ADVERTISEMENT

ಹೀಗಿದ್ದರು ಜಾರ್ಜ್ ಫರ್ನಾಂಡಿಸ್: ಪುರುಷೋತ್ತಮ ಬಿಳಿಮಲೆ ಬರಹ

ಡಾ.ಪುರುಷೋತ್ತಮ ಬಿಳಿಮಲೆ
Published 29 ಜನವರಿ 2019, 8:00 IST
Last Updated 29 ಜನವರಿ 2019, 8:00 IST
ಬೆಂಗಳೂರಿನ ಕಬ್ಬನ್‌ಪಾರ್ಕ್‌ನಲ್ಲಿ ಜನವರಿ 29, 1993ರಲ್ಲಿ ಕಾರ್ಗಿಲ್ ಬೀಜೋತ್ಪಾದನ ಕಂಪನಿ ವಿರುದ್ಧ ರೈತಸಂಘ ಆಯೋಜಿಸಿದ್ದ ರ‍್ಯಾಲಿಯಲ್ಲಿ ಜಾರ್ಜ್ ಫರ್ನಾಂಡಿಸ್ ಮಾತನಾಡಿದ್ದರು.  ಜಾರ್ಜ್‌ ಸೋದರ ಲಾರೆನ್ಸ್ ಫರ್ನಾಂಡಿಸ್, ರೈತಸಂಘದ ನಾಯಕ ಎಂ.ಡಿ.ನಂಜುಂಡಸ್ವಾಮಿ, ಮುಖಂಡ ಕೆ.ಜಿ.ಮಹೇಶ್ವರಪ್ಪ ಇತರರು ಪಾಲ್ಗೊಂಡಿದ್ದರು. (ಪ್ರಜಾವಾಣಿ ಸಂಗ್ರಹ)
ಬೆಂಗಳೂರಿನ ಕಬ್ಬನ್‌ಪಾರ್ಕ್‌ನಲ್ಲಿ ಜನವರಿ 29, 1993ರಲ್ಲಿ ಕಾರ್ಗಿಲ್ ಬೀಜೋತ್ಪಾದನ ಕಂಪನಿ ವಿರುದ್ಧ ರೈತಸಂಘ ಆಯೋಜಿಸಿದ್ದ ರ‍್ಯಾಲಿಯಲ್ಲಿ ಜಾರ್ಜ್ ಫರ್ನಾಂಡಿಸ್ ಮಾತನಾಡಿದ್ದರು. ಜಾರ್ಜ್‌ ಸೋದರ ಲಾರೆನ್ಸ್ ಫರ್ನಾಂಡಿಸ್, ರೈತಸಂಘದ ನಾಯಕ ಎಂ.ಡಿ.ನಂಜುಂಡಸ್ವಾಮಿ, ಮುಖಂಡ ಕೆ.ಜಿ.ಮಹೇಶ್ವರಪ್ಪ ಇತರರು ಪಾಲ್ಗೊಂಡಿದ್ದರು. (ಪ್ರಜಾವಾಣಿ ಸಂಗ್ರಹ)   

ಜಾರ್ಜ್‌ ಫರ್ನಾಂಡಿಸ್ ಒಡನಾಟವನ್ನುದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಮತ್ತು ಜಾನಪದ ವಿದ್ವಾಂಸ ಡಾ.ಪುರುಷೋತ್ತಮ ಬಿಳಿಮಲೆ ನೆನಪಿಸಿಕೊಳ್ಳುವುದು ಹೀಗೆ...

