ಮಂಗಳೂರು: ನಗರದ ಸೆಂಟ್ರಲ್ ರೈಲ್ವೆ ನಿಲ್ದಾಣ ಹಾಗೂ ಮಂಗಳೂರು ಜಂಕ್ಷನ್, ಜಿಲ್ಲೆಯ ವಿವಿಧೆಡೆಗಳಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಇವುಗಳ ನಡುವೆ ಹಲವು ಕೊರತೆಗಳು ಪ್ರಯಾಣಿಕರನ್ನು ಕಾಡುತ್ತಿವೆ.
ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಒಂದನೇ ಪ್ಲಾಟ್‌ಫಾರ್ಮ್ ಸುಸಜ್ಜಿತವಾಗಿದೆ. ಎರಡು ಮತ್ತು ಮೂರನೇ ಪ್ಲಾಟ್‌ಫಾರ್ಮ್‌ನಲ್ಲಿ ಚಾವಣಿ ಇದ್ದರೂ, ನಿರಂತರತೆ ಇಲ್ಲ. ಹೀಗಾಗಿ, ಪ್ರಯಾಣಿಕರು ಒಂದು ಕಡೆಯಿಂದ ಇನ್ನೊಂದು ಕಡೆ ಸಾಗಲು ಮಳೆಯಲ್ಲಿ ನೆನೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ರೈಲು ಹತ್ತುವ ಸ್ಥಳದಲ್ಲೂ ಕೆಲವು ಕಡೆ ಚಾವಣಿ ಇಲ್ಲ. ಪ್ರಯಾಣಿಕರು ಭಾರದ ಚೀಲಗಳನ್ನು ಕೈಯಲ್ಲಿ ಹಿಡಿದು, ಮಳೆಯಲ್ಲಿ ನೆನೆಯುತ್ತಲೇ ರೈಲಿನ ಬಾಗಿಲ ಬಳಿ ಬರುತ್ತಾರೆ.
ಸೆಂಟ್ರಲ್ ನಿಲ್ದಾಣದಲ್ಲಿ ನೆಲಹಾಸು ಸುಸಜ್ಜಿತಗೊಳಿಸುವ ಕಾರ್ಯ ನಡೆಯುತ್ತಿದೆ. ನೀರಿನ ವ್ಯವಸ್ಥೆ, ಕಸದ ತೊಟ್ಟಿ ಅಲ್ಲಲ್ಲಿ ಇರುವುದು ಪ್ರಯಾಣಿಕರಿಗೆ ಅನುಕೂಲವಾಗಿದೆ. ಹೊರಡಲಿರುವ ರೈಲಿನ ವಿವರಗಳ ಘೋಷಣೆ ಕನ್ನಡ, ಇಂಗ್ಲಿಷ್, ಹಿಂದಿಯಲ್ಲಿ ಮೊಳಗುತ್ತದೆ. ಆದರೆ, ಯಾವುದೇ ಮಾಹಿತಿ ಕೇಳಲು ಇಲ್ಲಿನ ಕಚೇರಿಗೆ ಹೋದರೆ, ಅಧಿಕಾರಿಗಳಿಗೆ ಕನ್ನಡ ಬರುವುದಿಲ್ಲ, ಮಲೆಯಾಳ ಮಾತನಾಡುವವರೇ ಹೆಚ್ಚು. ಸಂವಹನವೇ ದೊಡ್ಡ ಸಮಸ್ಯೆಯಾಗಿದೆ ಎನ್ನುತ್ತಾರೆ ವಿಜಯಪುರ ರೈಲಿಗೆ ಕಾಯುತ್ತ ಕುಳಿತಿದ್ದ ಕಾರ್ಮಿಕ ಬಸವರಾಜ.
