
‘ರೆಡ್ ಚೆರೀಸ್ ಆನ್ ದ ಕೆನರಾ ಕೋಸ್ಟ್; ಸ್ಟೋರಿ ಆಫ್ ಕ್ರಿಕೆಟ್ ಇನ್ ಮಂಗಳೂರು ಆ್ಯಂಡ್ ಉಡುಪಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕಸ್ತೂರಿ ಬಾಲಕೃಷ್ಣ ಪೈ ಮತ್ತು ಕೃಷ್ಣ ಜೆ ಪಾಲೆಮಾರ್ ಮಾತುಕತೆಯಲ್ಲಿ ತೊಡಗಿದ್ದರು. ಪ್ರಶಾಂತ್ ಶೇಟ್ ಮತ್ತು ಜಯಂತ್ ಕೋಡ್ಕಣಿ ಪಾಲ್ಗೊಂಡಿದ್ದರು
ಪ್ರಜಾವಾಣಿ ಚಿತ್ರ
ಮಂಗಳೂರು: ಎಡಗೈ ಬ್ಯಾಟರ್, ಆಕರ್ಷಕ ಡ್ರೈವ್‌ಗಳ ಸರದಾರ ಮಂಗಳೂರಿನ ದಯಾನಂದ ಕಾಮತ್ ಅವರ ಮೋಹಕ ಆಟದ ನೋಟ, ಭಾರತ ಟೆಸ್ಟ್ ತಂಡದಲ್ಲಿ ಆಡಿದ ಪುತ್ತೂರಿನ ರಘುರಾಮ್ ಭಟ್ ಅವರ ಸಾಂಪ್ರದಾಯಿಕ ಎಡಗೈ ಸ್ಪಿನ್ ಮೋಡಿ, ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಕೆ.ಎಲ್ ರಾಹುಲ್ ನೆಹರು ಮೈದಾನದಲ್ಲಿ ಆಡಿ ಪ್ರಶಸ್ತಿ ಗಳಿಸಿದ್ದು, ಅನಿಲ್ ಕುಂಬ್ಳೆ, ಸಚಿನ್ ತೆಂಡೂಲ್ಕರ್, ಮೊಹಮ್ಮದ್ ಅಜರುದ್ದೀನ್, ರವಿಶಾಸ್ತ್ರಿ, ಸುನಿಲ್ ಗಾವಸ್ಕರ್, ಸಂಜಯ್ ಮಾಂಜ್ರೇಕರ್ ಅವರ ಮಂಗಳೂರು ಭೇಟಿ...
ಕರಾವಳಿಯಲ್ಲಿ ಹೆಸರು ಮಾಡಿದ ಕ್ರಿಕೆಟ್ ಆಟಗಾರರನ್ನು ಮತ್ತು ಇಲ್ಲಿನ ಕ್ರಿಕೆಟ್ ಇತಿಹಾಸವನ್ನು ಬಿಂಬಿಸುವ ಚಿತ್ರಗಳು ಇಲ್ಲಿನ ಬಲ್ಲಾಲ್‌ಬಾಗ್‌ನ ಕೊಡಿಯಾಲ್‌ಗುತ್ತು ಸೆಂಟರ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್‌ನ ಪಾರಂಪರಿಕ ಮನೆಯ ಗೋಡೆಗಳ ‘ಫ್ರೇಮ್’ನಲ್ಲಿ ಮೂಡಿವೆ.
ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫೋರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್ (ಇಂಟ್ಯಾಕ್) ಮತ್ತು ಆರ್ಟ್ ಕೆನರಾ ಆಯೋಜಿಸಿರುವ ಪ್ರದರ್ಶನದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕ್ರಿಕೆಟ್‌ಗೆ ಸಂಬಂಧಿಸಿದ ಅಪರೂಪದ ಛಾಯಾಚಿತ್ರಗಳು ಇದ್ದು ಪ್ರದರ್ಶನ ನ.1ರ ವರೆಗೆ ನಡೆಯಲಿದೆ.
ಕರಾವಳಿ ಕ್ರಿಕೆಟ್‌ನ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಪುಸ್ತಕ ‘ರೆಡ್ ಚೆರೀಸ್ ಆನ್ ದ ಕೆನರಾ ಕೋಸ್ಟ್; ಸ್ಟೋರಿ ಆಫ್ ಕ್ರಿಕೆಟ್ ಇನ್ ಮಂಗಳೂರು ಆ್ಯಂಡ್ ಉಡುಪಿ’ ಬಿಡುಗಡೆ ಸಮಾರಂಭದ ಅಂಗವಾಗಿ ಈ ಪ್ರದರ್ಶನ ಏರ್ಪಡಿಸಲಾಗಿದೆ.
