ಪುತ್ತೂರು: ‘ಪೊಲೀಸರಿಬ್ಬರು ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದಾರೆ’ ಎಂದು ಆರೋಪಿಸಿ ಪುತ್ತೂರು ತಾಲ್ಲೂಕಿನ ಕುರಿಯ ಗ್ರಾಮದ ಆಟೊ ಚಾಲಕ ಬಶೀರ್ ಅವರು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಲ್ಲೆ ಖಂಡಿಸಿ ಮತ್ತು ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಆಟೊ ಚಾಲಕರು ಪ್ರತಿಭಟನೆ ನಡೆಸಿದದರು.
‘ಶುಕ್ರವಾರ ಸಂಜೆ ನಾನು ಪುತ್ತೂರಿನ ಫಿಲೋಮಿನಾ ಕಾಲೇಜಿನ ಮುಂಭಾಗದ ಮುಖ್ಯ ರಸ್ತೆಯಲ್ಲಿ ರಿಕ್ಷಾ ನಿಲ್ಲಿಸಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದೆ. ಆ ವೇಳೆ ಏಕಮುಖ ರಸ್ತೆಯಲ್ಲಿ ಅಲ್ಲಿಗೆ ಬೈಕ್‌ನಲ್ಲಿ ಬಂದ ಪೊಲೀಸರು ನನ್ನ ಆಟೊಗೆ ಅಡ್ಡವಾಗಿ ಬೈಕ್ ನಿಲ್ಲಿಸಿದರು. ಬೆದರಿದ ನಾನು ಆಟೊ ಚಲಾಯಿಸಿಕೊಂಡು ಮುಂದಕ್ಕೆ ಹೋದೆ. ಆದರೆ, ನನ್ನನ್ನು ಬೆನ್ನಟ್ಟಿಕೊಂಡು ಬಂದ ಪೊಲೀಸರಾದ ಚಿದಾನಂದ ರೈ ಮತ್ತು ಶ್ರೀಶೈಲ ಅವರು ನನ್ನ ಆಟೊ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದರು. ನಾನು ಇವೆಲ್ಲವನ್ನೂ ವಿಡಿಯೊ ಮಾಡಿದ್ದೆ. ಹಲ್ಲೆ ನಡೆಸಿದ ಪೊಲೀಸರು ಬಳಿಕ ನನ್ನನ್ನು ಮತ್ತು ರಿಕ್ಷಾವನ್ನು ಠಾಣೆಗೆ ಕರೆದೊಯ್ದು ವಿಡಿಯೊ ಡಿಲೀಟ್ ಮಾಡುವಂತೆ ಒತ್ತಾಯಿಸಿ ಹಲ್ಲೆ ನಡೆಸಿದರು. ವೀಡಿಯೊ ಡಿಲೀಟ್ ಮಾಡದಿದ್ದರೆ ನಿಮ್ಮ ಮೇಲೆ ಪ್ರಕರಣ ದಾಖಲಿಸುತ್ತೇವೆ. ಎಫ್ಐಆರ್ ಮಾಡಿ ಜೈಲಿಗೆ ಕಳುಹಿಸುತ್ತೇವೆ ಎಂದು ಬೆದರಿಸಿದರು’ ಎಂದು ಆಸ್ಪತ್ರೆಗೆ ದಾಖಲಾಗಿರುವ ಬಶೀರ್ ಆರೋಪಿಸಿದ್ದಾರೆ.
ಘಟನೆ ಪುತ್ತೂರು ನಗರದ ದರ್ಬೆಯಲ್ಲಿ ನಡೆದಿದ್ದು, ಪೊಲೀಸರನ್ನು ಆಮಾನತುಗೊಳಿಸುವಂತೆ ಆಗ್ರಹಿಸಿ ಆಟೊ ಚಾಲಕರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಯಿತು.
ರಿಕ್ಷಾ ಚಾಲಕರು ಪುತ್ತೂರು ಆಸ್ಪತ್ರೆಯ ಮುಂಭಾಗದ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಬಂದ ಪುತ್ತೂರು ನಗರ ಠಾಣೆಯ ಎಸ್ಐ ಆಂಜನೇಯ ರೆಡ್ಡಿ ಪ್ರತಿಭಟನಾನಿರತರನ್ನು ಸಮಾಧಾನಗೊಳಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಪ್ರತಿಭಟನೆಯಲ್ಲಿ ಕೆಆರ್‌ಎಸ್ ಪಕ್ಷದ ದ.ಕ.ಜಿಲ್ಲಾ ಘಟಕದ ಅಧ್ಯಕ್ಷ ವೇಣುಗೋಪಾಲ್, ಜಿಲ್ಲಾ ಘಟಕದ ಕಾರ್ಯದಶಿ ಶಿವರಾಜ್, ಮುಖಂಡರಾದ ರಾಜೇಶ್ ಕುಮಾರ್, ಶಿಜು, ನವೀನ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.