
ಉಪ್ಪಿನಂಗಡಿ: ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಕುಂಜ ಗ್ರಾಮದ ಪಾದೆ ಎಂಬಲ್ಲಿ ಶನಿವಾರ ಸಂಜೆ ತಂದೆ ಚೂರಿ ಇರಿತಕ್ಕೆ ಒಳಗಾದ ಸ್ಥಿತಿಯಲ್ಲಿ ಹಾಗೂ 17 ವರ್ಷದ ಮಗ ಕೋವಿಯ ಗುಂಡೇಟಿಗೆ ಸಿಲುಕಿ ಮೃತಪಟ್ಟ ಸ್ಥಿತಿಯಲ್ಲಿ ಶವ ಕಂಡು ಬಂದಿದೆ. ಕೊಲೆ ಕೃತ್ಯದ ಬಗ್ಗೆ ಶಂಕೆ ಇದ್ದು, ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ತಾಲ್ಲೂಕಿನ ಬೆಟ್ಟಂಪಾಡಿ ಮೂಲದವರಾಗಿದ್ದು, 8 ವರ್ಷಗಳಿಂದ ರಾಮಕುಂಜ ಗ್ರಾಮದ ಪಾದೆ ಎಂಬಲ್ಲಿನ ನಿವಾಸಿಯಾಗಿರುವ ವಸಂತ ಅಮೀನ್ (50) ಕೃಷಿ ಭೂಮಿ ಖರೀದಿಸಿ ಅದರಲ್ಲಿದ್ದ ಹಳೆಯ ಮನೆಯಲ್ಲಿ ವಾಸವಾಗಿದ್ದರು. ಸಂಜೆ ವೇಳೆ ವಸಂತ ಅಮೀನ್ ಪರಿಚಯಸ್ಥರಿಗೆ ಕರೆ ಮಾಡಿ, ‘ಮಗ ಮೋಕ್ಷಿತ್ (17) ನನಗೆ ಚೂರಿಯಿಂದ ಇರಿದ್ದಾನೆ. ಆತ ಗುಂಡು ಹಾರಿಸಿಕೊಂಡಿದ್ದಾನೆ’ ಎಂದು ತಿಳಿಸಿದ್ದರಿಂದ ಪರಿಚಯಸ್ಥರು ಮನೆಗೆ ಭೇಟಿ ನೀಡಿದಾಗ ವಸಂತ ಅಮೀನ್ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿದ್ದರು. ಮೋಕ್ಷಿತ್ ಗುಂಡೇಟಿನಿಂದ ಮೃತಪಟ್ಟ ಸ್ಥಿತಿಯಲ್ಲಿ ಇದ್ದ ಎಂದು ತಿಳಿಸಲಾಗಿದೆ. ವಸಂತ ಅಮೀನ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬಳಿಕದ ಬೆಳವಣಿಗೆಯಲ್ಲಿ ಪೆರ್ಲದಲ್ಲಿ ತಾಯಿ ಮನೆಯಲ್ಲಿದ್ದ ವಸಂತ ಅಮೀನ್ ಅವರ ಪತ್ನಿ ಜಯಶ್ರಿ ಘಟನಾ ಸ್ಥಳಕ್ಕೆ ಬಂದು ಪೊಲೀಸರಿಗೆ ದೂರು ನೀಡಿದ್ದು, ‘ಗಂಡನೇ ಮಗನನ್ನು ಕೊಂದಿದ್ದಾರೆ’ ಎಂದು ಆರೋಪಿಸಿದ್ದಾರೆ. ‘ರಾಮಕುಂಜದ ಆಸ್ತಿ ನನ್ನ ಹೆಸರಿನಲ್ಲಿದ್ದು, ಅದನ್ನು ಗಂಡನ ಹೆಸರಿಗೆ ಬರೆದುಕೊಡಬೇಕು ಎಂದು ಗಂಡ ತಾಕೀತು ಮಾಡುತ್ತಿದ್ದರು. ಅದಕ್ಕೆ ಮಗ ವಿರೋಧ ವ್ಯಕ್ತಪಡಿಸುತ್ತಿದ್ದ. ತನ್ನೊಂದಿಗೆ ಪೆರ್ಲದಲ್ಲಿ ವಾಸವಾಗಿದ್ದ ಮಗನನ್ನು ಒಂದು ತಿಂಗಳ ಹಿಂದೆ ರಾಮಕುಂಜಕ್ಕೆ ಕರೆದು ತಂದಿದ್ದು, ಶನಿವಾರ ವಿನಾ ಕಾರಣ ಚಿಕಿತ್ಸೆಯ ನೆಪದಲ್ಲಿ ಮಂಗಳೂರಿಗೆ ಕರೆದೊಯ್ದಿದ್ದರು. ಈ ಸಂದರ್ಭದಲ್ಲಿ ಮಗ ನನಗೆ ಏನಾದರೂ ಸಮಸ್ಯೆಯಾದರೆ ತಂದೆಯೇ ಕಾರಣವೆಂದು ನನಗೆ ಕರೆ ಮಾಡಿ ತಿಳಿಸಿದ್ದ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆಸ್ತಿಯ ವಿಚಾರದಲ್ಲಿ ವೈಮನಸ್ಸು ಮೂಡಿ ಜಯಶ್ರೀ, ಪೆರ್ಲದಲ್ಲಿನ ತವರು ಮನೆಯಲ್ಲಿ ವಾಸ್ತವ್ಯ ಇದ್ದರು. ತಿಂಗಳ ಹಿಂದೆ ತಂದೆಯ ಕರೆಯಂತೆ ರಾಮಕುಂಜದ ಮನೆಗೆ ಮಗ ಬಂದಿದ್ದ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಎಸ್.ಭೂಮರೆಡ್ಡಿ, ‘ಗಾಯಾಳು ವಸಂತ ಅಮೀನ್ ನೀಡಿದ ಹೇಳಿಕೆಗೂ, ಮೃತ ಬಾಲಕನ ತಾಯಿ ನೀಡಿದ ಹೇಳಿಕೆಗೂ ವ್ಯತ್ಯಾಸವಿದ್ದು, ಸಮಗ್ರ ತನಿಖೆ ಬಳಿಕವೇ ಸತ್ಯ ತಿಳಿಯಬೇಕಾಗಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
ಗ್ರಾಮಾಂತರ ಪೊಲೀಸ್ ಇನ್‌ಸ್ಪೆಕ್ಟರ್ ನಾಗರಾಜ್, ಕಡಬ ಪಿಎಸ್‌ಐ ಭೇಟಿ ನೀಡಿದ್ದು, ತನಿಖೆ ಮುಂದುವರಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.