ADVERTISEMENT

ಎಸ್‌ಸಿ, ಎಸ್‌ಟಿ ಅನುದಾನ 'ಗ್ಯಾರಂಟಿ'ಗೆ: ಮಂಗಳೂರಿನಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2024, 6:56 IST
Last Updated 29 ಜುಲೈ 2024, 6:56 IST
<div class="paragraphs"><p>ಮಂಗಳೂರಿನಲ್ಲಿ ದಸಂಸ ಪ್ರತಿಭಟನೆ</p></div>

ಮಂಗಳೂರಿನಲ್ಲಿ ದಸಂಸ ಪ್ರತಿಭಟನೆ

   

ಮಂಗಳೂರು: ಎಸ್‌ಸಿ, ಎಸ್‌ಪಿ ಮತ್ತು ಟಿಎಸ್ ಪಿ ಕಾಯ್ದೆಯಲ್ಲಿ ಎಸ್ ಸಿ ಎಸ್ ಟಿ ಜನರ ಅಭಿವೃದ್ಧಿ ಗೆ ಮೀಸಲಿಟ್ಟಿರುವ ಅನುದಾನದ ಮೊತ್ತವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ವಾಭಿಮಾನಿ ಪ್ರೊ.ಬಿ.ಕೃಷ್ಣಪ್ಪ ಬಣದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ನಗರ ಮಧ್ಯದ ಕ್ಲಾಕ್ ಟವರ್ ಬಳಿ ಸೇರಿದ 150ಕ್ಕೂ ಹೆಚ್ಚು ಮಂದಿ ತಮಟೆಯ ಸದ್ದಿನ ಹಿನ್ನೆಲೆಯಲ್ಲಿ ಕ್ರಾಂತಿಗೀತೆಗಳನ್ನು ಹಾಡುತ್ತ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ADVERTISEMENT

ಗ್ಯಾರಂಟಿ ಯೋಜನೆಗಳಿಗೆ ಬಳಕೆ ಆಗುತ್ತಿರುವ ಎಸ್ಸಿ ಎಸ್ ಟಿ ಅಭಿವೃದ್ಧಿ ಯೋಜನೆಯ ಹಣವನ್ನು ತಕ್ಷಣ ವಾಪಸ್ ತರಬೇಕು, ಅನುದಾನ ಹಂಚಿಕೆಗೆ ಮತ್ತು ದುರುಪಯೋಗದ ಮೇಲೆ ನಿಗಾ‌ವಹಿಸಲು ಕಾವಲು‌ ಸಮಿತಿ ರಚಿಸಬೇಕು, ಎಸ್ ಸಿ ಎಸ್ ಪಿ ಮತ್ರು ಟಿಎಸ್ ಪಿ ಅನುದಾನದ ಹಣದಲ್ಲಿ ಪ್ರಾಥಮಿಕ ಹಂತದಿಂದ ಉನ್ನತ ಹಂತದ ವರೆಗೆ ಉಚಿತ ಶಿಕ್ಷಣ ನೀಡಬೇಕು, ಎಸ್ ಸಿ ಎಸ್ ಟಿ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಮಾಡಲು ಅವಕಾಶ ಮಾಡಿಕೊಡಬೇಕು, ಸುಸಜ್ಜಿತ, ಸಂತ‌ ಮನೆ ಕಟ್ಟಿಕೊಳ್ಳಲು ಆರ್ಥಿಕ ನೆರವು ನೀಡಬೇಕು. ಭೂರಹಿತರಿಗೆ ತಲಾ ಐದು ಎಕರೆ ಭೂಮಿ ನೀಡಬೇಕು, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಮುಂದುಚರಿಸಬೇಕು, ಡಾ.ಬಿ.ಆರ್.ಅಂಬೇಡ್ಕರ್ ನಿಗಮದಲ್ಲಿ ಸ್ವಯಂ ಉದ್ಯೋಗಕ್ಕಾಗಿ ಆಯ್ಕೆ‌ ಮಾಡುವ ಫಲಾನುಭವಿಗಳ ಸಂಖ್ಯೆ 50ಕ್ಕೆ ಏರಿಸಬೇಕು, ಫಲಾನುವಿಗಳ ಪಟ್ಟಿ ಅಂತಿಮಗೊಳಿಸುವ ಅಧಿಕಾರ ಆಯಾ ಜಿಲ್ಲಾಧಿಕಾರಿಗೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಸಂಘಟನಾ ಸಂಚಾಲಕ ಎಂ.ದೇವದಾಸ್, 'ಸಿದ್ದರಾಮಯ್ಯ ಸರ್ಕಾರ ಒಂದು ವರ್ಷದಲ್ಲಿ ಎಸ್ ಸಿ ಎಸ್ ಟಿ ಅಭಿವೃದ್ಧಿ ಯೋಜನೆಯ‌ ಕೋಟ್ಯಂತರ ಮೊತ್ತವನ್ನು ಗ್ಯಾರಂಟಿಗಾಗಿ ಬಳಸಿದ್ದಾರೆ. ಹಿಂದೆ ಮುಂದೆ ಯೋಚನೆ ಮಾಡದೆ ಯೋಜನೆ ಜಾರಿಗೆ ತಂದು ಹಾನಿ‌ ಮಾಡಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ಕರ್ನಾಟಕ ರಾಜ್ಯದಲ್ಲಿ ಆರ್ಥಿಕ ಸಮಸ್ಯೆ ಇಲ್ಲ. ಆದ್ದರಿಂದ ಈಗ ನಡೆಯುತ್ತಿರುವುದು ದಲಿತರನ್ನು ಮತ್ತೆ ಮೇಲೇಳದಂತೆ ಮಾಡುವ ಹುನ್ನಾರ ನಡೆಯುತ್ತಿದೆ' ಎಂದು ದೂರಿದರು.

