ADVERTISEMENT

67ನೇ ವಯಸ್ಸಿನಲ್ಲಿ ಶಬರಿಮಲೆಗೆ ಪಾದಯಾತ್ರೆ ಹೊರಟ ಮೋಹನ ಕಲ್ಲೂರಾಯ

ಶಬರಿಮಲೆ ಅಯ್ಯಪ್ಪ ಕ್ಷೇತ್ರಕ್ಕೆ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2019, 10:19 IST
Last Updated 7 ಡಿಸೆಂಬರ್ 2019, 10:19 IST
ಕಾಲ್ನಡಿಗೆಯಲ್ಲಿ ಕಾಸರಗೋಡಿಗೆ ತಲಪಿದ ಅಯ್ಯಪ ಭಕ್ತ ಬಿಡದಿಯ ಮೋಹನ ಕಲ್ಲೂರಾಯ
ಕಾಲ್ನಡಿಗೆಯಲ್ಲಿ ಕಾಸರಗೋಡಿಗೆ ತಲಪಿದ ಅಯ್ಯಪ ಭಕ್ತ ಬಿಡದಿಯ ಮೋಹನ ಕಲ್ಲೂರಾಯ   

ಕಾಸರಗೋಡು: ಶಬರಿಮಲೆ ಅಯ್ಯಪ್ಪ ಕ್ಷೇತ್ರದ 18ನೇ ಮೆಟ್ಟಿಲೇರಲು ಮೋಹನ ಕಲ್ಲೂರಾಯ ಸ್ವಾಮಿ ಒಂಟಿಯಾಗಿ, ಮತ್ತೊಮ್ಮೆ ಬರಿಗಾಲಲ್ಲಿ ಬೆಂಗಳೂರು ಬಿಡದಿಯಿಂದ ಶಬರಿಮಲೆಗೆ ಕಾಲ್ನಡಿಗೆ ಯಾತ್ರೆ ಮುಂದುವರಿಸಿದ್ದಾರೆ.

67 ವರ್ಷ ವಯಸ್ಸಿನ ಮೋಹನ ಕಲ್ಲೂರಾಯರು 18ನೇ ಬಾರಿ ಶಬರಿಮಲೆಗೆ ಏಕಾಂಗಿಯಾಗಿ, ಪಾದಚಾರಿಯಾಗಿ ಹೋಗುತ್ತಿದ್ದಾರೆ. ಕಪ್ಪು ಬಟ್ಟೆ, ಕಪ್ಪು ಅಂಗಿ ತೊಟ್ಟು, ತಲೆಯಲ್ಲಿ ಇರುಮುಡಿ ಕಟ್ಟು ಹೊತ್ತು, ಮನಸ್ಸಿನಲ್ಲಿ ಅಯ್ಯಪ್ಪನಾಮ ಮಂತ್ರ ಪಠಿಸುತ್ತಾ, ರಾತ್ರಿ ಹಗಲೆನ್ನದೆ ಅವರು ಸ್ವಾಮಿಯ ದರ್ಶನಕ್ಕಾಗಿ ತವಕದಿಂದ ಸಾಗುತ್ತಿದ್ದಾರೆ.

ಬೆಂಗಳೂರು ಬಿಡದಿಯಿಂದ ಮೈಸೂರು, ಕಾಸರಗೋಡು ದಾರಿಯಾಗಿ ಶಬರಿಮಲೆಗೆ ಕಾಲ್ನಡಿಗೆಯಲ್ಲಿ ಸುಮಾರು 900 ಕಿ.ಮೀ. ಸಂಚರಿಸಿ ಸ್ವಾಮಿ ಅಯ್ಯಪ್ಪನ ದರ್ಶನ ಪಡೆಯುವ ಬಯಕೆ ಅವರದ್ದು. ಒಂದು ತಿಂಗಳ ಅವಧಿಯಲ್ಲಿ ಬಿಡದಿಯಿಂದ ಶಬರಿಮಲೆಗೆ ತಲಪುವ ಗುರಿ ಅವರದ್ದು.