–––

ಕಾರ್ಮಿಕ ನಾಯಕ ಜಾರ್ಜ್ ಫೆರ್ನಾಂಡಿಸ್ ನನ್ನ ಇಷ್ಟದ ವ್ಯಕ್ತಿಗಳಲ್ಲಿ ಒಬ್ಬರು. 1977ರ ಚಿಕ್ಕಮಗಳೂರು ಚುನಾವಣೆಯಲ್ಲಿ ನಾವು ಕೆಲವರುಅವರ ಭಾಷಣ ಕೇಳಲುಕಾರ್ಕಳ, ಮೂಡಿಗೆರೆ, ಉಜಿರೆ, ಮೊದಲಾದ ಸ್ಥಳಗಳಿಗೆ ಹೋಗಿದ್ದೆವು. ಚುನಾವಣೆಯಲ್ಲಿ ಕಾಂಗ್ರೆಸ್‌ನ ಯಾರೋ ಒಮ್ಮೆ ಅವರನ್ನು ಕೇಂದ್ರೀಕರಿಸಿ, ‘ಕ್ರಿಶ್ಚಿಯನ್ ಗೆ ವೋಟ್ ಹಾಕ್ತಿರಾ?’ ಅಂತ ಮತದಾರರನ್ನು ಕೇಳಿದ್ದರು. ಮರುದಿನ ಕಾರ್ಕಳದಲ್ಲಿ ಜಾರ್ಜ್ ಹೇಳಿದ್ದು ಹೀಗೆ...

ADVERTISEMENT

‘ಯಾರೋ ನನ್ನನ್ನು ಕ್ರಿಶ್ಚಿಯನ್ ಅಂದರು. ನಾನು ಹುಟ್ಟಿದ್ದು ಮಂಗಳೂರಿನಲ್ಲಿ, ನನ್ನ ತಂದೆ ಒಬ್ಬ ಕ್ರಿಶ್ಚಿಯನ್, ಬೆಳೆದದ್ದು ಹಿಂದೂಗಳ ಜೊತೆ, ಮಾತೃಭಾಷೆ ಕೊಂಕಣಿ, ಮಾತಾಡಿದ್ದು ತುಳು, ಡೆಲ್ಲಿಯಲ್ಲಿನ ವ್ಯವಹಾರ ಹಿಂದಿಯಲ್ಲಿ, ಓದಿದ್ದು ಬೆಂಗಳೂರಿನಲ್ಲಿ, ಹೋರಾಟ ನಡೆಸಿದ್ದು ಬೊಂಬೇಯಲ್ಲಿ, ನನ್ನ ಕರ್ಮ ಕ್ಷೇತ್ರ ಮುಜಾಫುರ್‌ಪುರ್, ನನ್ನ ಕಚೇರಿ ಇರುವುದು ದೆಹಲಿಯಲ್ಲಿ… ನನಗೆ ಯಾವ ಊರು?ನಂದು ಯಾವ ಜಾತಿ?ನಂದು ಯಾವ ಭಾಷೆ?’ ಎಂದು ತಮ್ಮನ್ನೇ ಪ್ರಶ್ನಿಸಿಕೊಂಡ ಜಾರ್ಜ್,ಭಾಷಣದ ನಡುವೆ ಆಗಾಗ ರಾಮಮನೋಹರ ಲೋಹಿಯಾರನ್ನು ನೆನಪು ಮಾಡುತ್ತಿದ್ದರು.ಮುಂದೆ ನಾವೆಲ್ಲ ಲೋಹಿಯಾರನ್ನು ಓದುವಂತೆ ಮಾಡಿದರು. ನಾನು ದೆಹಲಿ ಸೇರಿದ ಮೇಲೆ ಅಲ್ಲಿಇಲ್ಲಿ ಅವರನ್ನು ಭೇಟಿ ಆಗುತ್ತಿದ್ದೆ. ಅವರ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದ ರಾಮಮೋಹನ ರಾವ್ ಅವರು ಸಮಯ ಸಿಕ್ಕಾಗಲೆಲ್ಲ ಜಾರ್ಜ್ ಅವರೊಡನೆ ಚಹಾಕ್ಕೆ ಕರೆಯುತ್ತಿದ್ದರು.

