ADVERTISEMENT

ಕಲ್ಮಕಾರಿನಲ್ಲಿ ಭೂಕುಸಿತ ಶಂಕೆ

ಮೂರು ಸೇತುವೆಗೂ ಹಾನಿ, 35ಕ್ಕೂ ಅಧಿಕ ಮರಗಳು ನೀರುಪಾಲು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 16:06 IST
Last Updated 1 ಆಗಸ್ಟ್ 2022, 16:06 IST
ಕಲ್ಮಕಾರಿನಲ್ಲಿ ರಸ್ತೆಗಳು ಜಲಾವೃತವಾಗಿವೆ.
ಕಲ್ಮಕಾರಿನಲ್ಲಿ ರಸ್ತೆಗಳು ಜಲಾವೃತವಾಗಿವೆ.   

ಸುಬ್ರಹ್ಮಣ್ಯ: ಧಾರಾಕಾರ ಮಳೆಗೆ ಭಾನುವಾರ ತಡರಾತ್ರಿ ಹೊಳೆಯಲ್ಲಿ ಮಣ್ಣು ಮಿಶ್ರಿತ ನೀರು ರಭಸದಿಂದ ಹರಿದ ಪರಿಣಾಮ ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಲ್ಮಕಾರು ಎಂಬಲ್ಲಿ ಹೊಳೆಬದಿಯ 35ಕ್ಕೂ ಅಧಿಕ ಮರಗಳು ನೀರು ಪಾಲಾಗಿವೆ.

ಕಲ್ಮಕಾರಿನ ಕಡಮಕಲ್ಲು ಭಾಗದಿಂದ ಹರಿದು ಬರುವ ಹೊಳೆಯಲ್ಲಿ ಭಾರೀ ಪ್ರಮಾಣದ ಮಣ್ಣು ಮಿಶ್ರಿತ ನೆರೆ ನೀರು ಹರಿದು ಬಂದಿದೆ. ಬೃಹತ್ ಮರಗಳು ನೆರೆ ನೀರಿನ ಹೊಡೆತಕ್ಕೆ ಉರುಳಿ ನೀರುಪಾಲಾಗಿದೆ. ಮರಗಳ ಗೆಲ್ಲು, ಸಿಪ್ಪೆಗಳು ಸೀಳಿದ್ದು ನೆರೆ ಪ್ರಮಾಣದ ಭೀಕರತೆಗೆ ಸಾಕ್ಷಿಯಾಗಿವೆ.

ಮೂರು ಸೇತುಗಳಿಗೆ ಹಾನಿ: ಕಲ್ಮಕಾರು ಭಾಗದಿಂದ ಗುಳಿಕಾನ ಕಡೆಗೆ ಸಂಪರ್ಕಿಸುವ ಸೇತುವೆಗೂ ಹಾನಿಯಾಗಿದೆ. ಸೇತುವೆ ಅಪಾಯಕಾರಿಯಾಗಿರುವ ಬಗ್ಗೆ ಮಾಹಿತಿ ಸ್ಥಳೀಯರಿಗೆ ನೀಡಲಾಗಿದೆ. ಸೇತುವೆ ಗುಣಮಟ್ಟ ಪರಿಶೀಲನೆ ನಡೆಸಲು ಎಂಜಿನಿಯರ್ ಅವರಿಗೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

ADVERTISEMENT

ಎಲ್ದಾಳು ಎಂಬಲ್ಲಿ ಸೇತುವೆಗೂ ಹಾನಿಯಾಗಿದೆ. ಶೆಟ್ಟಿಕಟ್ಟ ಎಂಬಲ್ಲಿಯ ಸೇತುವೆ, ಬಿದಿರಿನ ಪಾಲಕ್ಕೆ ಹಾನಿಯಾಗಿದೆ. ಇಡ್ಯಡ್ಕ ಎಂಬಲ್ಲಿ ಸೇತುವೆಯಲ್ಲಿ ಮರಗಳು ಸಿಲುಕಿ ನೀರು ನಿಂತ ಪರಿಣಾಮ, ತೋಡಿನ ದಿಕ್ಕು ಬದಲಾಯಿಸಿ ಪಕ್ಕದ ಜಾಗದಲ್ಲಿ ಹರಿದಿದೆ. ಸೇತುವೆ ಸಂಪರ್ಕ ರಸ್ತೆ ಕಡಿತಗೊಂಡಿದೆ.

