ADVERTISEMENT

‘ಸಹಕಾರಿ ಮಾರಾಟ, ಮೌಲ್ಯವರ್ಧನೆ’ 15 ರಂದು

14ರಿಂದ 20 ರವರೆಗೆ ಸಹಕಾರ ಸಪ್ತಾಹ: ರಾಜೇಂದ್ರಕುಮಾರ್‌

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 3:44 IST
Last Updated 14 ನವೆಂಬರ್ 2020, 3:44 IST
ಮಂಗಳೂರಿನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಎನ್‌.ರಾಜೇಂದ್ರ ಕುಮಾರ್‌ ಮಾತನಾಡಿದರು.
ಮಂಗಳೂರಿನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಎನ್‌.ರಾಜೇಂದ್ರ ಕುಮಾರ್‌ ಮಾತನಾಡಿದರು.   

ಮಂಗಳೂರು: ಈ ಬಾರಿಯ 67 ನೇ ಸಹಕಾರ ಸಪ್ತಾಹವನ್ನು ‘ಕೊರೊನೋತ್ತರ ಸಹಕಾರ ಸಂಘಗಳ ಜವಾಬ್ದಾರಿ ಮತ್ತು ಪಾತ್ರ’ ಧ್ಯೇಯ ವಾಕ್ಯದೊಂದಿಗೆ ಇದೇ 14 ರಿಂದ 20 ರವರೆಗೆ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಇದೇ 15 ರಂದು ರಾಜ್ಯ ಮಟ್ಟದ ಕಾರ್ಯಕ್ರಮ ನಗರದಲ್ಲಿ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ (ಎಸ್‌ಸಿಡಿಸಿಸಿ) ಅಧ್ಯಕ್ಷ ಎಂ.ಎನ್‌. ರಾಜೇಂದ್ರಕುಮಾರ್‌ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಮಟ್ಟದ ಏಳು ದಿನದ ಕಾರ್ಯಕ್ರಮಗಳನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆಸಲಾಗುತ್ತಿದ್ದು, ಉದ್ಘಾಟನಾ ಕಾರ್ಯಕ್ರಮವು ಬೆಂಗಳೂರಿನಲ್ಲಿ ಹಾಗೂ ಸಮಾರೋಪ ಸಮಾರಂಭ ವಿಜಯಪುರದಲ್ಲಿ ನಡೆಯಲಿದೆ ಎಂದರು.

ಇದೇ 15ರಂದು 10 ಗಂಟೆಗೆ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ‘ಸಹಕಾರಿ ಮಾರಾಟ, ಗ್ರಾಹಕ, ರೂಪಾಂತರ ಮತ್ತು ಮೌಲ್ಯವರ್ಧನೆ’ ಎಂಬ ಧ್ಯೇಯದೊಂದಿಗೆ ನಗರದ ಕೋಡಿಯಾಲ್‌ಬೈಲ್‌ನ ಟಿ.ವಿ.ರಮಣ ಪೈ ಕನ್ವೆನ್ಷನ್ ಹಾಲ್‌ನಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ಸಹಕಾರ ಸಚಿವ ಎಸ್.ಟಿ. ಸೋಮಶೇಖರ್‌ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಉತ್ತಮ ಸಹಕಾರ ಸಂಘಗಳಿಗೆ ಸಂಸದ ನಳಿನ್‌ಕುಮಾರ್ ಕಟೀಲ್‌ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಹಕಾರ ಜಾಥಾಕ್ಕೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಎನ್. ರಾಜೇಂದ್ರಕುಮಾರ್ ಚಾಲನೆ ನೀಡುವರು. ಧ್ವಜಾರೋಹಣವನ್ನು ಶಾಸಕ ವೇದವ್ಯಾಸ ಡಿ. ಕಾಮತ್ ನೆರವೇರಿಸಲಿದ್ದು, ಸಹಕಾರ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಶಾಸಕ ಯು.ಟಿ. ಖಾದರ್ ಬಿಡುಗಡೆ ಮಾಡುವರು. ಉತ್ತಮ ನವೋದಯ ಸ್ವ-ಸಹಾಯ ಸಂಘಗಳಿಗೆ ಶಾಸಕ ಡಾ.ವೈ.ಭರತ್ ಶೆಟ್ಟಿ ಪುರಸ್ಕಾರ ಪ್ರದಾನ ಮಾಡುವರು. ಸಹಕಾರ ಮಳಿಗೆಯನ್ನು ಮೇಯರ್ ದಿವಾಕರ್ ಪಾಂಡೇಶ್ವರ ಉದ್ಘಾಟಿಸುವರು.

ಅತಿಥಿಗಳಾಗಿ ಕರ್ನಾಟಕ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಷಡಕ್ಷರಿ, ಕ್ಯಾಂಪ್ಕೊ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ, ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಕೊಡವೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನುಗಾರರ ಮಹಾಮಂಡಳದ ಅಧ್ಯಕ್ಷ ಯಶಪಾಲ್ ಎ. ಸುವರ್ಣ, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್, ಸಹಕಾರ ಸಂಘಗಳ ನಿಬಂಧಕ ಎಸ್. ಜಿಯಾವುಲ್ಲಾ, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಶ್, ಭಾಗವಹಿಸಲಿದ್ದಾರೆ. ಸಹಕಾರ ಸಂಘಗಳ ನಿವೃತ್ತ ಹೆಚ್ಚುವರಿ ನಿಬಂಧಕ ಶಶಿಧರ್ ಎಲೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.