ಚಹಾ ಕುಡಿಯುತ್ತಿದ್ದಾಗ ಒಮ್ಮೆ ಜಾರ್ಜ್, ‘ನೋಡಿ, ನಾನು ಇಂದಿರಾಗಾಂಧಿಯನ್ನು ಒಮ್ಮೆ ಸುಳ್ಳುಗಾರ್ತಿ ಅಂದುಬಿಟ್ಟೆ. ಕೂಡಲೇ ಮೊರಾರ್ಜಿ ದೇಸಾಯಿಯವರು ನನ್ನನ್ನು ಕರೆದು– ಹಾಗೆಲ್ಲ ಅಸಂಸದೀಯ ಪದಗಳನ್ನು ಬಳಸಬಾರದು. ಇಂದಿರಾ ಅವರು ಸತ್ಯ ಹೇಳಲಿ’ ಎಂದು ಹೇಳಬೇಕುಎಂದು ಮಾರ್ಗದರ್ಶನ ಮಾಡಿದರು’ ಎಂದು ನೆನಪಿಸಿಕೊಂಡಿದ್ದರು.

ಬಹುಶಃ2004ರಲ್ಲಿ, ನಾವೆಲ್ಲ ದೆಹಲಿಯಲ್ಲಿ ನಡೆಸಿದ ತುಳು ಸಮಾವೇಶಕ್ಕೆ ಆಗಮಿಸಿದ್ದ ಅವರು, ತುಳುವಿನಲ್ಲಿ ಭಾಷಣ ಮಾಡಿ, ನಾವು ಕೊಟ್ಟ ಮನವಿಯನ್ನು ಆಗಣ ಪ್ರಧಾನಿ ವಾಜಪೇಯಿ ಅವರಿಗೆ ಹಸ್ತಾಂತರಿಸಿ, ತುಳುವಿಗೆ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸ್ಥಾನ ನೀಡಲೇಬೇಕೆಂದು ಅಗ್ರಹಿಸಿದ್ದರು.

2012ರ ಜೂನ್ ತಿಂಗಳಿನಲ್ಲಿ ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ನಾನು ದಾಖಲಾಗಿದ್ದಾಗ, ನನ್ನ ಪಕ್ಕದ ಕೋಣೆಯಲ್ಲಿ ಫೆರ್ನಾಂಡಿಸ್ ದಾಖಲಾಗಿದ್ದರು. ಅವರನ್ನು ನೋಡಿ ನಾನು, ನನ್ನನ್ನು ನೋಡಿ ಅವರು ಮರುಕ ಪಟ್ಟದ್ದುಂಟು. ಅದೇ ಕೊನೆ ಭೇಟಿ. ಅವರು ಎಲ್ಲವನ್ನೂ ಮರೆಯುತ್ತಾ ಹೋದರು.ಉಗ್ರ ಹೋರಾಟಗಾರ, ಪ್ರಖರ ಲೋಹಿಯಾವಾದಿ, ಛಲದಂಕ ಮಲ್ಲ, ಜಾತ್ಯತೀತ ಶಕ್ತಿಗಳ ನಾಯಕ, ನನ್ನೂರಿನ ಹೆಮ್ಮೆಯ ಜಾರ್ಜ್ ಫೆರ್ನಾಂಡಿಸ್ ಮುಂದೆ ನಾವೆಲ್ಲ ನೋಡುತ್ತಿದ್ದಂತೆ ಎಲ್ಲೋ ಕಾಣೆಯಾಗಿಬಿಟ್ಟರು.

ನನ್ನೂರೇ ಕಾಣೆಯಾಗಿರುವಾಗ, ಜಾರ್ಜ್ ಕಾಣೆಯಾಗಿರುವುದರಲ್ಲಿ ಅಂಥ ಅಚ್ಚರಿಯೇನೂ ಇಲ್ಲವಲ್ಲ. ಅವರಿಗೆ ನಮನಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.