
ಮಂಗಳೂರು: ‘ಕೆಂಪುಕಲ್ಲು ಗಣಿಗಾರಿಕೆಗೆ ಪರವಾನಗಿ ನೀಡುವ ಪ್ರಕ್ರಿಯೆಯನ್ನು ಸರಳೀಕರಿಸಿರುವ ಸರ್ಕಾರ ಅದರ ರಾಯಧನವನ್ನೂ ಕಡಿಮೆ ಮಾಡಿದೆ. ಆ ಬಳಿಕವೂ ಕೆಂಪುಕಲ್ಲು ಪೂರೈಕೆದಾರರು ಪ್ರತಿ ಇಟ್ಟಿಗೆಯ ದರವನ್ನು ದುಪ್ಪಟ್ಟುಗೊಳಿಸಿದ್ದಾರೆ. ಇದರಿಂದ ಜನರ ಮೇಲೆ ಹೊರೆ ಬೀಳುತ್ತಿದೆ’ ಎಂದು ಇಲ್ಲಿನ ಸಿವಿಲ್ ಗುತ್ತಿಗೆದಾರರ ಸಂಘ ಆರೋಪಿಸಿದೆ.
ಸರ್ಕಾರ ತಕ್ಷಣ ಮಧ್ಯಪ್ರವೇಶ ಮಾಡಿ, ಕೆಂಪುಕಲ್ಲಿನ ದರವನ್ನು ಕಡಿಮೆಗೊಳಿಸಬೇಕು ಎಂದು ಸಂಘದ ಅಧ್ಯಕ್ಷ ಮಹಾಬಲ ಕೊಟ್ಟಾರಿ ಒತ್ತಾಯಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಕೆಂಪುಕಲ್ಲಿನ ಅಭಾವ ನೀಗಿಸುವ ಸಲುವಾಗಿ ಸರ್ಕಾರದ ಮೇಲೆ ಒತ್ತಡ ಹೇರಿದ್ದೆವು. ಇದೆಲ್ಲದರ ಫಲವಾಗಿ ಸರ್ಕಾರ ಕೆಲವೊಂದು ಪರಿಹಾರ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲೆಯಲ್ಲಿ ಈಗಾಗಲೇ 50 ಮಂದಿಗೆ ಕೆಂಪುಕಲ್ಲು ಗಣಿಗಾರಿಕೆಗೆ ಪರವಾನಗಿ ನೀಡಲಾಗಿದೆ. ಹಿಂದೆ 3 ಮೀ ಆಳದವರೆಗೆ ಮಾತ್ರ ಕೆಂಪುಕಲ್ಲು ತೆೆಗೆಯಬಹುದಿತ್ತು. ಈಗ 6 ಮೀ ಆಳದವರೆಗೂ ತೆಗೆಯಲು ಅವಕಾಶ ಕಲ್ಪಿಸಲಾಗಿದೆ’ ಎಂದರು.
‘ನಾಲ್ಕೈದು ತಿಂಗಳ ಹಿಂದೆ ಪ್ರತಿ ಕೆಂಪುಕಲ್ಲಿನ ಇಟ್ಟಿಗೆಗೆ ₹ 28ರಿಂದ ₹ 30 ದರವಿತ್ತು. ಈಗ ₹ 55ರಿಂದ ₹ 60 ದರ ವಿಧಿಸಲಾಗುತ್ತಿದೆ. ಸರ್ಕಾರ ರಾಯಧನವನ್ನು ₹265ರಿಂದ ₹ 90ಕ್ಕೆ ಇಳಿಸಿದ ಬಳಿಕವೂ ಕೆಂಪುಕಲ್ಲಿನ ದರವನ್ನು ದುಪ್ಪಟ್ಟುಗೊಳಿಸಿರುವುದು ಅಕ್ಷಮ್ಯ. ಕೆಂಪುಕಲ್ಲು ಗಣಿಗಾರಿಕೆ ನಿಯಮ ಸರಳೀಕರಣದ ಹೋರಾಟದಲ್ಲಿ ನಾವೂ ಗಣಿಗಾರಿಕೆ ನಡೆಸುವವರನ್ನು ಬೆಂಬಲಿಸಿದ್ದೆವು. ಆದರೆ ಅವರು ಈಗ ದರ ಇಳಿಸಬೇಕೆಂಬ ಕೋರಿಕೆಗೆ ಸೊಪ್ಪು ಹಾಕುತ್ತಿಲ್ಲ’ ಎಂದರು.
‘ನಾವು ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿ ನಿರ್ದಿಷ್ಟ ದರಕ್ಕೆ ಅದರ ಮಾಲೀಕರ ಜೊತೆ ಒಪ್ಪಂದ ಮಾಡಿಕೊಂಡಿರುತ್ತೇವೆ. ಈಗ ಏಕಾಏಕಿ ಕೆಂಪುಕಲ್ಲಿನ ದರ ದುಪ್ಪಟ್ಟಾದರೆ ನಮಗೂ ಸಮಸ್ಯೆಯಾಗುತ್ತದೆ. 1200 ಚದರ ಅಡಿಯ ಕಟ್ಟಡ ನಿರ್ಮಾಣಕ್ಕೆ ಈಗ ಹಿಂದಿಗಿಂತ ₹ 3 ಲಕ್ಷದಷ್ಟು ಹೆಚ್ಚುವರಿ ಹೊರೆ ಬೀಳುತ್ತಿದೆ. ಬಡವರು ಮನೆ ಕಟ್ಟಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ’ ಎಂದರು.
