
ಪ್ರಜಾವಾಣಿ ವಾರ್ತೆ
ಬೆಳ್ತಂಗಡಿ: ಮಳೆಗಾಲ ಸಮೀಪಿಸುತ್ತಿದ್ದಂತೆ ನದಿ ಸಮೀಪದ ಮನೆಗಳ ಸುರಕ್ಷತೆ, ಶಾಲೆಗೆ ತೆರಳುವ ಮಕ್ಕಳ ಮೇಲೆ ನಿಗಾ ಇರಿಸುವುದೂ ಸೇರಿದಂತೆ ಗ್ರಾಮ ಮಟ್ಟದಲ್ಲಿ ಸಂಭವನೀಯ ಅಪಘಾತ ತಪ್ಪಿಸಲು ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವ ಸಂಬಂಧ ತಾಲ್ಲೂಕು ಆಡಳಿತವು ಸಿದ್ಧತೆ ನಡೆಸಿದೆ.
ಸಂಭವನೀಯ ಅಪಾಯ ತಡೆಗಟ್ಟುವ ನಿಟ್ಟಿನಲ್ಲಿ ಅಗ್ನಿಶಾಮಕ ತಂಡದಿಂದ ಅಣಕು ಕಾರ್ಯಾಚರಣೆ ನಡೆಯಿತು. ಮಣ್ಣುಕುಸಿತ ಹಾಗೂ ಅಗ್ನಿ ಅವಘಡ ನಡೆದಾಗ ಗಾಯಾಳುಗಳನ್ನು ಕಟ್ಟಡದೊಳಗಿಂದ ರಕ್ಷಿಸುವ ಕಾರ್ಯದ ಅಣಕು ಪ್ರದರ್ಶನವನ್ನು ಬೆಳ್ತಂಗಡಿ ವಿಘ್ನೇಶ್ ಸಿಟಿ ಕಟ್ಟಡದಲ್ಲಿ ನಡೆಸಲಾಯಿತು. ನೀರಿಗೆ ಬಿದ್ದ ವ್ಯಕ್ತಿಯನ್ನು ಬೋಟ್ ಮೂಲಕ ರಕ್ಷಿಸುವ ಅಣಕು ಪ್ರದರ್ಶನವು ಗುರುವಾಯನಕೆರೆಯಲ್ಲಿ ತಹಶೀಲ್ದಾರ್ ಸಮ್ಮುಖದಲ್ಲಿ ನಡೆಸಲಾಯಿತು. ಗಾಳಿಯಿಂದ ರಸ್ತೆಗೆ ಬಿದ್ದ ಮರಗಳನ್ನು ಯಂತ್ರಗಳ ಮೂಲಕ ತೆರವುಗೊಳಿಸುವ ಕಾರ್ಯಾಚರಣೆಯ ಅಣುಕು ಪ್ರದರ್ಶನ ನಡೆಸಲಾಯಿತು.
ಮಿತ್ತಬಾಗಿಲು ಗ್ರಾಮದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆ, ಭಂಡಾರಿಕೋಡಿ, ಕಡಿರುದ್ಯಾವರ ಗ್ರಾಮದ ಕೊಡಿಯಾಲುಬೈಲು, ಬೆಳ್ತಂಗಡಿ ಕಸಬಾ ಅಂಬೇಡ್ಕರ್ ಭವನ, ವೇಣೂರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು, ಚಾರ್ಮಾಡಿ ಗ್ರಾಮದ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನ, ಮಿತ್ತಬಾಗಿಲು ಗ್ರಾಮದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆ ಕಿಲ್ಲೂರು, ಮಲವಂತಿಗೆ ಗ್ರಾಮದ ಕಜಕೆ ಹಿರಿಯ ಪ್ರಾಥಮಿಕ ಶಾಲೆ ಕಿಲ್ಲೂರು, ಕರಿಯಾಲ ಹಿರಿಯ ಪ್ರಾಥಮಿಕ ಶಾಲೆ, ಬಂದಾರು ಗ್ರಾಮದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆ, ಕೊಕ್ಕಡ ಗ್ರಾಮದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯನ್ನು ತಾಲ್ಲೂಕಿನ ಪ್ರಮುಖ ಕಾಳಜಿ ಕೇಂದ್ರವಾಗಿ ಗುರುತಿಸಲಾಗಿದೆ.
ಕಂಟ್ರೋಲ್ ರೂಮ್ ಸ್ಥಾಪನೆ: ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಭಾರಿ ಮಳೆ ಹಾಗೂ ಬಿರುಗಾಳಿಯಿಂದ ಉಂಟಾಗುವ ಅನಾಹುತ ಉಂಟಾದಾಗ ನೆರವಾಗಲು ಬೆಳ್ತಂಗಡಿ ತಾಲ್ಲೂಕು ಕಚೇರಿಯಲ್ಲಿ ದಿನದ 24 ಗಂಟೆ ಕಾರ್ಯ ನಿರ್ವಹಿಸುವ ಕಂಟ್ರೋಲ್ ರೂಂ ತೆರೆಯಲಾಗುವುದು. ತುರ್ತು ಸೇವಾ ಸಂಖ್ಯೆ 08256- 232047 ಸಂಪರ್ಕಿಸಬಹುದು.
ಮುಂಗಾರು ಋತುವಿನಲ್ಲಿ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪಗಳೆಡೆಗೆ ಗಮನ ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಈಗಾಗಲೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಮಳೆ ಸಂದರ್ಭ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು ಎಂದು ತಹಶೀಲ್ದಾರ್ ಪೃಥ್ವಿ ಸಾನಿಕಂ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.