ಸೆಂಟ್ರಲ್‌ನಲ್ಲಿ ಒಂದು ನಿಲ್ದಾಣ ಒಂದು ಉತ್ಪನ್ನ ಮಳಿಗೆ ಇದೆ. ಇಲ್ಲಿ ಖಾದಿ ಉತ್ಪನ್ನಗಳನ್ನು ಮಾರಾಟಕ್ಕೆ ಇಡಲಾಗಿದೆ. ‘ಆನ್‌ಲೈನ್ ಪೇಮೆಂಟ್ ನೆಚ್ಚಿಕೊಂಡಿರುವ ಯುವಜನರು ಕೈಯಲ್ಲಿ ನಗದು ಇಲ್ಲದೆ ರೈಲ್ವೆ ನಿಲ್ದಾಣಕ್ಕೆ ಬರುತ್ತಾರೆ. ಹಣದ ಅಗತ್ಯ ಬಂದರೆ ಅಂಗಡಿಗಳಿಗೆ ಬಂದು ಗೂಗಲ್ ಪೇ ಮಾಡಿ, ನಮ್ಮ ಬಳಿ ನಗದು ಪಡೆಯುತ್ತಾರೆ. ನಿಲ್ದಾಣದಲ್ಲಿ ಒಂದು ಎಟಿಎಂ ಕೂಡ ಇಲ್ಲ ಎಂದು ಗೊಣಗಿಕೊಂಡು ಹೋಗುತ್ತಾರೆ. ಹಲವಾರು ಬಾರಿ ಈ ಅನುಭವ ಆಗಿದೆ’ ಎನ್ನುತ್ತಾರೆ ಖಾದಿ ಮಳಿಗೆಯ ಚೇತನ್ ಕುಮಾರ್.
‘ಸೆಂಟ್ರಲ್ ಎ+ ಕೆಟೆಗರಿಯ ನಿಲ್ದಾಣ ಆಗಿದ್ದು, ಇಲ್ಲಿ ಇನ್ನೂ ಹೆಚ್ಚು ಸೌಲಭ್ಯಗಳ ಅಗತ್ಯ ಇದೆ. ಫ್ಲಾಟ್‌ಫಾರ್ಮ್ 2 ಮತ್ತು 3ರಲ್ಲಿ ನೆಲಹಾಸು ಕಿತ್ತು ಹೋಗಿದೆ. ಪೂರ್ಣ ಪ್ರಮಾಣದಲ್ಲಿ ಚಾವಣಿ ಇಲ್ಲ. 4 ಮತ್ತು 5ಕ್ಕೆ ಚಾವಣಿ ನಿರ್ಮಾಣ ಆಗಬೇಕಾಗಿದೆ. ಸಹಸ್ರಾರು ಜನರು ಬಂದು ಹೋಗುವ, ಭವಿಷ್ಯದಲ್ಲಿ ಇನ್ನಷ್ಟು ರೈಲುಗಳಿಗೆ ಆಸರೆಯಾಗುವ ಈ ನಿಲ್ದಾಣದಲ್ಲಿ, ನಂದಿನಿಯಂತಹ ಬ್ರ್ಯಾಂಡೆಡ್ ಮಳಿಗೆಗಳನ್ನು ಹಾಕಲು ಯೋಚಿಸಬೇಕು. ಇಲ್ಲಿ ಸಸ್ಯಾಹಾರಿ ಹೋಟೆಲ್ ಕೊರತೆ ಇರುವ ಬಗ್ಗೆ ಅನೇಕ ಪ್ರಯಾಣಿಕರು ಹೇಳಿಕೊಂಡಿದ್ದಾರೆ’ ಎನ್ನುತ್ತಾರೆ ಪಶ್ಚಿಮ ಕರಾವಳಿ ರೈಲ್ವೆ ಅಭಿವೃದ್ಧಿ ಸಮಿತಿಯ ತಾಂತ್ರಿಕ ಸಲಹೆಗಾರ ಅನಿಲ್ ಹೆಗ್ಡೆ.
