ADVERTISEMENT

ಮುಡಿಪು ವ್ಯಾಪ್ತಿಯಲ್ಲಿ ಗಾಳಿ-ಮಳೆ: ಹೂಹಾಕುವಕಲ್ಲು ಬಳಿ ಶಾಲೆ, ಮನೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 17:27 IST
Last Updated 11 ಏಪ್ರಿಲ್ 2019, 17:27 IST
ಮುಡಿಪು ಸಮೀಪದ ಹೂಕುವ ಕಲ್ಲು ಬಳಿಯ ಸರ್ಕಾರಿ ಶಾಲೆಗೆ ಹಾನಿ ಉಂಟಾಗಿರುವುದು.
ಮುಡಿಪು ಸಮೀಪದ ಹೂಕುವ ಕಲ್ಲು ಬಳಿಯ ಸರ್ಕಾರಿ ಶಾಲೆಗೆ ಹಾನಿ ಉಂಟಾಗಿರುವುದು.   

ಮುಡಿಪು: ಗುರುವಾರ ಸಂಜೆ ಮುಡಿಪು ಪರಿಸರದಲ್ಲಿ ಸುರಿದ ಬಾರಿ ಗಾಳಿ ಮಳೆಗೆ ಹೂಹಾಕುವಕಲ್ಲಿನ ಸರ್ಕಾರಿ ಶಾಲೆ, ಪಂಚಾಯಿತಿ ಕಟ್ಟಡ ಹಾಗೂ ಸಮೀಪದ ಮನೆಗಳ ಹೆಂಚುಗಳು ಗಾಳಿಗೆ ಹಾರಿ ಹೋಗಿದ್ದು, ಹಾನಿ ಸಂಭವಿಸಿದೆ.

ಸಂಜೆ 5.50 ರ ವೇಳೆಗೆ ಈ ಪ್ರದೇಶದಲ್ಲಿ ಏಕಾಏಕಿ ಗಾಳಿ ಮಳೆ ಬೀಸಲಾರಂಭಿಸಿದ್ದು, ಹೂಹಾಕುವ ಕಲ್ಲು ಸರ್ಕಾರಿ ಪ್ರಾಥಮಿಕ ಶಾಲೆಯ ಮಾಡಿನ ಒಂದು ಭಾಗದ ಹೆಂಚುಗಳು ಗಾಳಿಗೆ ಹಾರಿ ಹೋಗಿ ನಷ್ಟ ಸಂಭವಿಸಿದೆ. ಅಲ್ಲದೆ ಇಲ್ಲಿಗೆ ಸಮೀಪದ ಬಾಳೆಪುಣಿ ಗ್ರಾಮ ಪಂಚಾಯಿತಿ ಹಳೆ ಕಟ್ಟಡದ ಹೆಂಚುಗಳು ಕೂಡಾ ಗಾಳಿಗೆ ಹಾರಿವೆ. ಗಾಳಿಗೆ ಮಳೆಗೆ ಹೂಹಾಕುವ ಕಲ್ಲಿನ ಸಂಕಪ್ಪ ಆಚಾರ್ಯ ಎಂಬುವವರ ಮನೆಯ ಹೆಂಚುಗಳು ಕೂಡಾ ಹಾರಿ ಹೋಗಿದ್ದು, ಇಲ್ಲಿ ಸಮೀಪದ ವಿಜಯ ಕುಮಾರ್ ಎಂಬುವವರ ವೆಲ್ಡಿಂಗ್ ಅಂಗಡಿ ಮಾಡಿಗೆ ಹಾಕಲಾಗಿದ್ದ ಸಿಮೆಂಟ್ ಶೀಟ್‌ಗಳು ಗಾಳಿಗೆ ಬಿದ್ದು ಪುಡಿಯಾಗಿದೆ. ತಿಮ್ಮಪ್ಪ ಎಂಬುವವರ ಶೆಡ್‌ ಸಿಮೆಂಟ್ ಶೀಟ್ ಹಾಗೂ ನಾರ್ಯ ಕ್ರಾಸ್ ರಸ್ತೆಯ ಬಳಿ ಪೊಲೀಸರು ವಾಹನ ತಪಾಸಣೆಗಾಗಿ ಹಾಕಿದ್ದ ತಗಡು ಶೀಟ್‌ನ ಶೆಡ್‌ಗೆ ಹಾನಿ ಸಂಭವಿಸಿದೆ.

ಹಾನಿಗೊಂಡಿರುವ ಹೂಹಾಕುವಕಲ್ಲಿನ ಬಾಳೆಪುಣಿ ಸರ್ಕಾರಿ ಪ್ರಾಥಮಿಕ ಶಾಲೆ ಏ.18 ರಂದು ಚುನಾವಣೆ ನಡೆಯುವ ಮತದಾನ ಕೇಂದ್ರವೂ ಆಗಿದೆ. ಇದೀಗ ಶಾಲೆಯ ಬಹುತೇಕ ಹೆಂಚುಗಳು ಗಾಳಿಗೆ ಹಾರಿ ಹೋಗಿದ್ದು, ಶಾಲಾ ಎಸ್ಡಿಎಂಸಿ ಅಧ್ಯಕ್ಷ ನವೀನ್ ಚಂದ್ರ, ಗೌರವಾಧ್ಯಕ್ಷ ರಾಜಗೋಪಾಲ ರೈ ಬೆಳ್ಳೇರಿ. ರಮೇಶ್ ಶೇಣವ, ಗಿರೀಶ್ ಬೆಳ್ಳೇರಿ, ಅಬೂಬಕ್ಕರ್ ತೋಟಾಲ್, ಎಸ್ಡಿಎಂಸಿ ಸದಸ್ಯರಾದ ಖಲಂದರ್ ಶಾಫಿ, ಚಂದ್ರಾಕ್ಷ ಮೊದಲಾವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.