ಮಂಗಳೂರು: ಬಂಧುಗಳ ಕಾರ್ಯಕ್ರಮಕ್ಕೆ ಹೋಗಲು ಅಣಿಯಾಗಿದ್ದ ಪತ್ನಿ ಮತ್ತು ಮಕ್ಕಳ ಬಳಿ ‘ಸ್ವಲ್ಪ ಹೊತ್ತಿನಲ್ಲೇ ಬರುತ್ತೇನೆ’ ಎಂದು ಹೇಳಿ ಮನೆಯಿಂದ ಮಂಗಳವಾರ ಸಂಜೆ ತೆರಳಿದ್ದ ಅಬ್ದುಲ್ ರಹಿಮಾನ್ ಕಡೆಗೂ ಮನೆಗೆ ಮರಳಲೇ ಇಲ್ಲ.
ಕಾರ್ಯಕ್ರಮಕ್ಕೆ ಕರೆದೊಯ್ಯಲು ಅಪ್ಪ ಬರುತ್ತಾರೆ ಎಂದು ಕಾದಿದ್ದ ಇಬ್ಬರು ಮಕ್ಕಳ ಹಾಗೂ ಪತಿ ಬಂದಾಗ ಕಾರ್ಯಕ್ರಮಕ್ಕೆ ಒಟ್ಟಿಗೆ ಹೊರಡಲು ಉತ್ತಮ ಬಟ್ಟೆ ಧರಿಸಿ ಅಣಿಯಾಗಿದ್ದ ಪತ್ನಿಯ ಆಸೆ ಕೊನೆಗೂ ಈಡೇರಲೇ ಇಲ್ಲ. ಮನೆಗೆ ರಹಿಮಾನ್ ಪಾರ್ಥಿವ ಶರೀರ ಬಂದಾಗ ಅವರ ಪತ್ನಿ ಫಾತಿಮತ್ ನುಸ್ರಾ ಮತ್ತು ಮಕ್ಕಳ (ಫಾತಿಮತ್ ನಶ್ವಾ ಮತ್ತು ಮೊಹಮ್ಮದ್ ನಶೀಫ್) ನೋವನ್ನು ಸಂತೈಸುವ ಧೈರ್ಯ ಅಲ್ಲಿದ್ದವರಿಗೆ ಇರಲಿಲ್ಲ.
‘ಅಬ್ದುಲ್ ರಹಿಮಾನ್ ಪಿಕಪ್ ವಾಹನವನ್ನು ಹೊಂದಿದ್ದು, ಅದರಲ್ಲಿ, ಮರಳು, ಕಲ್ಲು ಮೊದಲಾದ ನಿರ್ಮಾಣ ಸಾಮಗ್ರಿ ಸಾಗಿಸಿ ಅದರಲ್ಲಿ ಬರುವ ಬಾಡಿಗೆ ಹಣದಿಂದ ಬದುಕು ಸಾಗಿಸುತ್ತಿದ್ದರು. ಮಂಗಳವಾರ ಸಂಜೆ ಬಂಧುಗಳ ಮನೆಯಲ್ಲಿ ಕಾರ್ಯಕ್ರಮವೊಂದಕ್ಕೆ ತೆರಳಲು ಅಣಿಯಾಗಿದ್ದರು. ಅಷ್ಟರಲ್ಲಿ ಅವರ ಮೊಬೈಲ್‌ಗೆ ‘ತುರ್ತಾಗಿ ಮರಳು ಬೇಕು’ ಎಂದು ಪರಿಚಯದವರೊಬ್ಬರಿಂದ ಕರೆಬಂದಿತ್ತು. ಪತ್ನಿ ಫಾತಿಮತ್ ನುಸ್ರಾ ಹಾಗೂ ಮಕ್ಕಳಿಬ್ಬರನ್ನು ಅಣಿಯಾಗಿರುವಂತೆ ಹೇಳಿ ಮರಳು ಹಾಕಿಬರಲು ಅವರು ತೆರಳಿದ್ದರು’ ಎಂದು ರಹಿಮಾನ್ ಅವರ ಬಂಧುವೊಬ್ಬರು ತಿಳಿಸಿದರು.
