ADVERTISEMENT

ಮಂಗಳೂರು: ಪ್ರತಿಭಟನೆ ಎಚ್ಚರಿಕೆ, ಚಕ್ರತೀರ್ಥಗೆ ಸನ್ಮಾನ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 7:08 IST
Last Updated 25 ಜೂನ್ 2022, 7:08 IST

ಮಂಗಳೂರು: ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷರಾಗಿದ್ದ ರೋಹಿತ್ ಚಕ್ರತೀರ್ಥ ಅವರ ಸನ್ಮಾನ ಕಾರ್ಯಕ್ರಮವನ್ನು ಆಯೋಜಕರು ಮುಂದೂಡಿದ್ದಾರೆ.

ಚಿಂತನ ಗಂಗಾ ಸೇರಿ ಕೆಲ ಸಂಘಟನೆಗಳು ಡೊಂಗರಕೇರಿಯ ಕೆನರಾ ಪ್ರೌಢ ಶಾಲೆಯ ಭುವನೇಂದ್ರ ಸಭಾಂಗಣದಲ್ಲಿ ಶನಿವಾರ ಸಂಜೆ 5ಕ್ಕೆ ‘ನಾಗರಿಕ ಸನ್ಮಾನ’ ಏರ್ಪಡಿಸಿದ್ದವು. ಇದಕ್ಕೆ ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು.

ಸಂಜೆ 4ಕ್ಕೆ ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಲು ಬಿಲ್ಲವ ಸಮಾಜ ಶುಕ್ರವಾರ ನಡೆದ ಸಭೆಯಲ್ಲಿ ತೀರ್ಮಾನಿಸಿತ್ತು. ಈ ಎಲ್ಲ ಬೆಳವಣಿಗೆಗಳ ಬಳಿಕ ಕಾರ್ಯಕ್ರಮ ಮುಂದೂಡಲು ಆಯೋಜಕರು ನಿರ್ಧರಿಸಿದ್ದಾರೆ ಎಂದು ಗೊತ್ತಾಗಿದೆ.

ADVERTISEMENT

‘ರೋಹಿತ್‌ ಚಕ್ರತೀರ್ಥ ಅವರಿಗೆ ನಾಗರಿಕ ಸನ್ಮಾನ ಎಂದ ಕೂಡಲೇ ಎಡಪಂಥೀಯರು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಮುತ್ತಿಗೆ ಹಾಕಿ ಗಲಾಟೆ, ದೊಂಬಿ ನಡೆಸಿ ನಗರದ ಶಾಂತಿ ಸುವ್ಯವಸ್ಥೆ ಹಾಳು ಮಾಡುವ ಸಾಧ್ಯತೆ ಇದೆ ಎಂಬ ಮಾಹಿತಿ ಇದೆ. ಹಾಗಾಗಿ ಕಾರ್ಯಕ್ರಮ ಮುಂದೂಡಲಾಗಿದೆ’ ಎಂಬ ಸಂದೇಶವನ್ನು ಆಯೋಜಕರು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟಿದ್ದಾರೆ.

‘ಈ ಕಾರ್ಯಕ್ರಮ ರದ್ದುಪಡಿಸಬೇಕು. ಇಲ್ಲದಿದ್ದರೆ, ಸಮಾನ ಮನಸ್ಕ ಸಂಘಟನೆಗಳು, ನಾಗರಿಕರ ಸಹಯೋಗದೊಂದಿಗೆ ಮೆರವಣಿಗೆಯಲ್ಲಿ ತೆರಳಿ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕುತ್ತೇವೆ’ ಎಂದು ದೇಶಪ್ರೇಮಿ ಸಂಘಟನೆಗಳ ಒಕ್ಕೂಟ ಹೇಳಿತ್ತು. ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಯವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ಎಐಡಿಎಸ್‌ಒ ಒತ್ತಾಯಿಸಿತ್ತು. ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.