ADVERTISEMENT

ಅನಾವರಣಗೊಂಡ ವಿದ್ಯಾರ್ಥಿ ಆವಿಷ್ಕಾರಗಳು

ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್‌ ಕಾಲೇಜು: ಸಹ್ಯಾದ್ರಿ ಸೈನ್ಸ್‌ ಟ್ಯಾಲೆಂಟ್‌ ಹಂಟ್‌

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2019, 13:52 IST
Last Updated 16 ನವೆಂಬರ್ 2019, 13:52 IST
ಅತ್ತಾವರದ ಮಣಿಪಾಲ ಸ್ಕೂಲ್‌ನ ವಿದ್ಯಾರ್ಥಿ ತರಂಗ ರೂಪಿಸಿದ ‘ಇ ಫಾರ್ಮಿಂಗ್’
ಅತ್ತಾವರದ ಮಣಿಪಾಲ ಸ್ಕೂಲ್‌ನ ವಿದ್ಯಾರ್ಥಿ ತರಂಗ ರೂಪಿಸಿದ ‘ಇ ಫಾರ್ಮಿಂಗ್’   

ಮಂಗಳೂರು: ಅಪಘಾತದ ಸಂದರ್ಭದಲ್ಲಿ ಸಂದೇಶ ಕಳುಹಿಸುವ ಹೆಲ್ಮೆಟ್‌, ಇ–ಕೃಷಿ, ಸ್ವಯಂಚಾಲಿತ ಕೃಷಿ ರೋಬೋಟ್, ತೇವಾಂಶ ಆಧರಿತ ನೀರು ಹಾಯಿಸುವ ವ್ಯವಸ್ಥೆ, ವೆನಿಲ್ಲಾ ಎಲೆಯ ಕೀಟನಾಶಕ, ವಿಮಾನ ಮಾದರಿ, ಡ್ರೋನ್ ಮಾದರಿ, ರೇಸಿಂಗ್ ಕಾರುಗಳು, ಸೌರಚಾಲಿತ ಯಂತ್ರಗಳು...

ಹೀಗೆ ಒಂದಕ್ಕಿಂತ ಒಂದು ಭಿನ್ನ ಆವಿಷ್ಕಾರಗಳ ತಂತ್ರಜ್ಞಾನಗಳು ನಗರದ ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್‌ ಕಾಲೇಜು ಆವರಣದಲ್ಲಿ ಅನಾವರಣಗೊಂಡಿದ್ದವು. ಅದು, ಕಾಲೇಜು ಆಯೋಜಿಸಿದ್ದ ವಿದ್ಯಾರ್ಥಿಗಳ ಪ್ರತಿಭಾನ್ವೇಷಣಾ ಸ್ಪರ್ಧೆ ಹಾಗೂ ವಿಜ್ಞಾನ ಮಾದರಿಗಳ ಪ್ರದರ್ಶನ ‘ಸಹ್ಯಾದ್ರಿ ಸೈನ್ಸ್‌ ಟ್ಯಾಲೆಂಟ್‌ ಹಂಟ್’.

ಕುಂದಾಪುರದ ಆರ್‌.ಎನ್.ಶೆಟ್ಟಿ ಕಾಲೇಜಿನ ಪದವಿಪೂರ್ವ ವಿದ್ಯಾರ್ಥಿಗಳಾದ ಶ್ರೇಯಸ್, ಅಭಿಲಾಷ್‌ ಮತ್ತು ಪ್ರಸನ್ನ ‘ಕೃಷಿ ರೋಬೋಟ್‌’ ಅನ್ನು ರೂಪಿಸಿದ್ದರು. ಸೌರಶಕ್ತಿ ಹಾಗೂ ಹರಿಯುವ ನೀರಿಗೆ ಟರ್ಬೈನರ್ ಅಳವಡಿಸುವ ಮೂಲಕ ವಿದ್ಯುತ್ ಶಕ್ತಿಯನ್ನೂ ಹೊಲದಲ್ಲೇ ಉತ್ಪಾದಿಸಿಕೊಂಡು, ಉಳುಮೆ, ಬಿತ್ತನೆ, ಕಳೆ ನಿವಾರಣೆ, ಕಟಾವು, ಧಾನ್ಯ ಒಟ್ಟು ಮಾಡುವುದು ಸೇರಿದಂತೆ ಎಲ್ಲ ಕೆಲಸಗಳನ್ನು ಮಾಡಬಹುದಾದ ಟ್ರ್ಯಾಕ್ಟರ್‌ ಮಾದರಿಯ ಯಂತ್ರವನ್ನು ಅವರು ಸಿದ್ಧಪಡಿಸಿದ್ದಾರೆ.