‘ರಹಿಮಾನ್ ಊರಿಗೆ ಉಪಕಾರಿಯಾಗಿದ್ದ. ಎಲ್ಲರಿಗೆ ಒಳ್ಳೆಯದನ್ನೇ ಮಾಡುತ್ತಿದ್ದ. ಎಷ್ಟೋ ಬಡವರಿಗೆ ಉಚಿತವಾಗಿ ಮರಳು ನೀಡಿದ್ದ. ಅಂತಹವನನ್ನೇ ಗೆಳೆಯರೇ ಮರಳು ಬೇಕು ಎಂದು ಹೇಳಿ ಕರೆಸಿಕೊಂಡು ಕೊಂದರು’ ಎಂದು ಕಣ್ಣೀರಿಟ್ಟರು.
‘ತುಂಬಾ ಬಡ ಕುಟುಂಬದ ಹೆಣ್ಣನ್ನು ಹುಡುಕಿ ಆತ ಮದುವೆಯಾಗಿದ್ದ. ತನ್ನಕುಟುಂಬದ ಜೊತೆಗೆ ಪತ್ನಿಯ ಕುಟುಂಬಕ್ಕೂ ಆತನೇ ಆಧಾರವಾಗಿದ್ದ. ಕೊರೊನ ಸಮಯದಲ್ಲಿ ತಾಯಿ (ಐಸಮ್ಮ) ಆರೋಗ್ಯ ಹದಹಗೆಟ್ಟಿತ್ತು. ಅವರನ್ನು ಉಳಿಸಿಕೊಳ್ಳಲು ಕಷ್ಟಪಟ್ಟಿದ್ದ. ಕೊಳತ್ತಮಜಲು ಮೊಹಿಯುದ್ದೀನ್ ಜುಮ್ಮ ಮಸೀದಿಯಲ್ಲಿ ಕಾರ್ಯದರ್ಶಿಯಾಗಿ ಉತ್ತಮ ಕೆಲಸ ಮಾಡಿದ್ದ’ ಎಂದು ಅವರು ಮೆಲುಕು ಹಾಕಿದರು.
ಕೋಮುದ್ವೇಷ ಹರಡಲು ಕಾರಣವಾದ ವ್ಯಕ್ತಿಯನ್ನು ಬಂಧಿಸಿದ ಅರ್ಧಗಂಟೆಯಲ್ಲಿ ಆತನ ಬಿಡುಗಡೆಯಾಗುತ್ತದೆ. ಪರಿಸ್ಥಿತಿ ಹೀಗಾದರೆ ಅಮಾಯಕರು ಬದುಕುವುದು ಹೇಗೆ’ ಎಂದು ಅವರು ಪ್ರಶ್ನಿಸಿದರು.
- ಮರಳು ಇದ್ದರೂ ಮತ್ತೆ ತರಿಸಿಕೊಂಡರು?:
ಅಬ್ದುಲ್ ರಹಿಮಾನ್‌ಗೆ ಕರೆ ಮಾಡಿದ್ದ ಪರಿಚಯದ ವ್ಯಕ್ತಿ ‘ತುರ್ತಾಗಿ ಮರಳು ಬೇಕು’ ಎಂದು ಹೇಳಿದ್ದರು. ಅವರ ಮನೆಗೆ ರಹಿಮಾನ್ ತನ್ನ ಪಿಕಪ್ ವಾಹನದಲ್ಲಿ ಮರಳು ಕೊಂಡೊಯ್ದಾಗ ಅಲ್ಲಿ ಅದಾಗಲೇ ಎರಡು ಲೋಡ್ ಆಗುವಷ್ಟು ಮರಳು ಇತ್ತು. ಮರಳನ್ನು ಇಳಿಸುವಷ್ಟರಲ್ಲಿ ಸ್ಥಳಕ್ಕೆ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ತಲವಾರಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು’ ಎಂದು ಸ್ಥಳೀಯರೊಬ್ಬರು ತಿಳಿಸಿದರು. ‘ರಹಿಮಾನ್ ಜೊತೆ ಸಹಾಯಕನಾಗಿ ತೆರಳಿದ್ದ ಕಲಂದರ್ ಶಾಫಿ ದಾಳಿ ನಡೆದಾಗ ವಾಹನದಿಂದ ಜಿಗಿದು ತಪ್ಪಿಸಿಕೊಂಡಿದ್ದ. ಚಾಲಕನ ಸೀಟಿನಲ್ಲಿ ಕುಳಿತಿದ್ದ ರಹಿಮಾನ್ ಸುಲಭವಾಗಿ ದುಷ್ಕರ್ಮಿಗಳ ಕೈಗೆ ಸಿಕ್ಕ. ಚಿಕಿತ್ಸೆ ಪಡೆಯುತ್ತಿರುವ ಶಾಫಿ ಚೇತರಿಸಿಕೊಂಡಿದ್ದಾನೆ’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.