ADVERTISEMENT

‘ಪ್ರತಿದಿನ ನಸುಕಿಗೆ ಎದ್ದು ಸ್ನಾನ, ಧ್ಯಾನ ಪೂರ್ತಿಗೊಳಿಸಿ 3 ಗಂಟೆಗೆ ಕಾಲ್ನಡಿಗೆ. 9 ಗಂಟೆಯವರೆಗೆ ನಡೆದು ಬಳಿಕ ವಿಶ್ರಾಂತಿ. ಸಂಜೆ 3ಗಂಟೆಯಿಂದ 7ಗಂಟೆಯವರೆಗೆ ಪುನಃ ನಡಿಗೆ. ಪ್ರತಿದಿನ 40 ಕಿ.ಮೀ. ನಡೆಯುತ್ತೇನೆ ಎನ್ನುತ್ತಾರೆ’ ಕಲ್ಲೂರಾಯ ಸ್ವಾಮಿ.

ಕಾಸರಗೋಡಿಗೆ ಬುಧವಾರ ತಲುಪಿದ್ದ ಕಲ್ಲೂರಾಯರು ಮಧೂರು ಕ್ಷೇತ್ರ ದರ್ಶನ ಮಾಡಿ ಅಲ್ಲಿನ ಅರ್ಚಕರಾದ ಕೃಷ್ಣ ಉಪಾಧ್ಯಾಯರ ಮನೆಯಲ್ಲಿ ತಂಗಿದ ಬಳಿಕ ಗುರುವಾರ ಬೆಳಿಗ್ಗೆ ಮೂರು ಗಂಟೆಗೆ ಪಾದಯಾತ್ರೆ ಮುಂದುವರಿಸಿದರು.

18ನೇ ವರ್ಷದ ಅಯ್ಯಪ್ಪ ದರ್ಶನದ ಸಂಕೇತವಾಗಿ ಶಬರಿಮಲೆಯಲ್ಲಿ ನೆಡಲು ತೆಂಗಿನ ಗಿಡವನ್ನೂ ಜತೆಯಲ್ಲಿ ಒಯ್ಯುತ್ತಿದ್ದಾರೆ ಅವರು. ಕಾಲ್ನಡಿಗೆಯಲ್ಲಿ ಅಯ್ಯಪ್ಪ ದರ್ಶನ ಇದೇ ಕೊನೆಯ ಬಾರಿ ಎಂದು ತಿಳಿಸಿದ ಅವರು, ಮುಂದಿನ ವರ್ಷದಿಂದ ವಾಹನದಲ್ಲಿ ಶಬರಿಮಲೆಗೆ ತೆರಳುವುದಾಗಿ ಹೇಳಿದರು. ಈ ತಿಂಗಳ 22 ರಂದು ಶಬರಿಮಲೆಗೆ ತಲಪುವ ನಿರೀಕ್ಷೆ ಇರಿಸಿದ್ದಾರೆ.

40 ವರ್ಷಗಳ ಹಿಂದೆ ಪುತ್ತೂರಿನಿಂದ ಬಿಡದಿಗೆ ತೆರಳಿ ಅಲ್ಲೇ ಕಾಯಂ ವಾಸ ಆಗಿರುವ ಕಲ್ಲೂರಾಯರು ಸಹಕಾರಿ ಬ್ಯಾಂಕಿನ ನಿವೃತ್ತ ಅಧಿಕಾರಿ. ಪತ್ನಿ ಶಿಕ್ಷಕಿ. ಇಬ್ಬರು ಮಕ್ಕಳಲ್ಲಿ ಒಬ್ಬರು ಲಂಡನ್ ನಲ್ಲಿ ವೈದ್ಯರಾದರೆ, ಇನ್ನೊಬ್ಬರು ಕಂಪನಿಯೊಂದರ ಉದ್ಯೋಗಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.