ಕೊಯಿಲ (ಉಪ್ಪಿನಂಗಡಿ): ಔಷಧೀಯ ಗುಣವುಳ್ಳ ಮಲೆನಾಡು ಗಿಡ್ಡ ದೇಸಿ ತಳಿಯನ್ನು ಉಳಿಸಿ ಬೆಳೆಸಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಮಂಗಳವಾರ ಕೊಯಿಲ ಪಶು ಸಂಗೋಪನಾ ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ, ಕೊಯಿಲ ಜಾನುವಾರು ಸಂವರ್ಧನಾ ಕೇಂದ್ರದ ಸಹಯೋಗದಲ್ಲಿ ಅಮೃತಸಿರಿ ಯೋಜನೆಯಡಿ ರೈತರಿಗೆ ಮಲೆನಾಡು ಗಿಡ್ಡ ತಳಿಯ ಹೆಣ್ಣು ಕರುಗಳ ವಿತರಿಸಿ ಮಾತನಾಡಿದರು.
ಹಿಂದೆ ನಮ್ಮಲ್ಲಿ ಕೂಡು ಕುಟುಂಬದೊಂದಿಗೆ ಗದ್ದೆ ಬೇಸಾಯಕ್ಕೆ ದನದ ಅವಶ್ಯಕತೆಯಿತ್ತು. ಈಗ ಕೂಡು ಕುಟುಂಬವೂ ಇಲ್ಲ, ಗದ್ದೆ ಬೇಸಾಯವೂ ಇಲ್ಲ. ವಾಣಿಜ್ಯ ಬೆಳೆ ಅಡಕೆ ಬೆಳೆಯುವುದರಿಂದ ಸ್ವದೇಸಿ ದನ ಸಾಕಾಣೆಯನ್ನು ಉಪೇಕ್ಷೆ ಮಾಡುತ್ತಿದ್ದೇವೆ. ಕೃಷಿ ಕಾರ್ಯಗಳಿಗೆ ಸುಲಭದಲ್ಲಿ ಸಿಗುವ ರಾಸಾಯಣಿಕ ಗೊಬ್ಬರ ತಂದು ಹಾಕುತ್ತಾ ಸುಲಭದಲ್ಲಿ ದುಡ್ಡು ಬರುವ ಹಾಗೆ ಯೋಜನೆ ಹಾಕಿಕೊಂಡಿದ್ದೇವೆ. ಪಾರಂಪರಿಕ ಕೃಷಿಯನ್ನು ಮರೆತು ಸುಲಭದಲ್ಲಿ ರೋಗಗಳನ್ನು ಆಹ್ವಾನಿಸಿಕೊಳ್ಳುತ್ತಿದ್ದೇವೆ. ಇಂತಹ ಕಾಲಘಟ್ಟದಲ್ಲಿ ನಾವು ಮಲೆನಾಡು ಗಿಡ್ಡ ತಳಿಗಳನ್ನು ರಕ್ಷಣೆ ಮಾಡುವ ಅವಶ್ಯಕತೆಯಿದೆ ಎಂದರು.
ಗೋ ಅರ್ಕ ಲಭ್ಯ:
ಕೊಯಿಲ ಜಾನುವಾರು ಸಂವರ್ಧನಾ ಕೇಂದ್ರದ ಉಪನಿರ್ದೇಶಕ ಡಾ.ಪ್ರಸನ್ನಕುಮಾರ್ ಹೆಬ್ಬಾರ್ ಮಾತನಾಡಿ, ಕೇಂದ್ರದಲ್ಲಿ ಗೋ ಅರ್ಕ ತಯಾರಿಸುತ್ತಿದ್ದು, ಗೊಬ್ಬರ ತಯಾರಿಕೆಗೆ ಉಪಯುಕ್ತವಾಗಿದೆ. ರೈತರಿಗೆ ಅತೀ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದೇವೆ ಎಂದರು.
11 ಜನ ಫಲಾನುಭವಿಗಳಿಗೆ ವಿತರಣೆ:
ಫಲಾನುಭವಿಗಳಿಗೆ ಹೆಣ್ಣು ಕರುಗಳನ್ನು ವಿತರಣೆಗೂ ಮುನ್ನ ಶಾಸಕರು ಗೋಪೂಜೆ ನೆರವೇರಿಸಿದರು. 11 ಜನ ಫಲಾನುಭವಿಗಳಿಗೆ ವಿತರಣೆ ಮಾಡಲಾಯಿತು. ಕಡಬ ತಾಲ್ಲೂಕು ಮುಖ್ಯ ಪಶುವೈದ್ಯಾಧಿಕಾರಿ ಡಾ. ಅಜಿತ್ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಧರ್ಮಪಾಲ ರಾವ್, ಕೊಯಿಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹರ್ಷಿತ್, ಮಾಜಿ ಉಪಾಧ್ಯಕ್ಷ ಲಕ್ಷ್ಮೀನಾರಾಯಣ ರಾವ್ ಹಾಜರಿದ್ದರು. ಸುಬ್ರಹ್ಮಣ್ಯ ಪಶು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಮಲ್ಲಿಕಾ ಎನ್. ವಂದಿಸಿದರು. ಸುನೀತ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.