು.
ಪುತ್ತೂರಿಗೆ ಮೆಡಿಕಲ್ ಕಾಲೇಜು, ದೇವಸ್ಥಾನಗಳ ಅಭಿವೃದ್ದಿ, ಅಕ್ರಮ–ಸಕ್ರಮ, 94ಸಿ, 94 ಸಿಸಿ ಹಕ್ಕುಪತ್ರ ವಿತರಣೆ, ನಿವೇಶನ ರಹಿತರಿಗೆ ನಿವೇಶನ ಹಂಚಿಕೆ, ತಾಲ್ಲೂಕು ಕ್ರೀಡಾಂಗಣ ಸೇರಿದಂತೆ ಹತ್ತು ಹಲವು ಅಭಿವೃದ್ಧಿ ಕೆಲಸವನ್ನು ಮಾಡಿದ್ದು, ಮುಂದಿನ ಮೂರು ವರ್ಷದಲ್ಲಿ ಪುತ್ತೂರಿನಲ್ಲಿ 30 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂದರು.
ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಮಾತನಾಡಿ, ಜಿಲ್ಲೆಯ ಬಿಜೆಪಿ ನಾಯಕರು ಶಾಸಕ ಅಶೋಕ್ ರೈ ಅವರ ಜತೆ ಸೇರಿಕೊಂಡು ಕುಮ್ಕಿ ವಿಚಾರದಲ್ಲಿ ಹೋರಾಟ ನಡೆಸಬೇಕು ಎಂದು ಮನವಿ ಮಾಡಿದರು.
ತಹಶೀಲ್ದಾರ್ ಬಿ.ಎಸ್.ಕೂಡಲಗಿ, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ರಾಮಣ್ಣ ಪಿಲಿಂಜ, ರೂಪರೇಖಾ ಆಳ್ವ, ಪಾಣಾಜೆ ಪಂಚಾಯಿತಿ ಅಧ್ಯಕ್ಷೆ ಮೈಮೂನತುಲ್ ಮೆಹ್ರಾ ಹಾಜರಿದ್ದರು. ಕಂದಾಯ ನಿರೀಕ್ಷಕ ಗೋಪಾಲ ಸ್ವಾಗತಿಸಿದರು. ಉಪತಹಶೀಲ್ದಾರ್ ರವಿಕುಮಾರ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.