ADVERTISEMENT

ಕರ್ಕಶ ಹಾರನ್‌ ತೆರವಿಗೆ ಕಾರ್ಯಾಚರಣೆ: ಶ್ರೀಧರ್ ಮಲ್ಲಾಡ

ಸಾರ್ವಜನಿಕರ ಅಹವಾಲು ಸಭೆಯಲ್ಲಿ ಹಿರಿಯ ಆರ್‌ಟಿಒ ಶ್ರೀಧರ್ ಮಲ್ಲಾಡ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 7:20 IST
Last Updated 12 ಆಗಸ್ಟ್ 2025, 7:20 IST
ಸಾರ್ವಜನಿಕ ಅಹವಾಲು ಸಭೆಯಲ್ಲಿ ಹಿರಿಯ ಆರ್‌ಟಿಒ ಶ್ರೀಧರ ಮಲ್ಲಾಡ ಮಾತನಾಡಿದರು
ಸಾರ್ವಜನಿಕ ಅಹವಾಲು ಸಭೆಯಲ್ಲಿ ಹಿರಿಯ ಆರ್‌ಟಿಒ ಶ್ರೀಧರ ಮಲ್ಲಾಡ ಮಾತನಾಡಿದರು   

ಮಂಗಳೂರು: ಖಾಸಗಿ ಬಸ್‌ಗಳ ಕರ್ಕಶ ಹಾರನ್ ಪತ್ತೆ ಹಚ್ಚಿ ತೆಗೆಸಲು ಕ್ರಮವಾಗಬೇಕು, ಪಡೀಲ್‌ನಲ್ಲಿರುವ ಪ್ರಜಾಸೌಧಕ್ಕೆ ತೆರಳಲು ಬಸ್ ವ್ಯವಸ್ಥೆಗೊಳಿಸಬೇಕು, ಬಸ್‌ನಲ್ಲಿ ಟಿಕೆಟ್ ನೀಡುವ ವ್ಯವಸ್ಥೆ ಆಗಬೇಕು, ಇ– ರಿಕ್ಷಾಗಳಿಗೆ ಮಿತಿ ಹೇರಬೇಕು, ರೈಲು ನಿಲ್ದಾಣದ ಪ್ರೀ ಪೇಯ್ಡ್ ರಿಕ್ಷಾ ಕೌಂಟರ್‌ಗಳ ಸೇವಾ ಶುಲ್ಕ ಕಡಿತಗೊಳಿಸಬೇಕು...

ಇಂತಹ ಹತ್ತಾರು ಬೇಡಿಕೆಗಳನ್ನು ಸಾರ್ವಜನಿಕರು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸೋಮವಾರ ನಡೆದ ಸಾರ್ವಜನಿಕರ ಅಹವಾಲು ಸಭೆಯಲ್ಲಿ ಹೇಳಿಕೊಂಡರು.

ಎಲೆಕ್ಟ್ರಿಕ್ ರಿಕ್ಷಾಗಳ ಸಂಖ್ಯೆ ನಗರದಲ್ಲಿ ಹೆಚ್ಚಾಗಿದ್ದು, ಇದಕ್ಕೆ ಮಿತಿ ಹಾಕಬೇಕು. ಖಾಸಗಿ ಬಸ್‌ಗಳು ಕರ್ಕಶ ಹಾರನ್‌ ಹಾಕುತ್ತ ಹೋಗುತ್ತವೆ. ಕೊನೆಪಕ್ಷ ಆಸ್ಪತ್ರೆ, ಶಾಲೆಗಳ ಸಮೀಪದಲ್ಲಿಯಾದರೂ ಇವನ್ನು ನಿಯಂತ್ರಿಸಬೇಕು ಎಂದು ಜೆರಾಲ್ಡ್ ಟವರ್ಸ್ ಹೇಳಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ಮಲ್ಲಾಡ, ‘ಕರ್ಕಶ ಹಾರನ್ ನಿಯಂತ್ರಣಕ್ಕೆ ಸಂಬಂಧಿಸಿ ಪೊಲೀಸ್ ಇಲಾಖೆ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಲಿದೆ. ಈ ಸಂಬಂಧ ಈಗಾಗಲೇ ಸಭೆ ನಡೆಸಲಾಗಿದೆ’ ಎಂದರು.