‘ಜಿಲ್ಲೆಯ ಕೆಂಪುಕಲ್ಲುಗಳನ್ನು ಹೊರಜಿಲ್ಲೆಗಳಿಗೆ ಸಾಗಿಸುವುದರ ಮೇಲೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಇಲ್ಲಿನ ಕೆಂಪುಕಲ್ಲುಗಳು ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಮುಂತಾ ಜಿಲ್ಲೆಗಳಿಗೆ ಈಗಲೂ ಸಾಗಾಟ ವಾಗುತ್ತಿದೆ. ನಮ್ಮ ಜಿಲ್ಲೆಗೆ ಕೇರಳದಿಂದಲೂ ಅಕ್ರಮವಾಗಿ ಕೆಂಪುಕಲ್ಲು ತಲುಪುತ್ತಿದೆಯಾದರೂ, ಅದರ ದರ ಕಡಿಮೆಯೇನಿಲ್ಲ’ ಎಂದರು.
ಸರ್ಕಾರವು ಕೆಂಪುಕಲ್ಲು ಪೂರೈಕೆದಾರರ ಜೊತೆ ಸಮಾಲೋಚನೆ ನಡೆಸಿ ನ್ಯಾಯಯುತ ದರವನ್ನು ನಿಗದಿಪಡಿಸಬೇಕು. ಇಷ್ಟರವರೆಗೆ ನಾವು ಯಾವುದೇ ಪ್ರತಿಭಟನೆಯಲ್ಲಿ ತೊಡಗದೇ, ಸರ್ಕಾರದ ಜೊತೆ ಸಮಾಲೋಚಿಸಿ ಸಮಸ್ಯೆ ಇತ್ಯರ್ಥಕ್ಕೆ ಶ್ರಮಿಸಿದ್ದೆವು. ನಮ್ಮ ಬೇಡಿಕೆಗೆ ಸ್ಪಂದನೆ ಸಿಗದೇ ಹೋದರೆ, ಪ್ರತಿಭಟನೆ ನಡೆಸುವುದು ಅನಿವಾರ್ಯ’ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ದಿನಕರ ಸುವರ್ಣ, ಕಾರ್ಯದರ್ಶಿ ಅಶೋಕ್ ಕುಳಾಯಿ, ಖಜಾಂಚಿ ಸುರೇಶ್ ಜೆ, ಸದಸ್ಯರಾದ ವೆಂಕಟೇಶ್, ಸುಬ್ರಹ್ಮಣ್ಯ, ಸತೀಶ್ ಜೋಗಿ ಮಾಲೆಮಾರ್ ಭಾಗವಹಿಸಿದ್ದರು.
‘ಮರಳು ಸಮಸ್ಯೆ ನೀಗಿದರೂ ದರ ದುಬಾರಿ’
‘ಜಿಲ್ಲಾಡಳಿತವು ಮಳಲಿಅದ್ಯಪಾಡಿ. ಕಲ್ಲೂರು ಸಹಿತ ಅನೇಕ ಕಡೆ ಕರಾವಳಿ ನಿರ್ಬಂಧ ವಲಯದ ಆಚೆಗೆ ಮರಳಿನ ಹೊಸ ಬ್ಲಾಕ್‌ಗಳನ್ನು ಗುರುತಿಸಿ ಗಣಿಗಾರಿಕೆಗೆ ಅವಕಾಶ ಕಲ್ಪಿಸಿದೆ. ಇದರಿಂದಾಗಿ ಮರಳಿನ ಅಭಾವವೂ ನೀಗಿದೆ. ಆದರೆ ಮರಳಿನ ದರವೂ ಹಿಂದಿಗಿಂತ ಅನೇಕ ಪಟ್ಟು ಹೆಚ್ಚಾಗಿದೆ’ ಎಂದು ಮಹಾಬಲ ಕೊಟ್ಟಾರಿ ದೂರಿದರು. ‘ಹಿಂದೆಲ್ಲ ಪ್ರತಿ ಲೋಡ್‌ಗೆ ₹ 6500ರಿಂದ ₹ 7ಸಾವಿರದ ಒಳಗೆ ಮರಳು ಸಿಗುತ್ತಿತ್ತು. ಈಗ ಪ್ರತಿ ಲೋಡ್ ಮರಳಿಗೆ ₹ 23ಸಾವಿರ ನೀಡಬೇಕಾದ ಸ್ಥಿತಿ ಇದೆ. ಸಿಆರ್‌ಜೆಡ್ ವ್ಯಾಪ್ತಿಯ ಮರಳಿಗೆ ಹೋಲಿಸಿದರೆ ಸಿಆರ್‌ಜೆಡ್ ಆಚೆಗಿನ ಮರಳಿನ ಗುಣಮಟ್ಟವೂ ಕಡಿಮೆ. ಪ್ರತಿ ಲೋಡ್‌ನಲ್ಲಿ ಅರ್ಧಪಾಲು ಮರಳು ಮಾತ್ರ ಕಟ್ಟಡ ನಿರ್ಮಾಣಕ್ಕೆ ಬಳಕೆಗೆ ಯೋಗ್ಯವಾಗಿರುತ್ತದೆ’ ಎಂದರು.