ಶಾಲೆ
ಮಂಗಳೂರು: ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ ಬೋಧನೆಗೆ ಬೇಡಿಕೆ ಹೆಚ್ಚುತ್ತಿದ್ದರೆ, ಕನ್ನಡ ಮಾಧ್ಯಮ ಶಾಲೆಗಳು ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿವೆ. ಈ ಬಾರಿ ಎಂಟು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಒಂದನೇ ತರಗತಿಗೆ ದಾಖಲಾತಿ ಶೂನ್ಯವಾಗಿವೆ.
2024–25ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 14 ಶಾಲೆಗಳು ಶೂನ್ಯ ದಾಖಲಾತಿ ಸಾಲಿಗೆ ಸೇರಿದ್ದರೆ, ಈ ಬಾರಿ ಒಟ್ಟು 20 ಶಾಲೆಗಳು ಈ ಪಟ್ಟಿಗೆ ಸೇರ್ಪಡೆಯಾಗಿವೆ. ಇವುಗಳಲ್ಲಿ ಎಂಟು ಸರ್ಕಾರಿ ಶಾಲೆಗಳು, 10 ಅನುದಾನಿತ ಶಾಲೆಗಳು, ಎರಡು ಅನುದಾನರಹಿತ ಶಾಲೆಗಳು ಒಳಗೊಂಡಿವೆ.
ಸರ್ಕಾರಿ ಶಾಲೆಗಳಲ್ಲಿ ಎಲ್ಲ ಎಂಟು ಶಾಲೆಗಳು ಕಿರಿಯ ಪ್ರಾಥಮಿಕ ಶಾಲೆಗಳಾಗಿದ್ದು, ಅನುದಾನಿತ ಶಾಲೆಗಳಲ್ಲಿ ಏಳು ಹಿರಿಯ ಪ್ರಾಥಮಿಕ ಶಾಲೆಗಳು, ಮೂರು ಪ್ರೌಢಶಾಲೆಗಳು ಆಗಿವೆ. ಅನುದಾನರಹಿತ ಶಾಲೆಗಳಲ್ಲಿ ಒಂದು ಪ್ರೌಢಶಾಲೆ, ಇನ್ನೊಂದು ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹೊಂದಿರುವ ಶಾಲೆಯಾಗಿದೆ.
2022–23ನೇ ಸಾಲಿನಲ್ಲಿ ಒಟ್ಟು 40 ಶಾಲೆಗಳಲ್ಲಿ ಒಂದನೇ ತರಗತಿಗೆ ವಿದ್ಯಾರ್ಥಿಗಳ ದಾಖಲಾತಿ ಆಗಿರಲಿಲ್ಲ. ಅವುಗಳಲ್ಲಿ ಆರು ಸರ್ಕಾರಿ, 17 ಅನುದಾನಿತ ಹಾಗೂ 20 ಅನುದಾನರಹಿತ ಶಾಲೆಗಳು ಇದ್ದವು. ಮೂರು ವರ್ಷಗಳಲ್ಲಿ ಒಟ್ಟು 74 ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಇಲ್ಲದೆ ಒಂದನೇ ತರಗತಿ ಕೊಠಡಿಗಳು ಬಾಗಿಲು ಮುಚ್ಚಿವೆ.
‘ಶೂನ್ಯ ದಾಖಲಾತಿ ಆಗಿರುವ ಸರ್ಕಾರಿ ಶಾಲೆಗಳಲ್ಲಿ ಎಲ್ಲ ಎಂಟು ಶಾಲೆಗಳು ಕಿರಿಯ ಪ್ರಾಥಮಿಕ ಶಾಲೆಗಳಾಗಿವೆ. ಜನರಿಗೆ ಇಂಗ್ಲಿಷ್ ಮಾಧ್ಯಮದ ಮೇಲಿನ ಪ್ರೀತಿಯಿಂದ ಸರ್ಕಾರಿ ಶಾಲೆಗಳ ಕನ್ನಡ ಮಾಧ್ಯಮ ತರಗತಿಗಳು ಬಡವಾಗಿವೆ. ಅದೂ ದ್ವಿಭಾಷಾ ