ADVERTISEMENT

ಕುಡಿಯುವ ನೀರಿನ ಬವಣೆ ನೀಗಿಸಲು ಅನುದಾನ ನೀಡಿ: ಖಾದರ್‌

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2023, 5:12 IST
Last Updated 15 ಮಾರ್ಚ್ 2023, 5:12 IST
ಯು.ಟಿ.ಖಾದರ್‌
ಯು.ಟಿ.ಖಾದರ್‌   

ಮಂಗಳೂರು: ‘ಬೇಸಿಗೆಯಲ್ಲಿ ಎದುರಾಗಿರುವ ಕುಡಿಯುವ ನೀರಿನ ಬವಣೆ ನೀಗಿಸಲು ಸರ್ಕಾರ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ವಿಶೇಷ ಅನುದಾನ ಬಿಡುಗಡೆ ಮಾಡಬೇಕು’ ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್‌ ಒತ್ತಾಯಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಕಾಂಗ್ರೆಸ್‌ ನೇತೃತ್ವದ ಸರ್ಕಾರವು ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಪ್ರತಿಯೊಂದು ವಿಧಾನ ಸಭಾ ಕ್ಷೇತ್ರಕ್ಕೆ ₹ 30 ಲಕ್ಷ ಅನುದಾನ ಬಿಡುಗಡೆ ಮಾಡಿತ್ತು’ ಎಂದು ನೆನಪಿಸಿದರು.

‘ಬಿಜೆಪಿ ನೇತೃತ್ವದ ಸರ್ಕಾರದ ಸಚಿವರು ನೀರಿನ ಬವಣೆ ನೀಗಿಸುವುದರ ಬದಲು ವಿಜಯ ಸಂಕಲ್ಪ ಯಾತ್ರೆಯಲ್ಲಿ ನಿರತರಾಗಿದ್ದಾರೆ’ ಎಂದು ಟೀಕಿಸಿದರು.

ADVERTISEMENT

‘ರಾಜ್ಯದಾದ್ಯಂತ ಜನ ಈಗಾಗಲೇ ನೀರಿನ ತೀವ್ರ ಅಭಾವ ಎದುರಿಸುತ್ತಿದ್ದಾರೆ. ವಿಶೇಷ ಅನುದಾನ ಒದಗಿಸುವುದರ ಜೊತೆಗೆ ನೀರಿನ ಅಭಾವ ಇರುವ ಕಡೆ ಟ್ಯಾಂಕರ್‌ ಮೂಲಕ ನೀರು ಪೂರೈಸುವುದಕ್ಕೆ ಟೆಂಡರ್‌ ಕರೆಯುವಂತೆ ಜಿಲ್ಲಾಡಳಿತಕ್ಕೆ ಸರ್ಕಾರ ನಿರ್ದೇಶನ ನೀಡಬೇಕು. ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಮಟ್ಟದ ಕಾರ್ಯಪಡೆಯ ಸಭೆ ಕರೆದು ನೀರಿನ ಬವಣೆ ನೀಗಿಸುವ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯನ್ನು ‘40 ಪರ್ಸೆಂಟ್‌’ ಎಂದು ಬಣ್ಣಿಸಿದ ಖಾದರ್‌, ‘ರಾಜ್ಯ ಸರ್ಕಾರದ ಅಂಗಡಿ ಬಾಗಿಲು ಮುಚ್ಚಿದೆ. ಬಿಜೆಪಿ ಹೇಳಿಕೊಂಡಿರುವಂತೆ ಉತ್ತಮ ಕೆಲಸ ಮಾಡಿದ್ದಿದ್ದರೆ, ಅವರು ಭಯ ಪಡುವ ಅಗತ್ಯ ಇರಲಿಲ್ಲ. ಈಗ ವಿಜಯ ಸಂಕಲ್ಪ ಯಾತ್ರೆ ಕೈಗೊಳ್ಳುವ ಅಗತ್ಯವೇನಿತ್ತು’ ಎಂದು ಪ್ರಶ್ನಿಸಿದರು.