ಭೂ ಕುಸಿತ ಶಂಕೆ: ಕಲ್ಮಕಾರಿನ ಕಡಮಕಲ್ಲು ಎಸ್ಟೇಟ್ ಮೇಲ್ಭಾಗದಲ್ಲಿ ಭೂಕುಸಿತ ಸಂಭವಿಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಆ ಭಾಗದಿಂದಲೇ ಮಣ್ಣು ಮಿಶ್ರಿತನೀರು ಹರಿದಿದ್ದು ಮರಗಳನ್ನು ಬೀಳಿಸಿವೆ. ತಡರಾತ್ರಿ 1 ಗಂಟೆಯ ವೇಳೆಗೆ ಘಟನೆ ನಡೆದಿದೆ ಎನ್ನಲಾಗಿದೆ. ರಾತ್ರಿಯೇ ಭಾರಿ ನೀರು ಬಂದು ಹೊಳೆ ತುಂಬಿ ಹರಿದಿದೆ. ಕಲ್ಮಕಾರು ಪೇಟೆಯಲ್ಲಿ ರಸ್ತೆಗಳು ಜಲಾವೃತಗೊಂಡಿದ್ದು, ಅಂಗಡಿಗಳಿಗೂ ನೀರು ನುಗ್ಗಿದೆ.

ಸಂಪರ್ಕ ಕಡಿತ ಭೀತಿ: ಹಲವೆಡೆ ಸೇತುವೆಗಳಿಗೆ ಹಾನಿಯಾಗಿ ಸಂಪರ್ಕ ಕಡಿತ ಭೀತಿ ಎದುರಾಗಿದೆ. ಕಲ್ಮಕಾರು ಪೇಟೆಯ ಬಳಿ ಇರುವ ಸಂತಡ್ಕಬೈಲು, ಗುಳಿಕಾನ ಸಂಪರ್ಕ ಸೇತುವೆ ಹಾನಿಗೊಳಗಾಗಿದ್ದು, ಸೇತುವೆ ಮುರಿದು ಬೀಳುವ ಆತಂಕದಲ್ಲಿದೆ. ಸಂಪರ್ಕ ಕಡಿತಗೊಂಡಲ್ಲಿ ಸುಮಾರು 200ಕ್ಕೂ ಅಧಿಕ ಮನೆಗಳ ಸಂಪರ್ಕವೇ ಕಡಿತಗೊಳ್ಳಲಿದೆ.

ಅಧಿಕಾರಿಗಳ ಭೇಟಿ: ದುರಂತ ಘಟನಾ ಸ್ಥಳಗಳಿಗೆ ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮೀ, ಗ್ರಾಮಕರಣಿಕ ಮಧು, ಎಂಜಿನಿಯರ್‌ಗಳಾದ ಜನಾರ್ದನ, ಹನುಮಂತರಾಯಪ್ಪ, ತೋಟಗಾರಿಕೆ ಇಲಾಖೆಯ ಅಧಿಕಾರಿ ಮುಧುಶ್ರೀ, ಗಾಮ ಪಂಚಾಯಿತಿ ಅಧ್ಯಕ್ಷ ಉದಯಕುಮಾರ್, ಸದಸ್ಯರಾದ ಪುಷ್ಪರಾಜ್, ಅಶ್ವತ್, ಕಾರ್ಯದರ್ಶಿ ಮೋಹನ್ ಸೇರಿದಂತೆ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮತ್ತೆ ಮುಂದುವರಿದ ಮಳೆ: ಸೋಮವಾರವೂ ಕಲ್ಮಕಾರು, ಕೊಲ್ಲಮೊಗ್ರು, ಹರಿಹರ ಪಲ್ಲತ್ತಡ್ಕ, ಸುಬ್ರಹ್ಮಣ್ಯ ಭಾಗದಲ್ಲಿ ಧಾರಾಕಾರ ಮಳೆಯಾಗಿದ್ದು ಹಲವೆಡೆ ಹೊಳೆ ನೀರು ನುಗ್ಗಿ ಜಲಾವೃತಗೊಂಡಿದೆ.

ರಸ್ತೆಗಳು, ಹೊಳೆ ಬದಿ ತೋಟ, ಮನೆಗಳಿಗೆ ನೀರು ನುಗ್ಗಿ ಅವಾಂತರ ತಂದೊಡ್ಡಿದ್ದು, ಜನ ಜೀವನ ಸಂಕಷ್ಟದಲ್ಲಿದೆ. ರಸ್ತೆಗಳು ಹಲವೆಡೆ ಸಂಚಾರ ಬಂದ್ ಅಗಿದೆ. ಆ ಭಾಗದಲ್ಲಿ ಜನರು ಆತಂಕಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.