ADVERTISEMENT

‘ನಾಳೆ ರಿಕ್ರಿಯೇಶನ್‌ ಕ್ಲಬ್‌ ಆರಂಭ’

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2020, 5:58 IST
Last Updated 18 ಅಕ್ಟೋಬರ್ 2020, 5:58 IST

ಮಂಗಳೂರು: ನಗರದಲ್ಲಿ ರಿಕ್ರಿಯೇಷನ್ ಕ್ಲಬ್‌ಗಳನ್ನು ಆರಂಭಿಸಲು ಸಂಬಂಧಪಟ್ಟ ಇಲಾಖೆಗಳು ಅನುಮತಿ ನೀಡಿದ್ದು, ಸೋಮವಾರದಿಂದ ಕ್ಲಬ್‌ಗಳು ಪುನರಾರಂಭಗೊಳ್ಳಲಿವೆ ಎಂದು ಕುಡ್ಲ ರಿಕ್ರಿಯೇಷನ್ ಕ್ಲಬ್ ಮೆಂಬರ್ಸ್‌ ಅಸೋಸಿಯೇಶನ್ ಅಧ್ಯಕ್ಷ ಪ್ರಕಾಶಚಂದ್ರ ರೈ ಹಾಗೂ ಕಾನೂನು ಸಲಹೆಗಾರ ಮೋಹನ್‌ದಾಸ್ ರೈ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎರಡು ವರ್ಷಗಳ ಹಿಂದೆ ಯಾವುದೋ ಒಂದು ನೋಂದಣಿಯಾಗದ ಕ್ಲಬ್ ಕಾನೂನು ಬಾಹಿರ ಚಟುವಟಿಕೆ ನಡೆಸಿದ್ದರಿಂದ ಆ ಕ್ಲಬ್ ಮೇಲೆ ದಾಳಿ ನಡೆಯಿತು. ಈ ಬಗ್ಗೆ ಸೃಷ್ಟಿಯಾದ ತಪ್ಪು ಮಾಹಿತಿಯಿಂದ ಕ್ಲಬ್‌ಗಳಿಗೆ ಕೆಟ್ಟ ಹೆಸರು ಬಂದಿತ್ತು. ಹೀಗಾಗಿ ಕ್ಲಬ್‌ಗಳನ್ನು ಮುಚ್ಚುವಂತಾಯಿತು. ನಂತರ ಕೋವಿಡ್–19 ಸರ್ಕಾರದ ಮಾರ್ಗಸೂಚಿ ಹಿನ್ನೆಲೆಯಲ್ಲಿ ಕ್ಲಬ್‌ಗಳನ್ನು ಪುನರಾರಂಭಿಸಲು ಸಾಧ್ಯವಾಗಲಿಲ್ಲ’ ಎಂದರು.

ಒಂದು ಕ್ಲಬ್ ಹೊರತುಪಡಿಸಿ ಇತರೆ ಕ್ಲಬ್‌ಗಳು ಕಾನೂನು ಬಾಹಿರವಾಗಿ ಕಾರ್ಯ ನಿರ್ವಹಿಸಿಲ್ಲ ಎಂಬುದನ್ನು ಇಲಾಖೆಗಳಿಗೆ ಮನವರಿಕೆ ಮಾಡಲಾಗಿದೆ. 2014ರ ಅಕ್ಟೋಬರ್ 29ರಂದು ನಗರ ಪೊಲೀಸ್ ಆಯುಕ್ತರು ನೋಂದಾಯಿತ ಕ್ಲಬ್‌ಗಳಿಗೆ ಅನುಮತಿ ಪತ್ರದ ಅಗತ್ಯವಿಲ್ಲ ಎಂದಿದ್ದಾರೆ. ಸಹಕಾರಿ ಸಂಘದ ಉಪನಿಬಂಧಕರೂ ಕೆಲವು ನಿಬಂಧನೆಗಳೊಂದಿಗೆ ಕಾನೂನು ರೀತಿಯಲ್ಲಿ ಕ್ಲಬ್ ನಡೆಸಲು ಅನುಮತಿ ನೀಡಿದ್ದಾರೆ ಎಂದು ತಿಳಿಸಿದರು.

ADVERTISEMENT

ನೋಂದಾಯಿತ ಕ್ಲಬ್‌ಗಳಲ್ಲಿ ಕೇರಂ, ಚೆಸ್, ರಮ್ಮಿ ಮನೋರಂಜನಾ ಆಟಗಳು ಮಾತ್ರ ಇರುತ್ತವೆ. ಜೂಜು ಅಥವಾ ಇತರೆ ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ. ಇಲಾಖೆ ಸೂಚನೆಯಂತೆ ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.