ಉಪ್ಪಿನಂಗಡಿ (ದಕ್ಷಿಣ ಕನ್ನಡ): ಕಡಬ ತಾಲ್ಲೂಕಿನ ಕೊಯಿಲದಲ್ಲಿ ‘ಪುತ್ತೂರು ಪಶು ವೈದ್ಯಕೀಯ ಕಾಲೇಜು’ ಕಟ್ಟಡ ನಿರ್ಮಾಣವಾಗಿದೆ. ಆದರೆ, ಉಪಕರಣ ಸಹಿತ ಅಗತ್ಯ ಸೌಲಭ್ಯ ಕಲ್ಪಿಸದ ಕಾರಣ ಯೋಜನೆಯೇ ನನೆಗುದಿಗೆ ಬಿದ್ದಿದೆ. ಕಟ್ಟಡಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿವೆ.
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಬೀದರ್‌ನ ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಇಲ್ಲಿ ‘ಪುತ್ತೂರು ಪಶುವೈದ್ಯಕೀಯ ಕಾಲೇಜು’ ಆರಂಭಿಸಲು ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಕಟ್ಟಡಗಳು ದುಃಸ್ಥಿತಿಗೆ ತಲುಪಿವೆ.
ಡಿ.ವಿ.ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಇದನ್ನು ಮಂಜೂರು ಮಾಡಿದ್ದರು. 2016ರ ಅ.9ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಲಾನ್ಯಾಸ ನೆರವೇರಿಸಿದ್ದರು. ಇಲ್ಲಿಯ ಬೇಡಿಕೆಗೆ ಅನುಗುಣವಾಗಿ ಮೊದಲ ಹಂತದಲ್ಲಿ ₹ 142 ಕೋಟಿ ಅನುದಾನ ಮಂಜೂರು ಮಾಡಿ, ₹ 110 ಕೋಟಿ ವೆಚ್ಚದಲ್ಲಿ 5 ಹಂತದ ಕಟ್ಟಡ ಕಾಮಗಾರಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಅವಧಿ ಮುಗಿಯುವ ಕೆಲ ದಿನಗಳ ಮೊದಲು (2023 ಮಾರ್ಚ್ 24) ಅಪೂರ್ಣ ಕಟ್ಟಡವನ್ನು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದರು.
ದಾಖಲೆಯ ಪ್ರಕಾರ ಯೋಜನೆಯ ಒಂದು ಹಂತದ ಕಾಮಗಾರಿ 2023ರಲ್ಲಿ ಪೂರ್ಣಗೊಂಡಿದೆ. ಕೊಯಿಲ ಪಶು ಸಂಗೋಪನಾ ಕ್ಷೇತ್ರದ 247 ಎಕರೆಯ ಜಾಗದಲ್ಲಿ ಪಶು ವೈದ್ಯಕೀಯ ಆಸ್ಪತ್ರೆ, ಪಶು ವೈದ್ಯಕೀಯ ಕಾಲೇಜು, ಅತಿಥಿ ಗೃಹ, ವಿದ್ಯಾರ್ಥಿ, ವಿದ್ಯಾರ್ಥಿನಿಯರ ವಸತಿ ಗೃಹ ಸೇರಿ ಐದು ಬೃಹತ್ ಕಟ್ಟಡಗಳು ನಿರ್ಮಾಣವಾಗಿವೆ. ಬೆಂಗಳೂರು ಸ್ಟಾರ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಸಂಸ್ಥೆ ಕಾಮಗಾರಿ ನಿರ್ವಹಣೆ ಮಾಡಿದೆ.
ಕಳಪೆ ಕಾಮಗಾರಿ: ಕಟ್ಟಡ ನಿರ್ಮಾಣವಾಗಿ ಕೇವಲ ಮೂರು ವರ್ಷ ಆಗಿದ್ದು, ಗೋಡೆಗಳು ಬಿರುಕು ಬಿಟ್ಟಿವೆ. ಕಟ್ಟಡದ ಒಳಗೆ ಮಳೆ ನೀರು ಸೋರುತ್ತಿದೆ. ಗುಣಮಟ್ಟ ಪರಿಶೀಲನೆ ನಡೆಯಬೇಕು ಮತ್ತು ಕಳಪೆ ಕಾಮಗಾರಿ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂಬುದು ಕೊಯಿಲ ಜನಪರ ಹೋರಾಟ ಸಮಿತಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ರಾವ್ ಅವರ ಆಗ್ರಹ.
ಇಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಿ ಈ ಕಾಲೇಜು ಶೀಘ್ರ ಕಾರ್ಯನಿರ್ವಹಿಸುವಂತೆ ಮಾಡಬೇಕು ಎನ್ನುತ್ತಾರೆ ಕೊಯಿಲ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೆ.ಎ.ಸುಲೈಮಾನ್.
₹136 ಕೋಟಿ ವೆಚ್ಚದಲ್ಲಿ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಎರಡನೇ ಹಂತದ ಕಾಮಗಾರಿಗೆ ₹164 ಕೋಟಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಆದರೆ, ಅನುದಾನ ಬಂದಿಲ್ಲ. ಹೀಗಾಗಿ ಪಶುವೈದ್ಯಕೀಯ ಶಿಕ್ಷಣದ ಮಾನದಂಡ ಪ್ರಕಾರ ಕನಿಷ್ಠ ಸೌಲಭ್ಯ ಕಲ್ಪಿಸಲು ₹ 23 ಕೋಟಿ ಬಿಡುಗಡೆಗೆ ಬೇಡಿಕೆ ಸಲ್ಲಿಸಲಾಗಿದೆ. ಅದು ಬಂದ ಬಳಿಕ ಮುಂದಿನ ಶೈಕ್ಷಣಿಕ ವರ್ಷದಿಂದ ಕಾಲೇಜು ಆರಂಭಿಸಬಹುದು. ಕಟ್ಟಡ ಕಳಪೆಯಾಗಿರುವುದರ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ ಎಂದು ಕೊಯಿಲ ಪಶು ವೈದ್ಯಕೀಯ ಕಾಲೇಜಿನ ವಿಶೇಷ ಕರ್ತವ್ಯಾಧಿಕಾರಿ ಡಾ.ಶಿವಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.