'ಕಳೆದ ಬಾರಿ 9 ಸಂಘಟನೆಗಳು ಒಟ್ಟು ಸೇರಿ ಐಕ್ಯ ಹೋರಾಟ ಸಮಿತಿ ಮಾಡಿ ಜನಪರ ಸರ್ಕಾರ ಬರಬೇಕೆಂದು ಬಯಸಿ ಕೆಲಸ ಮಾಡಿದ್ದೇವೆ.‌ ಹೀಗಾಗಿ ಎಸ್ ಸಿ ಎಸ್ ಟಿ ಸಮುದಾಯದ ಶೇಕಡ 95 ಮತಗಳು ಕಾಂಗ್ರೆಸ್ ಗೆ ಬಿದ್ದಿವೆ' ಎಂದ ಅವರು 'ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹಾದೇವಪ್ಪ ನಿದ್ದೆ ಮಾಡುತ್ತಿದ್ದಾರೆಯೇ? ಅವರು ಮನಸ್ಸು ಮಾಡಿದರೆ ಈಗಿನ ಸಮಸ್ಯೆ ಪರಿಹರಿಸಬಹುದು' ಎಂದು ಅವರು ಅಭಿಪ್ರಾಯಪಟ್ಟರು.

ಸಮಿತಿಯ ಜಿಲ್ಲಾ ಸಂಚಾಲಕ ರಘು ಕೆ. ಎಕ್ಕಾರ್ ಮಾತನಾಡಿ 'ರಾಜ್ಯದಿಂದ ಕೋಮುವಾದಿ ಸರ್ಕಾರ ತೊಲಗಬೇಕು, ಜಾತ್ಯತೀತ ಸಿದ್ಧಾಂತದ ಸರ್ಕಾರ ಬರಬೇಕೆಂದು ಎಲ್ಲರೂ ಹೋರಾಡಿದೆವು. ಆದರೆ ಈಗಿನ ಸರ್ಕಾರ ದಲಿತ ಸಮುದಾಯಕ್ಕೆ ವಂಚನೆ ಮಾಡಿದೆ. ಗ್ಯಾರಂಟಿ ಯೋಜನೆಗಳಿಗೆ ಷೋಷಿತರ ಹಣ ಬಳಸುತ್ತಿದೆ' ಎಂದರು.

