
ಮೂಡುಬಿದಿರೆ: ಪೋರ್ಚುಗೀಸರ ವಿರುದ್ಧ ಹೋರಾಡಿದ ಧೀರ ಮಹಿಳೆ ರಾಣಿ ಅಬ್ಬಕ್ಕ ಅವರ ಪರಿಚಯ ಯುವ ಜನತೆಗೆ ಆಗಬೇಕಿದೆ. ಅವರ ಇತಿಹಾಸವು ಪಠ್ಯಪುಸ್ತಕದಲ್ಲಿ ಬರಬೇಕು. ಈ ಸಂಬಂಧ ಶಿಕ್ಷಣ ಸಚಿವರಿಗೆ ಪತ್ರ ಬರೆಯುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಇಲ್ಲಿನ ಚೌಟರ ಅರಮನೆಯ ಮುಂಭಾಗದಲ್ಲಿ ಜವನೆರ್ ಬೆದ್ರ ಸಂಘಟನೆ ನಿರ್ಮಿಸಿ ಕಿರು ಉದ್ಯಾನದಲ್ಲಿ ರಾಣಿ ಅಬ್ಬಕ್ಕಳ ಪ್ರತಿಮೆಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ರಾಣಿ ಅಬ್ಬಕ್ಕಳ ಧೈರ್ಯ, ದೇಶಾಭಿಮಾನವು ಮಹಿಳೆಯರಿಗೆ ಸ್ಫೂರ್ತಿ ಎಂದರು.
ಜೈನ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಭಾತ್ ಬಲ್ನಾಡ್ ರಾಣಿ ಅಬ್ಬಕ್ಕಳ ಇತಿಹಾಸವನ್ನು ತಿಳಿಸಿದರು.
ಮೂಡುಬಿದಿರೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕು. ಸರ್ಕಾರಿ ರಕ್ತನಿಧಿ ಕೇಂದ್ರವನ್ನು ಸ್ಥಾಪಿಸಬೇಕು. ರಾಣಿ ಅಬ್ಬಕ್ಕಳ ಸಂಶೋಧನಾ ಕೇಂದ್ರವನ್ನು ಆರಂಭಿಸಬೇಕು ಎಂಬ ಬೇಡಿಕೆ ಪತ್ರವನ್ನು ಜವನೆರ್ ಬೆದ್ರ ಸಂಘಟನೆಯ ಅಧ್ಯಕ್ಷ ಅಮರ್‌ಕೋಟೆ ಸಚಿವರಿಗೆ ನೀಡಿದರು.
ಪ್ರಮುಖರಾದ ಕೆ.ಅಭಯಚಂದ್ರ ಜೈನ್, ಮಿಥುನ್ ರೈ, ಸುದರ್ಶನ ಎಂ., ಕೆ.ಪಿ.ಜಗದೀಶ ಅಧಿಕಾರಿ, ಪುರಸಭಾಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ ಪೂಜಾರಿ, ಮುಖ್ಯಾಧಿಕಾರಿ ಇಂದು ಎಂ., ಮೂಡಾ ಅಧ್ಯಕ್ಷ ಹರ್ಷವರ್ಧನ್ ಪಡಿವಾಳ್, ಚೌಟರ ಅರಮನೆಯ ಕುಲದೀಪ ಎಂ. ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.