ADVERTISEMENT

ರೌಡಿಶೀಟರ್‌ ರಾಹುಲ್‌ ತಿಂಗಳಾಯ ಕೊಲೆ: 6 ಜನರ ಬಂಧನ

​ಪ್ರಜಾವಾಣಿ ವಾರ್ತೆ
Published 9 ಮೇ 2022, 16:09 IST
Last Updated 9 ಮೇ 2022, 16:09 IST

ಮಂಗಳೂರು: ನಗರದ ಎಮ್ಮೆಕೆರೆಯಲ್ಲಿ ನಡೆದ ರೌಡಿಶೀಟರ್‌ ರಾಹುಲ್ ತಿಂಗಳಾಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಕಮಿಷನರ್‌ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಎಮ್ಮೆಕೆರೆಯ ಮಹೇಂದ್ರ ಶೆಟ್ಟಿ ಮತ್ತು ಸುಶಿತ್, ಬೋಳಾರದ ಅಕ್ಷಯ್ ಕುಮಾರ್, ಮೋರ್ಗನ್‌ಗೇಟ್ ನಿವಾಸಿ ದಿಲ್ಲೇಶ್ ಬಂಗೇರ ಬಂಧಿತ ಆರೋಪಿಗಳು. ಬೋಳಾರದ ಶುಭಂ ಮತ್ತು ಎಮ್ಮೆಕೆರೆಯ ವಿಷ್ಣು ಎಂಬುವವರು ಕೊಲೆಗೆ ಸಹಕರಿಸಿದ್ದು, ಅವರನ್ನೂ ಬಂಧಿಸಲಾಗಿದೆ ಎಂದರು.

ಏ.28ರಂದು ಈ ಕೊಲೆ ನಡೆದಿದ್ದು, ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದರು. ಖಚಿತ ಮಾಹಿತಿ ಮೇರೆಗೆ ಆರು ಮಂದಿಯನ್ನು ಬಂಧಿಸಿದ್ದು, ಆರೋಪಿಗಳಿಂದ ಮೂರು ತಲವಾರು, ಮೂರು ಚೂರಿ, ನಾಲ್ಕು ಕತ್ತಿ, ಎರಡು ಸ್ಕೂಟರ್, ಒಂದು ಬುಲ್ಲೆಟ್, ಐದು ಮೊಬೈಲ್ ವಶಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ರೌಡಿಶೀಟರ್‌ ರಾಹುಲ್‌ ತಿಂಗಳಾಯನನ್ನು ನಾಲ್ವರ ತಂಡ ಕೊಲೆ ಮಾಡಿದ್ದು, ಈ ಕೊಲೆಗೆ ಸಂಚು ರೂಪಿಸಿದ ಆರೋಪದ ಮೇಲೆ ಇನ್ನೂ 8 ಜನರನ್ನು ಬಂಧಿಸುವ ಸಾಧ್ಯತೆ ಇದೆ ಎಂದ ಅವರು, ಆರೋಪಿಗಳಾದ ಮಹೇಂದ್ರ ಶೆಟ್ಟಿ, ಅಕ್ಷಯಕುಮಾರ್‌, ಸುಶಿತ್‌, ದಿಲ್ಲೇಶ್‌ನನ್ನು ಸುರತ್ಕಲ್‌ ರೈಲು ನಿಲ್ದಾಣದಲ್ಲಿ ಭಾನುವಾರ ರಾತ್ರಿ ಬಂಧಿಸಲಾಗಿದೆ. ಉಳಿದ ಇಬ್ಬರನ್ನು ಸುಲ್ತಾನ್‌ ಬತ್ತೇರಿ ಹಾಗೂ ಸೋಮೇಶ್ವರ ಬೀಚ್‌ನಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದರು.

ಈ ಪ್ರಕರಣದ ಪ್ರಮುಖ ಆರೋಪಿ ಮಹೇಂದ್ರ ಶೆಟ್ಟಿ ಹಾಗೂ ಕೊಲೆಯಾದ ರಾಹುಲ್‌ ಮಧ್ಯೆ ವೈಯಕ್ತಕ ದ್ವೇಷವಿತ್ತು. 2019 ರಲ್ಲಿ ರಾಹುಲ್‌ ತಿಂಗಳಾಯ ಗುಂಪು, ಮಹೇಂದ್ರ ಶೆಟ್ಟಿ ಮೇಲೆ ದಾಳಿ ನಡೆಸಿತ್ತು. 2020 ರಲ್ಲಿ ಕಾರ್ತಿಕ್‌ ಶೆಟ್ಟಿ ಹಾಗೂ ಸಹಚರರ ಮೇಲೂ ರಾಹುಲ್‌ ಗ್ಯಾಂಗ್‌ ದಾಳಿ ನಡೆಸಿತ್ತು ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.