ADVERTISEMENT

‘ಈ ಯಂತ್ರವನ್ನು ₹2 ಲಕ್ಷದಲ್ಲಿ ನಿರ್ಮಿಸಬಹುದು. ಜಾಯ್‌ ಸ್ಟಿಕ್ ಮೂಲಕ ರೈತರು ಸಂಪೂರ್ಣ ನಿಯಂತ್ರಣ ಮಾಡಬಹುದು. ಸೆನ್ಸಾರ್‌ಗಳ ಮೂಲಕ ಮಣ್ಣಿನ ಗುಣಲಕ್ಷಣ –ತೇವಾಂಶಗಳನ್ನು ಆಧರಿಸಿಕೊಂಡು ರೋಬೋಟ್‌ ಚಕ್ರ, ಚೈನ್, ಕಾಲುಗಳ ಮೂಲಕ ಚಲಿಸುವಂತೆ ರೂಪಿಸಲೂ ಸಾಧ್ಯ. ರೈತರ ಅಗತ್ಯಕ್ಕೆ ತಕ್ಕಂತೆ ಇನ್ನಷ್ಟು ಅಭಿವೃದ್ಧಿಪಡಿಸಲು ಅವಕಾಶಗಳನ್ನೂ ಕಲ್ಪಿಸಲಾಗಿದೆ’ ಎಂದು ಈ ಆವಿಷ್ಕಾರ ತಂಡದಲ್ಲಿದ್ದ ವಿದ್ಯಾರ್ಥಿಗಳು ವಿವರಿಸಿದರು.

ಅತ್ತಾವರದ ಮಣಿಪಾಲ ಸ್ಕೂಲ್‌ನ ವಿದ್ಯಾರ್ಥಿ ತರಂಗ ಹಾಗೂ ತಂಡವು ಲೇಸರ್, ಸೆನ್ಸಾರ್‌ ಮತ್ತಿತರ ತಂತ್ರಜ್ಞಾನಗಳನ್ನು ಬಳಸಿ ಸ್ವಯಂಚಾಲಿತ ಕೃಷಿ–ತೋಟವನ್ನು ರೂಪಿಸಿದ್ದರು. ತೇವಾಂಶ ಆಧರಿಸಿ ನೀರಾವರಿ ವ್ಯವಸ್ಥೆ, ಹಕ್ಕಿ–ಕಾಡುಪ್ರಾಣಿಗಳ ಕಾಟ ತಪ್ಪಿಸಲು ಸ್ವಯಂಚಾಲಿತ ಬೆದರುಬೊಂಬೆ, ಮಳೆನೀರಿನ ಸಂಗ್ರಹ ಸೇರಿದಂತೆ ಹಲವು ತಂತ್ರಜ್ಞಾನಗಳ ಮೂಲಕ ರೈತರ ಕಾರ್ಯವನ್ನು ಸುಲಭಗೊಳಿಸುವ ಮಾದರಿ ಅವರದ್ದು.

ತ್ಯಾಜ್ಯ ವಿಲೇವಾರಿಯ ಸವಾಲನ್ನು ನಿರ್ವಹಿಸುವ ಮಾದರಿಯನ್ನೂ ‘ಡ್ರೀಮ್‌ ಕಿಟ್‌’ ಮೂಲಕ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು. ಪುತ್ತೂರು ಶಾಂತಿನಗರದ ಸರ್ಕಾರಿ ಪ್ರೌಢಶಾಲೆಯ ಅಕ್ಷತಾ ಮತ್ತು ಪ್ರತೀಕ್ಷಾ, ‘ವೆನಿಲಾ ವಿನ’ ಎಂಬ ವೆನಿಲ್ಲಾ ಎಲೆಯ ಮೂಲಕ ಸಿದ್ಧಪಡಿಸಬಹುದಾದ ಕೃಷಿ ಸಿಂಪಡಣೆ ಔಷಧಿ ಅಭಿವೃದ್ಧಿಪಡಿಸಿದ್ದರು.