‘ನಿಲ್ದಾಣದ ಅತ್ತಾವರ ಭಾಗದಲ್ಲಿ ಸುರಕ್ಷತೆಯ ಕೊರತೆ ಇದೆ. ಇಲ್ಲಿ ಸುರಕ್ಷಾ ಕ್ರಮ ಕೈಗೊಳ್ಳುವ ಜೊತೆಗೆ ಅಲ್ಲಿಯೇ ಒಂದು ಟಿಕೆಟ್ ಕೌಂಟರ್ ತೆರೆದರೆ ಪ್ರಯಾಣಿಕರಿಗೆ ಅನುಕೂಲ. ಸೆಂಟ್ರಲ್‌ನಿಂದ ಜಂಕ್ಷನ್ ನಡುವಿನ ಒಂದು ಕಿ.ಮೀ. ಬಾಕಿ ಇರುವ ಹಳಿ ಡಬ್ಲಿಂಗ್ ಕಾರ್ಯಕ್ಕೆ ಚಾಲನೆ ನೀಡಬೇಕು. ಜಂಕ್ಷನ್‌ನಲ್ಲಿ ಪ್ರಾರಂಭವಾಗಿರುವ 4 ಮತ್ತು 5ನೇ ಪ್ಲಾಟ್‌ಫಾರ್ಮ್ ನಿರ್ಮಾಣ ಕಾಮಗಾರಿಗೆ ವೇಗ ನೀಡಬೇಕು. ಜಂಕ್ಷನ್‌ನಲ್ಲಿ ಅಧಿಕೃತ ಕೂಲಿಗಳ ನೇಮಕಕ್ಕೆ ಕ್ರಮವಾಗಬೇಕು’ ಎನ್ನುತ್ತಾರೆ ರೈಲ್ವೆ ಹೋರಾಟಗಾರ ಜಿ.ಕೆ. ಭಟ್.
ಜಂಕ್ಷನ್‌ನಲ್ಲಿ ನೆಲಕ್ಕೆ ಕಾಂಕ್ರೀಟ್ ಹಾಕಿ, ಟೈಲ್ಸ್ ಅಳವಡಿಸುವ ಕಾರ್ಯ ನಡೆಯುತ್ತಿದೆ. ಒಂದು ವಾರದಲ್ಲಿ ಈ ಕೆಲಸ ಪೂರ್ಣಗೊಳ್ಳಬಹುದು ಎಂದು ಕಾಮಗಾರಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸಿಬ್ಬಂದಿ. ಜಂಕ್ಷನ್ ನಿಲ್ದಾಣದಲ್ಲೂ ಪ್ಲಾಟ್‌ಫಾರ್ಮ್‌ಗಳ ನಡುವಿನ ಜಾಗದಲ್ಲಿ ಚಾವಣಿ ಇಲ್ಲದ ಕಾರಣ ಪ್ರಯಾಣಿಕರು ಮಳೆಯಲ್ಲೇ ನೆನೆದುಕೊಂಡು ಹೋಗುವ ದೃಶ್ಯ ಸಾಮಾನ್ಯವಾಗಿದೆ.
ಕೇರಳ ಲಾಬಿಯಿಂದ ಮಂಗಳೂರಿನ ನಿಲ್ದಾಣಗಳು ಸೊರಗಿವೆ. ಕರ್ನಾಟಕದ ರೈಲುಗಳಿಗೆ ಮಂಗಳೂರಿನ ನಿಲ್ದಾಣದಲ್ಲಿ ನಿಲುಗಡೆಗೆ ಪ್ರಾಮುಖ್ಯ ಸಿಗಬೇಕು. ಮಂಗಳೂರು ಸೆಂಟ್ರಲ್- ಕಬಕ– ಪುತ್ತೂರು ಪ್ಯಾಸೆಂಜರ್ ರೈಲಿಗೆ ನೇರಳಕಟ್ಟೆಯಲ್ಲಿ ನಿಲುಗಡೆ ಕೊಡಬೇಕು ಎಂಬುದು ಪ್ರಯಾಣಿಕರ ಬೇಡಿಕೆಯಾಗಿದೆ ಎನ್ನುತ್ತಾರೆ ಹೋರಾಟಗಾರ ವಿನಯಚಂದ್ರ.
