ಮಂಗಳೂರು: ನಗರದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದ ಸುತ್ತಮುತ್ತಲಿನ ಹೊಟೇಲ್‍ಗಳ ಮೇಲೆ ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿದ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ, ಹಸಿ ಕಸ ಮತ್ತು ಒಣ ಕಸ ಪ್ರತ್ಯೇಕಿಸದ ಹೋಟೆಲ್‌ಗಳಿಗೆ ದಂಡ ವಿಧಿಸಿದರು.
ಪಾಲಿಕೆ ಅಧಿಕಾರಿಗಳು, ಕಸದ ವಾಹನದ ಚಾಲಕರು, ಕಾರ್ಮಿಕರ ಜೊತೆ ಬಂದ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಅಂಬೇಡ್ಕರ್ ವೃತ್ತದಲ್ಲಿರುವ ಕುಡ್ಲ ರೆಸ್ಟೊರೆಂಟ್‌ಗೆ ತೆರಳಿ, ಅಲ್ಲಿ ಸಂಗ್ರಹಿಸಿಟ್ಟಿದ ಕಸದ ರಾಶಿಯನ್ನು ಪರಿಶೀಲಿಸಿದರು. ಪೌರ ಕಾರ್ಮಿಕರು ಕಸದ ಮೂಟೆಗಳನ್ನು ತೆರೆದಾಗ ಅದರಲ್ಲಿ ಹಸಿ ಹಾಗೂ ಒಣ ಕಸವನ್ನು ಒಟ್ಟಿಗೆ ಸೇರಿಸಿ ಇಡಲಾಗಿತ್ತು. ಇದನ್ನು ಕಂಡು ತೀವ್ರ ಅಸಮಾಧಾನಗೊಂಡ ಆಯುಕ್ತರು, ಹೋಟೆಲ್ ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡರು. ಸ್ಥಳದಲ್ಲೇ ₹5,000 ದಂಡ ವಿಧಿಸಿ, ಎಚ್ಚರಿಸಿದರು. ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಕಸವನ್ನು ಪ್ರತ್ಯೇಕಿಸಿ ಕೊಡುವಂತೆ ತಿಳಿವಳಿಕೆ ನೀಡಿದರು.
ನಂತರ ಅಲ್ಲೇ ಸಮೀಪದ ಫುಡ್ ಜಂಕ್ಷನ್, ಸಮಕ್ ಡೈನ್, ಕಂಕನಾಡಿಯ ಕೈರಾಲಿ ಹೋಟೆಲ್‌ಗಳಿಗೆ ಭೇಟಿ ನೀಡಿ, ಕಸ ಸಂಗ್ರಹಿಸಿರುವ ಜಾಗಗಳನ್ನು ಪರಿಶೀಲಿಸಿದರು. ಆಯುಕ್ತರು ಭೇಟಿ ನೀಡಿದ ಯಾವ ಹೋಟೆಲ್‌ನಲ್ಲೂ ಕಸ ಪ್ರತ್ಯೇಕಿಸಿ ಇಟ್ಟಿರಲಿಲ್ಲ. ಪೌರ ಕಾರ್ಮಿಕರಿಂದ ಕಸ ಮೂಟೆಗಳನ್ನು ಬಿಚ್ಚಿಸಿದ ಆಯುಕ್ತರು, ದುರ್ವಾಸನೆ ಬೀರುತ್ತಿದ್ದ ಕಸವನ್ನು ಕಂಡು ಬೇಸರ ವ್ಯಕ್ತಪಡಿಸಿದರು.
‘ಈಗಾಗಲೇ ಹಲವಾರು ಬಾರಿ ಹೋಟೆಲ್‌ಗಳು, ಅಪಾರ್ಟ್‌ಮೆಂಟ್‌ಗಳು, ಮನೆಗಳಿಗೆ ಕಸವನ್ನು ಪ್ರತ್ಯೇಕಿಸಿ ಕೊಡುವಂತೆ ಎಚ್ಚರಿಕೆ ನೀಡಲಾಗಿದೆ. ಈ ಬಗ್ಗೆ ಜನರಲ್ಲೂ ಜಾಗೃತಿ ಮೂಡಿಸಲಾಗಿದೆ. ಸದ್ಯದಲ್ಲಿ ಕರಪತ್ರ ವಿತರಿಸಲಾಗುತ್ತದೆ. ಮೊದಲ ಹಂತದಲ್ಲಿ ₹5,000 ದಂಡ ವಿಧಿಸಲಾಗಿದೆ. ಎರಡನೇ ಹಂತದಲ್ಲಿ ₹25 ಸಾವಿರ ದಂಡ ವಿಧಿಸಲಾಗುತ್ತದೆ. ನಿಯಮ ಪಾಲನೆ ಆಗದಿದ್ದರೆ ಮೂರನೇ ಹಂತದಲ್ಲಿ ಪರವಾನಗಿ ರದ್ದುಗೊಳಿಸಲಾಗುತ್ತದೆ’ ಎಂದು ರವಿಚಂದ್ರ ನಾಯಕ್ ತಿಳಿಸಿದರು.
ಮಂಗಳವಾರ ಒಟ್ಟು ₹20 ಸಾವಿರ ದಂಡ ಸಂಗ್ರಹಿಸಲಾಗಿದೆ. ಪ್ರತಿದಿನ ಒಂದೊಂದು ವಾರ್ಡ್‌ಗಳಲ್ಲಿ ಪರಿಶೀಲನೆ ನಡೆಸಲಾಗುತ್ತದೆ. ಕಸ ಪ್ರತ್ಯೇಕಿಸದೆ ನೀಡುವವರಿಗೆ ದಂಡ ವಿಧಿಸಲಾಗುತ್ತದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದರು.
ಆರೋಗ್ಯ ನಿರೀಕ್ಷಕ ಭಾಸ್ಕರ ಸಿ., ಸ್ಯಾನಿಟರಿ ಮೇಲ್ವಿಚಾರಕ ಲಕ್ಷ್ಮಣ ನಾವೂರ, ಸ್ವಚ್ಛತಾ ಮೇಲ್ವಿಚಾರಕ ವಸಂತ ಕುಮಾರ್ ಎಚ್, ಕಂದಾಯ ಅಧಿಕಾರಿ ವಿಜಯ ಕುಮಾರ್ ಹಾಗೂ ವಾರ್ಡ್ ನಂ.38ರ ಮನೆ ಕಸ ಸಂಗ್ರಹ ವಾಹನದ ಚಾಲಕ ಹಾಗೂ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.