ಸೆನ್ಸಾರ್ ಹಾಗೂ ಸ್ವಯಂಚಾಲಿತ ಯಂತ್ರೋಪಕರಣಗಳನ್ನು ಬಳಸಿಕೊಂಡು ಕೃಷಿ ಮಾಡುವ ‘ಸ್ಮಾರ್ಟ್‌ ಅಗ್ರಿ’ ಮಾದರಿಯನ್ನು ನಿಟ್ಟೆ ಪದವಿಪೂರ್ವ ಕಾಲೇಜಿನ ಕೀರ್ತನ್‌ ಕುಮಾರ್, ಸಲ್ವಾನ್ಸ್‌, ಮುನ್ನಾ ಹಾಗೂ ವಿಘ್ನೇಶ್ವರ ಪ್ರದರ್ಶಿಸಿದ್ದರು.

ಪುತ್ತೂರು ರಾಮಕೃಷ್ಣ ಪ್ರೌಢಶಾಲೆಯ ಸೌಹಾನ್ ಹಾಗೂ ಧನುಶ್ ರೂಪಿಸಿದ, ‘ಕೈಗಾರಿಕೆಯಿಂದ ಉಂಟಾಗುವ ಪರಿಸರ ಮಾಲಿನ್ಯವನ್ನು ತಡೆಯುವ ಮಾದರಿ’ ಗಮನ ಸೆಳೆಯಿತು. ಕೈಗಾರಿಕೆಯು ಹೊರಸೂಸುವ ನೀರು, ವಾಯು ಹಾಗೂ ತ್ಯಾಜ್ಯದಲ್ಲಿನ ಮಾಲಿನ್ಯ ಪ್ರಮಾಣವನ್ನು ಪತ್ತೆ ಹಚ್ಚಿ, ಸಂಸ್ಕರಣೆಗೊಳಿಸುವ ಮಾದರಿ ಇದಾಗಿದೆ. ಅಪಘಾತ ಸಂಭವಿಸಿದ ತಕ್ಷಣವೇ ಮಾಹಿತಿ ನೀಡುವ ಹೆಲ್ಮೆಟ್ ಅನ್ನು ಆಳ್ವಾಸ್‌ ಕಾಲೇಜಿನ ಪೃಥ್ವಿಕುಮಾರ್‌ ತಯಾರಿಸಿದ್ದಾರೆ.

ಇಲ್ಲಿ ಪ್ರದರ್ಶನಗೊಂಡಿರುವ 400ಕ್ಕೂ ಹೆಚ್ಚು ಮಾದರಿಗಳಲ್ಲಿ ಅತ್ಯುತ್ತಮ 40 ಮಾದರಿಗಳನ್ನು ತಜ್ಞರು ಅಂತಿಮಗೊಳಿಸಿದ್ದಾರೆ. ಈ ಪೈಕಿ ಆಯ್ದ ಮಾದರಿಗಳನ್ನು ಸ್ಟಾರ್ಟ್‌ ಅಪ್‍ಗಳಾಗಿ ಪರಿವರ್ತಿಸುವ ಕೆಲಸ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಮೂಲಕ ನಡೆಯಲಿದೆ ಎಂದು ಸಂಘಟಕರು ತಿಳಿಸಿದರು.

ಸಹ್ಯಾದ್ರಿ ಶಿಕ್ಷಣ ಸಮೂಹ ಸಂಸ್ಥೆಯ ಮುಖ್ಯಸ್ಥ ಮಂಜುನಾಥ ಭಂಡಾರಿ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮ ಸಂಯೋಜಕ ಜಾನ್ಸನ್ ಟೆಲ್ಲಿಸ್, ಎಸಿಸಿಇಎಲ್ ಪಾಲುದಾರ ಪ್ರಶಾಂತ್ ಪ್ರಕಾಶ್, ಪ್ರಾಂಶುಪಾಲ ಡಾ.ಆರ್.ಶ್ರೀನಿವಾಸ ರಾವ್ ಕುಂಟೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.