'ಎಸ್ ಸಿಎಸ್ ಪಿ ಯೋಜನೆ ಜಾರಿಗೆ ತಂದ ಎರಡನೇ ರಾಜ್ಯ‌ ಕರ್ನಾಟಕವಾಗಿದ್ದು

ಬಜೆಟ್ ನ ಶೇಕಡ 10 ಮೊತ್ತ‌ವನ್ನು ಎಸ್ ಸಿ ಎಸ್ ಟಿ ಜನರ ಏಳಿಗೆಗಾಗಿ ಮೀಸಲಿಡಬೇಕು ಎಂಬುದು ಇದರ ಉದ್ದೇಶ. ರಾಜ್ಯದಲ್ಲಿ ಕೇವಲ ಒಂದು ಕೋಟಿ ಎಸ್ ಸಿ ಎಸ್ ಟಿ ಸಮುದಾಯದವರು ಇದ್ದು ಜನರಿದ್ದಾರೆ. ಅವರ ಬದುಕು ಇನ್ನೂ ಹಸನಾಗಲಿಲ್ಲ. ಅನುದಾನವನ್ನು ಸರ್ಕಾರಗಳು ಅನ್ಯ ಯೋಜನೆಗಳಿಗೆ ಬಳಸಿದ್ದೇ ಇದಕ್ಕೆ ಕಾರಣ. ಬಿಜೆಪಿ ಮತ್ತು ಜೆಡಿಸ್ ಗೂ ಈಗ ಪ್ರತಿಭಟನೆ ನಡೆಸಲು ನೈತಿಕತೆ ಇಲ್ಲ‌. ಅವರು ಕೂಡ ಹಿಂದೆ ಹಣ ದುರುಪಯೋಗ ಮಾಡಿದ್ದಾರೆ. ಎಸ್ ಸಿ ಎಸ್ ಟಿ ಅಭಿವೃದ್ಧಿ ಯೋಜನೆಗಳ ಹಣವನ್ನು ಮೂಲಸೌಕರ್ಯಗಳಿಗೆ ಬಳಸಬಹುದು ಎಂಬುದನ್ನೇ ಮಾನದಂಡ ಮಾಡಿಕೊಂಡು ಸಣ್ಣಪುಟ್ಟ ಕೆಲಸಗಳಿಗೂ ಬಳಸಿ ದುರುಪಯೋಗ ಮಾಡಿದ್ದಾರೆ' ಎಂದು ಅವರು ಆರೋಪಿಸಿದರು.

ಗ್ಯಾರಂಟಿ ಮೂಲಕ ಹಣವನ್ನು ಎಸ್ ಸಿ ಎಸ್ ಟಿ ಜನರ ಅಭಿವೃದ್ಧಿಗಾಗಿಯೇ ಬಳಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ. ಈ ವಾದಕ್ಕೆ ಆಧಾರವಿಲ್ಲ. ಆದ್ದರಿಂದ ಅದನ್ನು ಒಪ್ಪಲು ಸಾಧ್ಯವಿಲ್ಲ' ಎಂದು ಅವರು ಹೇಳಿದರು.

'ಕಲ್ಲಡ್ಕ ಪ್ರಭಾಕರ್ ಭಟ್ ಮಹಿಳಾ ಸಮುದಾಯಕ್ಕೆ ಅವಮಾನ ಮಾಡಿದರೂ ಕ್ರಮ ಕೈಗೊಳ್ಳಲಿಲ್ಲ.

ಲೋಹಿಯಾ, ಅಂಬೇಡ್ಕರ್ ವಾದ ಎಂದೆಲ್ಲ ಹೇಳುತ್ತ ಬೆಳೆದ ಮಹದೇವಪ್ಪ ಅವರ ಮನಸ್ಸಿನಲ್ಲಿ ಇರುವುದು ಮನುವಾದ' ಎಂದು ಅವರು ಆರೋಪಿಸಿದರು.

'ಸರ್ಕಾರವನ್ನು ಬೆಂಬಲಿಸಿದ ನಮಗೆ ಬೀಳಿಸಲು ಕೂಡ ಗೊತ್ತು. ಜಿಲ್ಲೆಯಲ್ಲಿ ಕೋಮುವಾದಿಗಳು ಬಾಲ ಬಿಚ್ಚಿದ್ದಾರೆ‌. ಅಚರನ್ನು ನಿಯಂತ್ರಿಸಲು ಆಗದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರ್ಚಿ ಬಿಟ್ಟು ಹೋಗಿ' ಎಂದು ಜಿಲ್ಲಾ ಸಂಚಾಲಕ ಕೃಷ್ಣಾನಂದ ಹೇಳಿದರು.

ರಾಚಯ್ಯ, ರವಿ ಎಸ್.ಪೇಜಾವರ,ರುಕ್ಮಯ್ಯ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.