ADVERTISEMENT

ಬಾಲಕಿ ಮೇಲೆ ಅತ್ಯಾಚಾರ: ಯುವಕನಿಗೆ 4 ವರ್ಷ ಜೈಲು

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2018, 16:52 IST
Last Updated 1 ಸೆಪ್ಟೆಂಬರ್ 2018, 16:52 IST

ಮಂಗಳೂರು: ಅಪ್ರಾಪ್ತ ಬಾಲಕಿಗೆ ಬಟ್ಟೆ ಮತ್ತು ಮೊಬೈಲ್ ಕೊಡಿಸುವ ಆಮಿಷವೊಡ್ಡಿ ಕರೆದೊಯ್ದು ಅತ್ಯಾಚಾರ ಎಸಗಿದ್ದ ಅಪರಾಧಿಯೊಬ್ಬನಿಗೆ ನಗರದ ಪೋಕ್ಸೊ ವಿಶೇಷ ನ್ಯಾಯಾಲಯ ನಾಲ್ಕು ವರ್ಷ ಜೈಲು ಶಿಕ್ಷೆ ಮತ್ತು ₹ 25,000 ದಂಡ ವಿಧಿಸಿ ಶನಿವಾರ ಆದೇಶ ಹೊರಡಿಸಿದೆ.

ಕಟೀಲು ಮಿತ್ತಬೈಲು ನಿವಾಸಿ ಯತೀಶ್ ಕರ್ಕೇರಾ (22) ಶಿಕ್ಷೆಗೊಳಗಾದ ಯುವಕ. ಈತ ದೂರವಾಣಿ ಸಂಭಾಷಣೆ ಮೂಲಕ ಪರಿಚಿತಳಾಗಿದ್ದ 14 ವರ್ಷದ ಬಾಲಕಿಯನ್ನು 2013ರ ಡಿಸೆಂಬರ್‌ 14ರಂದು ಬಟ್ಟೆ ಮತ್ತು ಮೊಬೈಲ್ ಕೊಡಿಸುವ ಆಮಿಷವೊಡ್ಡಿ ಸುರತ್ಕಲ್‌ಗೆ ಕರೆಸಿಕೊಂಡಿದ್ದ. ನಂತರ ತಣ್ಣೀರುಬಾವಿ ಬೀಚ್‌ಗೆ ಕರೆದೊಯ್ದಿದ್ದ. ಬಳಿಕ ಕಟೀಲು ಮುತ್ತೊಟ್ಟುವಿನಲ್ಲಿರುವ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ ಆರೋಪಗಳು ಸಾಬೀತಾಗಿವೆ ಎಂದು ನ್ಯಾಯಾಲಯ ಹೇಳಿದೆ.

ಮನೆಯಲ್ಲಿ ಬಲವಂತದಿಂದ ಕೂಡಿಟ್ಟು ಅತ್ಯಾಚಾರ ನಡೆಸಿದ್ದ ಯತೀಶ್, ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಅಲ್ಲಿಂದ ಹೊರಬಂದ ಬಾಲಕಿ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ತನಿಖೆ ನಡೆಸಿದ ಪೊಲೀಸರು ಯುವಕನ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

ADVERTISEMENT

ಪ್ರಕರಣದ ವಿಚಾರಣೆಯನ್ನು ಶನಿವಾರ ಪೂರ್ಣಗೊಳಿಸಿದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ಪೋಕ್ಸೊ ವಿಶೇಷ) ನ್ಯಾಯಾಲಯದ ನ್ಯಾಯಾಧೀಶೆ ಬಿ.ಆರ್.ಪಲ್ಲವಿ, ಯತೀಶ್‌ ಅಪರಾಧಿ ಎಂದು ಪ್ರಕಟಿಸಿದರು. ಅತ್ಯಾಚಾರ ನಡೆಸಿರುವುದಕ್ಕೆ ನಾಲ್ಕು ವರ್ಷ ಶಿಕ್ಷೆ ಹಾಗೂ ₹ 20,000 ದಂಡ, ಅಪಹರಿಸಿರುವುದಕ್ಕೆ ಮೂರು ತಿಂಗಳ ಜೈಲು ಮತ್ತು ₹ 5,000 ದಂಡ, ಬೆದರಿಕೆ ಹಾಕಿರುವುದಕ್ಕೆ ಒಂದು ವರ್ಷ ಜೈಲು ಹಾಗೂ ಅಕ್ರಮ ಬಂಧನದಲ್ಲಿ ಇರಿಸಿಕೊಂಡಿದ್ದಕ್ಕೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದರು.

ದಂಡದ ಮೊತ್ತದಲ್ಲಿ ₹ 15,000ವನ್ನು ಸಂತ್ರಸ್ತ ಬಾಲಕಿಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಆಕೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದಲೂ ಪರಿಹಾರ ದೊರಕಿಸಲು ಕ್ರಮ ಕೈಗೊಳ್ಳುವಂತೆ ಆದೇಶದಲ್ಲಿ ಸೂಚಿಸಿದೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸಿ.ವೆಂಕಟರಮಣಸ್ವಾಮಿ ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರ ವಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.