ವಾಹನ ದಟ್ಟಣೆ ಇರುವ ಬೆಳಗಿನ ಸಮಯದಲ್ಲಿ ಕುದ್ರೋಳಿಯಲ್ಲಿ ಟೆಂಪೊಗಳಲ್ಲಿ ಉದ್ದದ ಕಬ್ಬಿಣದ ರಾಡ್‌ಗಳನ್ನು ತುಂಬಿಸಿಕೊಂಡು ಹೋಗಲಾಗುತ್ತದೆ. ಅಪಘಾತ ಸಂಭವಿಸಿದರೆ ಯಾರು ಹೊಣೆ, ಈ ರೀತಿ ಸಾಗಣೆಗೆ ಕಡ್ಡಾಯವಾಗಿ ನಿಷೇಧ ಹೇರಬೇಕು ಎಂದು ಮೊಹಮ್ಮದ್ ಇಸ್ಮಾಯಿಲ್ ಹೇಳಿದರು. 

‘ಜಿಲ್ಲಾಧಿಕಾರಿ ಕಚೇರಿ ಪಡೀಲ್‌ಗೆ ಸ್ಥಳಾಂತರಗೊಂಡ ಮೇಲೆ ಅಲ್ಲಿಗೆ ಹೋಗುವವರಿಗೆ ಸಮಸ್ಯೆಯಾಗುತ್ತಿದೆ. ಆ ಮಾರ್ಗಕ್ಕೆ ಹೆಚ್ಚುವರಿ ಬಸ್ ವ್ಯವಸ್ಥೆಗೊಳಿಸಬೇಕು. ಸೆಂಟ್ರಲ್ ಮತ್ತು ಜಂಕ್ಷನ್ ರೈಲು ನಿಲ್ದಾಣಗಳಲ್ಲಿ ಪ್ರೀ ಪೇಯ್ಡ್ ಆಟೊ ಕೇಂದ್ರಗಳಲ್ಲಿ ಸೇವಾ ಶುಲ್ಕ ₹5  ಪಡೆಯಲಾಗುತ್ತಿದ್ದು, ಉಳಿದ ಕಡೆ ₹1 ಇದೆ’ ಎಂದು ಹನುಮಂತ ಕಾಮತ್ ಹೇಳಿದರು.

ರಿಕ್ಷಾದವರು ದೂರದ ಊರಿಗೂ ಪ್ರಯಾಣಿಕರನ್ನು ಕರೆದೊಯ್ಯುವುದರಿಂದ ಟ್ಯಾಕ್ಸಿಗಳಿಗೆ ಆದಾಯ ಕಡಿಮೆಯಾಗಿ ತೊಂದರೆಯಾಗುತ್ತಿದೆ ಎಂದು ಟ್ಯಾಕ್ಸಿ ಅಸೋಸಿಯೇಷನ್‌ನ ದಿನೇಶ್ ಕುಂಪಲ ಹೇಳಿದರು.

ನಾಮಫಲಕದಲ್ಲಿ ಶೇ 60ರಷ್ಟು ಕನ್ನಡ ಕಡ್ಡಾಯಗೊಳಿಸಿ ಆದೇಶವಾಗಿದ್ದರೂ, ಅದು ಪಾಲನೆ ಆಗುತ್ತಿಲ್ಲ. ಬಸ್‌ಗಳಿಗೆ ಬಾಗಿಲು ಅಳವಡಿಸುವಂತೆ 2018ರಲ್ಲೇ ಆದೇಶ ಆಗಿದ್ದರೂ, ಅದು ಪಾಲನೆ ಆಗುತ್ತಿಲ್ಲ ಎಂದು ಜಿ.ಕೆ. ಭಟ್ ಹೇಳಿದರು.

ಪಿಎಂಇ ಯೋಜನೆಯಡಿ ಜಿಲ್ಲೆಗೆ 100 ಹೊಸ ನರ್ಮ್ ಬಸ್‌ಗಳು ಬರಲಿದ್ದು, ಹೆಚ್ಚುವರಿ ಡಿಪೊಗಾಗಿ ಬಾಳೆಪುಣಿ ಸಮೀಪ ಜಾಗ ಗುರುತಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿ ತಿಳಿಸಿದರು.

ಚೂಡಾಮಣಿ, ಅನಂತರಾಂ, ಆಟೊರಿಕ್ಷಾ ಚಾಲಕರ ಸಂಘದ ಸಂಚಾಲಕ ಗಣೇಶ್, ಬಸ್‌ ಸಂಘಟನೆಗಳ ಪ್ರಮುಖರು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.