ADVERTISEMENT

ಮಂಗಳೂರು: ರಸ್ತೆಗಳು ಜಲಾವೃತ; ಮನೆಗೆ ನುಗ್ಗಿದ ನೀರು

ಮಧ್ಯಾಹ್ನದ ನಂತರ ಸುರಿದ ಧಾರಾಕಾರ ಮಳೆ; ಜಲಾವೃತವಾದ ಪಂಪ್‌ವೆಲ್ ಮಹಾವೀರ ವೃತ್ತದಲ್ಲಿ ಪರದಾಟ

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 17:41 IST
Last Updated 14 ಜೂನ್ 2025, 17:41 IST
ಕೊಡಿಯಾಲ್‌ಗುತ್ತು ಪ್ರದೇಶದಲ್ಲಿ ಸ್ಥಳೀಯರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರ ಮಾಡಲಾಯಿತು 
ಕೊಡಿಯಾಲ್‌ಗುತ್ತು ಪ್ರದೇಶದಲ್ಲಿ ಸ್ಥಳೀಯರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರ ಮಾಡಲಾಯಿತು    

ಮಂಗಳೂರು: ಏಕಾಏಕಿ ಸುರಿದ ಧಾರಾಕಾರ ಮಳೆಯಿಂದ ಮಂಗಳೂರು ನಗರದ ಹಲವು ರಸ್ತೆಗಳು ಶನಿವಾರ ಸಂಜೆ ನದಿಯಂತಾದವು. ತಗ್ಗು ಪ್ರದೇಶಗಳು ಮಾತ್ರವಲ್ಲದೆ ಎತ್ತರ ಪ್ರದೇಶಗಳಲ್ಲಿರುವ ರಸ್ತೆಗಳಲ್ಲಿ ಕೂಡ ಜನರು ಮತ್ತು ವಾಹನಗಳ ಓಡಾಟಕ್ಕೆ ತೊಂದರೆಯಾಯಿತು. ಸುಮಾರು ಮೂರು ತಾಸು ನಗರದಲ್ಲಿ ಜನಜೀವನ ಅಸ್ತವ್ಯಸ್ತವಾಯಿತು.

ನಗರದಲ್ಲಿ ಬೆಳಿಗ್ಗೆ ಶುಭ್ರ ವಾತಾವರಣವಿದ್ದು ಆಗಾಗ ಸಾಮಾನ್ಯ ಮಳೆಯಾಗಿತ್ತು. ಆದರೆ 2.30 ವೇಳೆ ಆರಂಭಗೊಂಡ ಮಳೆ ಮುಸಲಧಾರೆಯಂತಾಯಿತು. ಸ್ವಲ್ಪ ಹೊತ್ತಿನಲ್ಲಿ ಎಲ್ಲೆಲ್ಲೂ ನೀರು ಹರಿಯತೊಡಗಿತು. ಮೂರು ತಾಸಿಗೂ ಹೆಚ್ಚು ಕಾಲ ಸತತವಾಗಿ ಸುರಿದ ಮಳೆಯಿಂದಾಗಿ ಹಲವು ಕಡೆಗಳಲ್ಲಿ ಅಪಾರ್ಟ್‌ಮೆಂಟ್‌ಗಳ ನೆಲಮಹಡಿ ಮತ್ತು ಪಾರ್ಕಿಂಗ್ ಪ್ರದೇಶಗಳು ಜಲಾವೃತವಾದವು. ಕೆಲವು ಕಡೆಗಳಲ್ಲಿ ಮನೆಯ ಒಳಗೆ ನೀರು ನುಗ್ಗಿತು.

ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಡೀಲ್ ರೈಲ್ವೆ ಕೆಳಸೇತುವೆಯಲ್ಲಿ ಭಾರಿ ಪ್ರಮಾಣದ ನೀರು ನಿಂತು ವಾಹನಗಳ ಓಡಾಟಕ್ಕೆ ತೊಂದರೆಯಾಯಿತು. ಪಂಪ್‌ವೆಲ್ ವೃತ್ತದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ತೊಕ್ಕೊಟ್ಟು, ತಲಪಾಡಿ, ಕೇರಳದ ಕಡೆಗೆ ಹೋಗುವ ವಾಹನಗಳು ಸಾಲುಗಟ್ಟಿ ನಿಂತವು. ವೃತ್ತದಲ್ಲಿ ವಾಹನ ದಟ್ಟಣೆಯಾದ ಕಾರಣ ಬಲ್ಮಠ, ನಂತೂರು, ಪಡೀಲ್‌ ಭಾಗದಲ್ಲೂ ವಾಹನಗಳನ್ನು ಮುಂದೆ ತೆಗೆದುಕೊಂಡು ಹೋಗಲು ಚಾಲಕರು ಪರದಾಡಬೇಕಾಗಿ ಬಂತು.

ADVERTISEMENT

ಕೇಂದ್ರ ರೈಲು ನಿಲ್ದಾಣದ ಬಳಿ ಮೊಣಕಾಲೆತ್ತರಕ್ಕೆ ನೀರು ನಿಂತಿದ್ದರಿಂದ ಪ್ರಯಾಣಿಕರು ಪರದಾಡಬೇಕಾಯಿತು. ಆಟೊಗಳು ಮತ್ತು ಟ್ಯಾಕ್ಸಿಗಳ ಒಳಗೆ ನೀರು ನುಗ್ಗಿತು. ಜಪ್ಪಿನಮೊಗರು, ಸುಭಾಷ್ ನಗರ ಮತ್ತು ಅತ್ತಾವರ ಕೆಎಂಸಿ ಬಳಿ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಆತಂಕಗೊಂಡರು. ಅಗ್ನಿಶಾಮಕ ದಳ ಮತ್ತು ರಾಜ್ಯ ವಿಪತ್ತು ನಿರ್ವಹಣಾ ತಂಡದವರು ಧಾವಿಸಿ ಮನೆಗಳ ಒಳಗೆ ಸಿಲುಕಿದವರನ್ನು ಹೊರಗೆ ಕರೆತಂದರು ಎಂದು ಅಗ್ನಿಶಾಮಕ ದಳದ ವಲಯ ಅಧಿಕಾರಿ ರಂಗನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕದ್ರಿ, ಕೊಡಿಯಾಲ್‌ಗುತ್ತು, ಬಿಜೈ, ಎಕ್ಕೂರು ಮುಂತಾದ ಕಡೆಗಳ ರಸ್ತೆಯಲ್ಲಿ ಮೊಣಕಾಲು ವರೆಗೂ ನೀರು ನಿಂತಿತ್ತು. ನಗರದ ಹಲವು ಕಡೆಗಳಲ್ಲಿ ಚರಂಡಿಯ ಒಳಗಿನಿಂದ ನೀರು ಮೇಲೆ ಚಿಮ್ಮಿ ರಸ್ತೆಗಳು ಮತ್ತು ಅಪಾರ್ಟ್‌ಮೆಂಟ್‌ಗಳತ್ತ ಹರಿಯಿತು. ಇಳಿಜಾರು ಪ್ರದೇಶವಾದ ಆರ್ಯಸಮಾಜ ರಸ್ತೆಯಲ್ಲೂ ಚರಂಡಿಯಿಂದ ಬಂದ ನೀರು ಮನೆಗಳತ್ತ ಸಾಗಿತು. ಎಕ್ಕೂರು ಮತ್ತು ಜಪ್ಪಿನಮೊಗರು ಭಾಗದಲ್ಲಿ ರಾಜಕಾಲುವೆಗಳು ಉಕ್ಕಿ ಹರಿದ ಕಾರಣ ಸಮೀಪದಲ್ಲಿ ವಾಸಿಸುವವರು ಆತಂಕಕ್ಕೆ ಒಳಗಾದರು. ಬಿಜೈ ಮತ್ತು ಕೊಡಿಯಾಲ್‌ಗುತ್ತು ಪಶ್ಚಿಮದ ಕಡೆಗೆ ಸಾಗುವ ನ್ಯೂ ಕದ್ರಿ ಟೆಂಪಲ್ ರಸ್ತೆ, ವಿಶಾಲ್ ನರ್ಸಿಂಗ್ ಹೋಂ, ಕೊಟ್ಟಾರ, ಮಾಲೆಮಾರ್‌ ಭಾಗದಲ್ಲಿ ನೀರು ನಿಂತ ಕಾರಣ ಜನರು ಪರದಾಡಿದರು. ಕೊಂಚಾಡಿಯಲ್ಲೂ ರಾಜಕಾಲುವೆ ಉಕ್ಕಿ ಹರಿದು ಸಮೀಪದ ಅಂಗಡಿಗಳ ಮಾಲೀಕರನ್ನು ಆತಂಕಕ್ಕೆ ಒಳಗಾಗಿಸಿತು.

