ADVERTISEMENT

ದೈವಜ್ಞ ಸಂಪ್ರದಾಯದಲ್ಲಿ ನಿಷ್ಠೆ ಇರಲಿ: ಸಚ್ಚಿದಾನಂದ ಜ್ಞಾನೇಶ್ವರ ಶ್ರೀ ಆಶೀರ್ವಚನ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 3:07 IST
Last Updated 9 ಜನವರಿ 2026, 3:07 IST
ದೈವಜ್ಞ ದರ್ಶನ ಕಾರ್ಯಕ್ರಮದಲ್ಲಿ ಉಭಯ ಶ್ರೀಗಳು ದೀಪ ಬೆಳಗಿದರು
ದೈವಜ್ಞ ದರ್ಶನ ಕಾರ್ಯಕ್ರಮದಲ್ಲಿ ಉಭಯ ಶ್ರೀಗಳು ದೀಪ ಬೆಳಗಿದರು   

ಮಂಗಳೂರು: ವೈದಿಕ ಕಾಲದ ಅದ್ವೈತ ಪರಂಪರೆಯ ದೈವಜ್ಞ ಬ್ರಾಹ್ಮಣರು ತಮ್ಮ ಆಚಾರ– ವಿಚಾರ, ಸಂಪ್ರದಾಯಗಳಲ್ಲಿ ಇನ್ನಷ್ಟು ನಿಷ್ಠೆ ಹೊಂದಿ ಐತಿಹಾಸಿಕ ಪರಂಪರೆಯನ್ನು ಪುನರುಜ್ಜೀವನಗೊಳಿಸಬೇಕಾಗಿದೆ ಎಂದು ಶಂಕರಾಚಾರ್ಯ ಸಂಸ್ಥಾನ ದೈವಜ್ಞ ಬ್ರಾಹ್ಮಣ ಮಠಾಧೀಶ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ ಹೇಳಿದರು.

ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ನಡೆದ ದೈವಜ್ಞ ದರ್ಶನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ನಾಲ್ಕು ದಶಕಗಳ ಹಿಂದೆ ಸಮಾಜಕ್ಕೊಂದು ಕುಲಗುರು, ಮಠ ಹೊಂದಿದ ಬಳಿಕ ದೈವಜ್ಞ ಸಮಾಜವು ಸರ್ವಾಂಗೀಣ ಅಭಿವೃದ್ಧಿ ಹೊಂದಿದೆ. ಮಕ್ಕಳಿಗೆ ಶಿಕ್ಷಣ ನೀಡಿ, ಜೊತೆಗೆ ಸಂಸ್ಕಾರ ಸಂಪ್ರದಾಯ ತಿಳಿಸಿ ಸಮಾಜ ಸೇವೆಯಲ್ಲಿ ತೊಡಗಿಸಬೇಕು ಎಂದರು. 

ADVERTISEMENT

ಕಿರಿಯ ಶ್ರೀ ಸುಜ್ಞಾನೇಶ್ವರ ಭಾರತಿ ಸ್ವಾಮೀಜಿ ಮಾತನಾಡಿ, ಪಾಲಕರಿಗೆ ಗೌರವ ಸಲ್ಲಿಸುವ ಪರಂಪರೆಯನ್ನು ಮತ್ತಷ್ಟು ಬಲಪಡಿಸಬೇಕು, ಸಮಾಜದ ದೀನ, ಅಶಕ್ತರ ಸ್ವಾವಲಂಬನೆಗೆ ಶ್ರಮಿಸಬೇಕು ಎಂದರು.

ಉಭಯ ಶ್ರೀಗಳನ್ನು ಮಣ್ಣಗುಡ್ಡೆಯಿಂದ ಅಶೋಕನಗರದ ದೈವಜ್ಞ ಕಲ್ಯಾಣ ಮಂಟಪದವರೆಗೆ ಮಂಗಳವಾದ್ಯ, ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.

ದೈವಜ್ಞ ಬ್ರಾಹ್ಮಣ ಮಠದ ಟ್ರಸ್ಟಿಗಳಾದ ಕೆ. ಸುಧಾಕರ್ ಶೇಟ್, ಗಣಪತಿ ಶೇಟ್, ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಸಂಘದ ರಾಜ್ಯಾಧ್ಯಕ್ಷ ರವಿ ಗಾವ್ಕರ್ ಹುಬ್ಬಳ್ಳಿ, ಪ್ರಮುಖರಾದ ಸುರೇಶ್ ಶೇಟ್, ಅನಿಲ್ ಡಿ. ರಾವ್, ಗಜೇಂದ್ರ ಶೇಟ್, ಬಿ.ಎನ್. ರವೀಂದ್ರ ಶೇಟ್, ಕೆ.ಎನ್. ಮಂಜುನಾಥ ಶೇಟ್, ಸಂಧ್ಯಾ ರಾಯ್ಕರ್,  ರವಿ ಗೋಕರ್ಣಕರ್, ರಮಾನಂದ ಶೇಟ್,ಎಸ್. ಪ್ರಶಾಂತ ಶೇಟ್ ಉಪಸ್ಥಿತರಿದ್ದರು. ಎಸ್. ರಾಜೇಂದ್ರಕಾಂತ ಶೇಟ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.