ಸ್ವಚ್ಛತೆಯ ಕೊರತೆ: ಪುತ್ತೂರು ರೈಲ್ವೆ ನಿಲ್ದಾಣದಲ್ಲಿ ಪ್ರವೇಶ ದ್ವಾರದ ಎದುರಿನಲ್ಲಿ ಮಾತ್ರ ಚಾವಣಿಯ ಸುರಕ್ಷೆ ಇದೆ. ಉಳಿದ ಪ್ಲಾಟ್‌ಫಾರ್ಮ್‌ಗಳಿಗೆ ಹೋಗುವಾಗ ಮಳೆಯಲ್ಲೇ ಸಾಗಬೇಕು. ಕಸದ ತೊಟ್ಟಿ ಇಲ್ಲದ ಕಾರಣ ಪ್ರಯಾಣಿಕರು ಅಲ್ಲಲ್ಲೇ ಕಸ ಬಿಸಾಡುತ್ತಾರೆ. ನಿಲ್ದಾಣವು ಸ್ವಚ್ಛತೆಯ ಕೊರತೆಯಿಂದ ಬಳಲುತ್ತಿದೆ. ಶೌಚಾಲಯ ನಿರ್ವಹಣೆಯೂ ಸಮರ್ಪಕವಾಗಿಲ್ಲ ಎಂದು ಆರೋಪಿಸುತ್ತಾರೆ ನಿತ್ಯ ಸಂಚರಿಸುವ ಪ್ರಯಾಣಿಕರು.
ಪುತ್ತೂರು ಪೇಟೆಯಿಂದ ರೈಲ್ವೆ ನಿಲ್ದಾಣಕ್ಕೆ ಬಸ್ ವ್ಯವಸ್ಥೆ ಇಲ್ಲ. ರಿಕ್ಷಾಕ್ಕೆ ₹80ರಿಂದ ₹100 ಕೊಟ್ಟು ನಗರ ತಲುಪಬೇಕು. ನಡುರಾತ್ರಿ ಬರುವ ಅನೇಕ ರೈಲುಗಳಿಗೆ ಇಲ್ಲಿ ನಿಲುಗಡೆ ಇದೆ. ರಾತ್ರಿ ಬರುವ ಪ್ರಯಾಣಿಕರು ರಿಕ್ಷಾ ಚಾಲಕರು ಹೇಳಿದಷ್ಟು ಹಣಕೊಟ್ಟು ಮನೆ ತಲುಬೇಕಾದ ಸ್ಥಿತಿ. ಕೆಲವೊಮ್ಮೆ ರೈಲಿನ ದರಕ್ಕಿಂತ ರಿಕ್ಷಾ ದರವೇ ಅಧಿಕವಾಗುತ್ತದೆ ಎಂದು ಪ್ರಯಾಣಿಕರೊಬ್ಬರು ಬೇಸರಿಸಿದರು.