ರಸ್ತೆಗಿಳಿದ ‘ದೋಣಿ’ಗಳು

ಮಂಗಳೂರು ನಗರದ ಹಲವು ಕಡೆಗಳಲ್ಲಿ ರಸ್ತೆಗಳು ನದಿಗಳಂತಾದ ಕಾರಣ ರಕ್ಷಣಾ ಸಿಬ್ಬಂದಿ ‘ದೋಣಿ’ಗಳೊಂದಿಗೆ ತೆರಳಿದರು. ಕೊಡಿಯಾಲ್‌ಗುತ್ತುವಿನಂಥ ನಗರ ಮಧ್ಯದ ಪ್ರದೇಶದಲ್ಲೂ ಅಗ್ನಿಶಾಮಕ ದಳದ ಸಿಬ್ಬಂದಿ ಜನರನ್ನು ಮನೆಗಳಿಂದ ಸುರಕ್ಷಿತ ತಾಣಗಳಿಗೆ ಕರೆದುಕೊಂಡು ಹೋದರು.

40ನೇ ವಾರ್ಡ್‌ನ ಅತ್ತಾವರ ಮೆಸ್ಕಾಂ ಕಚೇರಿ ಬಳಿ ಮಣ್ಣು ಕುಸಿಯದಂತೆ ಕಟ್ಟಿದ್ದ ಬೃಹತ್ ಗೋಡೆ ಬಿದ್ದ ಕಾರಣ ಸಮೀಪ ಪ್ರದೇಶಗಳಲ್ಲಿ ನೆರೆಯಂಥ ಪರಿಸ್ಥಿತಿ ನಿರ್ಮಾಣವಾಯಿತು. ಜಿಲ್ಲೆಯಲ್ಲಿ ಭಾನುವಾರವೂ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕುದ್ರೋಳಿ ರಸ್ತೆಯ ಅಂಗಡಿಗಳಲ್ಲಿ ನೀರು ತುಂಬಿತು  ಪ್ರಜಾವಾಣಿ ಚಿತ್ರ
ಅತ್ತಾವರದ ಮೆಸ್ಕಾಂ ಬಳಿ ತಡೆಗೋಡೆ ಕುಸಿಯಿತು
ಮಂಗಳೂರಿನಲ್ಲಿ ಶನಿವಾರ ಸಂಜೆ ಸುರಿದ ಮಳೆಗೆ ಲೇಡಿಹಿಲ್ ಬಳಿ ರಸ್ತೆಗೆ ಜಲಪಾತದಂತೆ ನೀರು ಸುರಿಯುತ್ತಿರುವುದು ಪ್ರಜಾವಾಣಿ ಚಿತ್ರ

Highlights - ಅಪಾರ್ಟ್‌ಮೆಂಟ್‌ಗಳ ನೆಲಮಹಡಿ, ಪಾರ್ಕಿಂಗ್ ಪ್ರದೇಶಗಳು ಜಲಾವೃತ ಪಡೀಲ್ ರೈಲ್ವೆ ಕೆಳಸೇತುವೆಯಲ್ಲಿ ಭಾರಿ ಪ್ರಮಾಣದ ನೀರು ಕೇಂದ್ರ ರೈಲು ನಿಲ್ದಾಣದ ಬಳಿ ಮೊಣಕಾಲೆತ್ತರಕ್ಕೆ ನಿಂತಿದ್ದ ನೀರು

Cut-off box - ಸರ್ವಿಸ್ ರಸ್ತೆ ಬಳಸಲು ಸಲಹೆ ಧಾರಾಕಾರ ಮಳೆಯಿಂದ ರಾಷ್ಟ್ರೀಯ ಹೆದ್ದಾರಿಯ ಸುರತ್ಕಲ್‌ನಿಂದ ನಂತೂರು ವರೆಗಿನ ಭಾಗ ಹಾನಿಯಾಗಿದ್ದು ದ್ವಿಚಕ್ರ ಮತ್ತು ಮೂರು ಚಕ್ರದ ವಾಹನ ಸವಾರರು ಲಭ್ಯವಿರುವ ಕಡೆಗಳಲ್ಲಿ ಸರ್ವಿಸ್ ರಸ್ತೆಯನ್ನು ಬಳಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಗಳೂರು ವಿಭಾಗದ ಯೋಜನಾಧಿಕಾರಿ ತಿಳಿಸಿದ್ದಾರೆ. ಈ ಭಾಗದಲ್ಲಿ ವೇಗ ಮಿತಿ ಗಂಟೆಗೆ 50 ಕಿಮೀ ದಾಟದಂತೆ ಗಮನ ಹರಿಸಬೇಕು ಎಂದು ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Cut-off box - ಮತ್ತೆ ಟ್ರೀಲ್ ಆದ ಪಂಪ್‌ವೆಲ್‌ ಫ್ಲೈ ಓವರ್‌ನ ಕಳಪೆ ಕಾಮಗಾರಿ ನಡೆದಿದೆ ಎಂಬ ಆರೋಪ ಸೇರಿದಂತೆ ಹಲವು ಬಾರಿ ಬಗೆಬಗೆಯಲ್ಲಿ ಟ್ರೋಲ್ ಆದ ಪಂಪ್‌ವೆಲ್‌ (ಈಗಿನ ಮಹಾವೀರ ವೃತ್ತ) ಶನಿವಾರ ಮತ್ತೆ ನೆಟ್ಟಿಗರ ಹಾಸ್ಯಭರಿತ ಆಕ್ರೋಶಕ್ಕೆ ಕಾರಣವಾಯಿತು. ಪ್ರಮುಖ ಹೆದ್ದಾರಿಯ ಮುಖ್ಯ ವೃತ್ತವಾದ ಇಲ್ಲಿ ನೀರು ನಿಂತು ಜನರು ಪರದಾಡಿದ್ದರ ವಿಡಿಯೊ ಮತ್ತು ಚಿತ್ರಗಳನ್ನು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಿದ ಜನರು ಅಧಿಕಾರಿಗಳು ಮತ್ತು ಆಡಳಿತದವರ ಮೇಲೆ ಕಿಡಿ ಕಾರಿದರು. ಜಯಪ್ರಕಾಶ್ ಎಂಬವರ ಫೇಸ್‌ಬುಕ್ ಪೋಸ್ಟ್‌ಗೆ ಉತ್ತರಿಸಿದ ಒಬ್ಬರು ‘ಸ್ಮಾರ್ಟ್‌ ಸಿಟಿ ಅವಸ್ಥೆ ಇದು’ ಎಂದು ಹೇಳಿದ್ದರೆ ಮತ್ತೊಬ್ಬರು ‘ನೀರಿನ ವ್ಯವಸ್ಥೆ ಚೆನ್ನಾಗಿ ಮಾಡಿದ್ದಾರೆ ಪಂಪ್‌ಸೆಟ್ ತಂದರಾಯಿತು’ ಎಂದಿದ್ದಾರೆ. ‘ಕೋಮುಗಲಭೆಯ ಕಿಡಿ ಹಚ್ಚುವವರೇ ನಿಮಗೆ ಮಂಗಳೂರು ಯಾಕೆ ಬೇಕು? ಕೇವಲ ಜಿಪೇ ಫೋನ್‌ ಪೇ ಮಾಡಿಸುವುದಕ್ಕಾ?’ ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.