‘ಆರ್‌ಟಿಒ ಕಚೇರಿಗಳಲ್ಲಿ ಸ್ಮಾರ್ಟ್‌ಕಾರ್ಡ್ ಕೊರತೆಯಿಂದಾಗಿ ವಾಹನ ನೋಂದಣಿ ಪತ್ರ ಮುದ್ರಿಸಲು ಆಗುತ್ತಿಲ್ಲ. ಗರ್ಭಿಣಿಯರಿಗೆ ತಾಯಿ ಕಾರ್ಡ್ ಕೂಡ ವಿತರಿಸುತ್ತಿಲ್ಲ. ತಾಯಿ ಕಾರ್ಡ್‌ ಮುದ್ರಿಸುವುದಕ್ಕೂ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ’ ಎಂದು ದೂರಿದರು.

ಆಜಾನ್‌ ಕುರಿತು ಬಿಜೆಪಿ ಮುಖಂಡ ಕೆ.ಎಸ್‌.ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಖಾದರ್‌, ‘ಅವರು ಸಂಪುಟಕ್ಕೆ ಮತ್ತೆ ಸೇರ್ಪಡೆಯಾಗಲು ವಿಫಲರಾದರು. ಅವರಿಗೆ ಟಿಕೆಟ್‌ ಸಿಗುವ ಖಾತರಿಯೂ ಇಲ್ಲ. ಹಾಗಾಗಿ ಚುನಾವಣೆ ಸಂದರ್ಭದಲ್ಲಿ ಹೈಕಮಾಂಡ್‌ ಅನ್ನು ತೃಪ್ತಿಪಡಿಸಲು ಪ್ರಚೋದನಾಕಾರಿ ಹೇಳಿಕೆ ನೀಡುತ್ತಿದ್ದಾರೆ’ ಎಂದರು.

‘ಧರ್ಮದ ಬಗ್ಗೆ ಯಾರು ಅವಹೇಳನಕಾರಿಯಾಗಿ ಮಾತನಾಡಿದರೂ, ಅದರಿಂದ ಧರ್ಮಕ್ಕೆ ಅಪಚಾರ ಆಗುವುದಿಲ್ಲ. ಹಾಗೆ ಮಾತನಾಡುವವರ ಸಂಸ್ಕಾರವನ್ನು ಅದು ಸೂಚಿಸುತ್ತದೆ’ ಎಂದರು.

ತೊಕ್ಕೊಟ್ಟಿನಲ್ಲಿ ಅಬ್ಬಕ್ಕ ಭವನದ ನಿರ್ಮಾಣದ ಕುರಿತು ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಖಾದರ್‌, ‘ಈ ಉದ್ದೇಶಕ್ಕೆ ₹ 8 ಕೋಟಿ ಈಗಾಗಲೇ ಬಿಡುಗಡೆಯಾಗಿದೆ. ಆದರೂ ಕಾಮಗಾರಿ ಆರಂಭಿಸಲು ಬಿಜೆಪಿ ನೇತೃತ್ವದ ಸರ್ಕಾರ ವಿಫಲವಾಗಿದೆ. ಕಾಂಗ್ರೆಸ್‌ ಅಧಿಕಾರದ ಅವಧಿಯಲ್ಲಿ ಅಬ್ಬಕ್ಕ ಉತ್ಸವಕ್ಕ ₹ 50 ಲಕ್ಷ ಅನುದಾನ ನೀಡಲಾಗಿತ್ತು. ಅದನ್ನು ಈಗ ₹ 10 ಲಕ್ಷಕ್ಕೆ ಇಳಿಸಲಾಗಿದೆ. ಅದರ ಬದಲು ಕನ್ನಡ ಮತ್ತು ಸಂಸ್ಕೃತಿ ಸಚಿವರು ಕಾರ್ಕಳ ಉತ್ಸವವನ್ನು ಹಮ್ಮಿಕೊಂಡರು’ ಎಂದು ಆರೋಪಿಸಿದರು.

‘ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್‌ಗೆ ಗ್ಯಾರಂಟಿಯೂ ಇದೆ. ವಾರಂಟಿಯೂ ಇದೆ. ಬಿಜೆಪಿ ನೀಡಿದ್ದ ಆಶ್ವಾಸನೆಗಳಲ್ಲಿ ಶೇ 10ರಷ್ಟನ್ನೂ ಈಡೇರಿಸಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.