ಶೌಚಾಲಯ ದುಃಸ್ಥಿತಿ: ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರತಿದಿನ ಸಹಸ್ರಾರು ಭಕ್ತರು ರೈಲಿನಲ್ಲಿ ಬರುತ್ತಾರೆ. ನಿಲ್ದಾಣದಲ್ಲಿ ಅಮೃತ್ ಭಾರತ ಯೋಜನೆಯಡಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದರೂ, ಆದ್ಯತೆ ಮೇಲೆ ಕೆಲಸಗಳು ನಡೆಯುತ್ತಿಲ್ಲ. ನಿಲ್ದಾಣದಲ್ಲಿರುವ ಶೌಚಾಲಯದ ಸೆಪ್ಟಿಕ್ ಟ್ಯಾಂಕ್ ಸಾಮರ್ಥ್ಯ ಕಡಿಮೆ ಇದ್ದು, ಟ್ಯಾಂಕ್‌ನಿಂದ ಹೊಸಲು ನೀರು ಉಕ್ಕಿ ಹರಿಯುವ ದೃಶ್ಯ ನಿತ್ಯ ನೂತನವಾಗಿದೆ. ಶೌಚಾಲಯದ ದುಃಸ್ಥಿತಿ ಕಂಡು ಕೆಲವರು, ಅಲ್ಲಿ ಹೋಗಲು ಅಸಹ್ಯಪಟ್ಟು, ರಸ್ತೆ ಬದಿಯಲ್ಲಿ ಕುಳಿತು ತಮ್ಮ ಪ್ರಕೃತಿಯ ಕರೆ ಪೂರೈಸಿಕೊಳ್ಳುತ್ತಾರೆ ಎನ್ನುತ್ತಾರೆ ಸ್ಥಳೀಯರು.
ಅಮೃತ ಭಾರತ ಯೋಜನೆಯಡಿ ಬಂಟ್ವಾಳ, ಸುಬ್ರಹ್ಮಣ್ಯ ರೋಡ್ ಹಾಗೂ ಮಂಗಳೂರು ಜಂಕ್ಷನ್ ರೈಲು ನಿಲ್ದಾಣಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದರೂ, ಇವು ಆಮೆವೇಗದಲ್ಲಿ ಸಾಗುತ್ತಿವೆ.
ಮಂಗಳೂರು –ಸುಬ್ರಹ್ಮಣ್ಯ ರೈಲು ಮಂಗಳೂರಿನಿಂದ ಸಂಜೆ 5.45ಕ್ಕೆ ಹೊರಡುತ್ತದೆ. ಇದನ್ನು ಮೊದಲಿನಂತೆ 6ಕ್ಕೆ ಅಥವಾ 6.10ಕ್ಕೆ ಹೊರಡುವಂತೆ ವೇಳಾಪಟ್ಟಿ ಬದಲಿಸಬೇಕು.
-ಶ್ರೀಕರ್ ಬಿ ಪ್ರಯಾಣಿಕ
ಸುಬ್ರಹ್ಮಣ್ಯ ನಿಲ್ದಾಣಕ್ಕೆ ನಿತ್ಯ ಸಹಸ್ರಾರು ಪ್ರಯಾಣಿಕರು ಬರುತ್ತಾರೆ. ಇಲ್ಲಿ ಕಳ್ಳತನದ ಪ್ರಕರಣಗಳು ನಡೆಯುತ್ತಿದ್ದು ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು.
-ಪ್ರಸಾದ್ ನೆಟ್ಟಣ ಸ್ಥಳೀಯ
ಬೇಡಿಕೆ ಪಟ್ಟಿ ಸಲ್ಲಿಸಲಿ’ ಬಹು ವರ್ಷಗಳ ಬೇಡಿಕೆಯಾಗಿದ್ದ ಮಂಗಳೂರು ಸೆಂಟ್ರಲ್- ಕಬಕ– ಪುತ್ತೂರು ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯ ರೋಡ್‌ವರೆಗೆ ವಿಸ್ತರಣೆ ಮಾಡಲಾಗಿದೆ. ನಷ್ಟದ ಸುಳಿಗೆ ಸಿಲುಕಿರುವ ಕೊಂಕಣ ರೈಲ್ವೆ ನಿಗಮವನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನ ಮಾಡಬೇಕು ಹಾಗೂ ಮಂಗಳೂರು ರೈಲ್ವೆ ವ್ಯಾಪ್ತಿಯ ಆಡಳಿತಾತ್ಮಕ ಪುನರ್ ರಚನೆ ಮಾಡಬೇಕು ಎಂದು ಸಂಸತ್‌ನಲ್ಲಿ ವಿಷಯ ಮಂಡಿಸಲಾಗಿದೆ. ಹಳಿ ಡಬ್ಲಿಂಗ್ ಕಾರ್ಯ ನಡೆಯುತ್ತಿದೆ. ಅಮೃತ್ ಭಾರತ್ ಯೋಜನೆಯ ಕಾಮಗಾರಿಗೆ ವೇಗ ನೀಡುವಂತೆ ತಿಳಿಸಲಾಗಿದೆ. ಸೆಂಟ್ರಲ್ ನಿಲ್ದಾಣ ಹಾಗೂ ಜಂಕ್ಷನ್‌ನಲ್ಲಿ ಅಗತ್ಯವಿರುವ ಸೌಲಭ್ಯಗಳ ಬೇಡಿಕೆ ಪಟ್ಟಿಯನ್ನು ಪ್ರಯಾಣಿಕರು ಸಲ್ಲಿಸಿದಲ್ಲಿ ಆದ್ಯತೆಯಲ್ಲಿ ಪರಿಗಣಿಸಲಾಗುವುದು ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಯಾಣಿಕರ ಪ್ರಮುಖ ಬೇಡಿಕೆಗಳು * ಸೆಂಟ್ರಲ್ ಹಾಗೂ ಜಂಕ್ಷನ್ ರೈಲು ನಿಲ್ದಾಣಗಳಲ್ಲಿ ಸಸ್ಯಾಹಾರಿ ಕೌಂಟರ್ * ಸೆಂಟ್ರಲ್‌ನಲ್ಲಿ ಪ್ರಮುಖ ಬ್ರ್ಯಾಂಡ್‌ಗಳ ಮಳಿಗೆಗಳು * ಎರಡೂ ಪ್ರಮುಖ ನಿಲ್ದಾಣಗಳಲ್ಲಿ ಎಟಿಎಂ ಸೌಲಭ್ಯ * ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ಸೆಂಟ್ರಲ್ ವರೆಗೆ ಬರಬೇಕು * 24X7 ಪ್ರಿ ಪೇಯ್ಡ್ ರಿಕ್ಷಾ ವ್ಯವಸ್ಥೆ * ರೈಲ್ವೆ ನಿಲ್ದಾಣಗಳಲ್ಲಿ ಕನ್ನಡ ಮಾತನಾಡುವ ಸಿಬ್ಬಂದಿ * ಸೆಂಟ್ರಲ್‌ನ 4 ಅಥವಾ 5ನೇ ಪ್ಲಾಟ್‌ಫಾರ್ಮ್‌ನಲ್ಲಿ ಎ.ಸಿ ಲಾಂಜ್ * ಸೆಂಟ್ರಲ್‌ನಲ್ಲಿ ವಾಹನ ಪಾರ್ಕಿಂಗ್ ವಿಸ್ತರಣೆ ಅಥವಾ ಬಹುಮಹಡಿ ಪಾರ್ಕಿಂಗ್ * ಜಂಕ್ಷನ್‌ನಲ್ಲಿ ಬಸ್‌ಗಳು ಬಂದು ಹೋಗುವ ಹಾಗೆ ಆಗಬೇಕು * ನಾಗುರಿಯಿಂದ ಜಂಕ್ಷನ್ ತಲುಪುವ ರಸ್ತೆ ವಿಸ್ತರಣೆ * ರಸ್ತೆ ವಿಸ್ತರಣೆಯಿಂದ ಮೂಡುಬಿದಿರೆ ಕಾರ್ಕಳ ಹೋಗುವ ಬಸ್‌ಗಳಿಗೆ ರೈಲ್ವೆ ನಿಲ್ದಾಣ ಮಾರ್ಗವಾಗಿ ಹೋಗಲು ಅನುಕೂಲ * ಎರಡೂ ನಿಲ್ದಾಣಗಳಲ್ಲಿ ಎಲಿವೇಟರ್‌ಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.