ಬಿ.ಸಿ ಆಳ್ವ ಅವರು ಮದ್ರಾಸ್ ತಂಡದ ಸಹ ಆಟಗಾರ ಟಿ.ವಿ ಗೋಪಿನಾಥ್ ಜೊತೆ ಪ್ಯಾಡ್ ಕಟ್ಟಿಕೊಂಡು ಮಾತುಕತೆಯಲ್ಲಿ ತೊಡಗಿರುವ, ಭಾರತ ತಂಡದ ಮಾಜಿ ವೇಗಿ ಡೇವಿಡ್ ಜಾನ್ಸನ್ ಜೊತೆಯಲ್ಲಿ ವಿಜಯ ಆಳ್ವ ನಿಂತಿರುವ, ಕೆ.ಎಲ್ ರಾಹುಲ್ ಅವರ ಪ್ರತಿಭೆ ಬೆಳಕಿಗೆ ತಂದವರು ಎನ್ನಲಾಗುವ ಕೋಚ್ ಸ್ಯಾಮ್ಯುಯೆಲ್ ಜಯರಾಜ್ ಮಕ್ಕಳನ್ನು ವಾರ್ಮ್ ಅಪ್ ಮಾಡಿಸುತ್ತಿರುವ, ವಿಕೆಟ್ ಕೀಪರ್ ಕಿರ್ಮಾನಿ, ‘ಬ್ಯಾಟಿಂಗ್ ಕಲಾವಿದ’ ಮೊಹಮ್ಮದ್ ಅಜರುದ್ದೀನ್, ಭಾರತ ತಂಡದ ಮಾಜಿ ಆರಂಭಿಕ ಆಟಗಾರ ಸುನಿಲ್ ಗಾವಸ್ಕರ್, ದಾಖಲೆ ವೀರ ಸಚಿನ್ ತೆಂಡೂಲ್ಕರ್, ಗಾವಸ್ಕರ್ ಹಾದಿಯಲ್ಲೇ ಸಾಗಿ ಬಂದ ಸಂಜಯ್ ಮಾಂಜ್ರೇಕರ್, ಗೂಗ್ಲಿ ಮಾಂತ್ರಿಕ ಅನಿಲ್ ಕುಂಬ್ಳೆ ಮುಂತಾದವರ ಕಡಲ ನಗರಿಯಲ್ಲಿ ಕಳೆದ ದಿನಗಳ ನೆನಪುಗಳೂ ಇಲ್ಲಿವೆ.
ಉಳ್ಳಾಲ ಕ್ರಿಕೆಟ್ ಅಕಾಡೆಮಿಯ ಟೂರ್ನಿ, ನಿಟ್ಟೆ ಹಿರಿಯರ ಟೂರ್ನಿ, ಪಂದ್ಯ ಆರಂಭದಲ್ಲಿ ಜಿಲ್ಲಾಧಿಕಾರಿಯಿಂದ ಶುಭ ಹಾರೈಕೆ, ನೆಹರು ಮೈದಾನದಲ್ಲಿ ನಡೆದ ಪ್ರಮುಖ ಪಂದ್ಯಗಳ ಜೊತೆಯಲ್ಲಿ ಕುಡ್ಲದ ಗಲ್ಲಿ ಕ್ರಿಕೆಟ್, ಅಂಪೈರ್ ಮತ್ತು ಪ್ರಮುಖರೊಂದಿಗೆ ಮಂಗಳೂರಿನ ಕ್ರಿಕೆಟ್ ಕೋಶ ಕಸ್ತೂರಿ ಬಾಲಕೃಷ್ಣ ಪೈ ಅವರ ಒಡನಾಟ ಮುಂತಾದವುಗಳನ್ನೂ ಪ್ರದರ್ಶನದಲ್ಲಿ ವೀಕ್ಷಿಸಬಹುದಾಗಿದೆ.
ಪುಸ್ತಕ ಬಿಡುಗಡೆ
‘ರೆಡ್ ಚೆರೀಸ್ ಆನ್ ದ ಕೆನರಾ ಕೋಸ್ಟ್’ ಪುಸ್ತಕವನ್ನು ಉದ್ಯಮಿ ಕೃಷ್ಣ ಜೆ ಪಾಲೆಮಾರ್ ಬಿಡುಗಡೆ ಮಾಡಿದರು. ಉದ್ಯಮಿ ಪ್ರಶಾಂತ್ ಶೇಟ್, ಪುಸ್ತಕದ ಸಂಪಾದಕರಾದ ಜಯಂತ್ ಕೋಡ್ಕಣಿ ಮತ್ತು ಕಸ್ತೂರಿ ಬಾಲಕೃಷ್ಣ ಪೈ ಪಾಲ್ಗೊಂಡಿದ್ದರು. ಕಸ್ತೂರಿ ಬಾಲಕೃಷ್ಣ ಪೈ ಮತ್ತು ಪತ್ನಿ ಮಂಗಳಾ ಪೈ ಅವರನ್ನು ಸನ್ಮಾನಿಸಲಾಯಿತು.
1957ರಲ್ಲಿ ಮತ್ತು 1959ರಲ್ಲಿ ನೆಹರು ಮೈದಾನದಲ್ಲಿ ನಡೆದ ಮೈಸೂರು ಮತ್ತು ಕೇರಳ ನಡುವಿನ ರಣಜಿ ಪಂದ್ಯಗಳನ್ನು ವೀಕ್ಷಿಸಿದ್ದು ನನ್ನ ಬದುಕು ಕ್ರಿಕೆಟ್‌ನತ್ತ ಹೊರಳಲು ಕಾರಣವಾಯಿತು.ಕಸ್ತೂರಿ ಬಾಲಕೃಷ್ಣ ಪೈ ನಿವೃತ್ತ ಅಂಪೈರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.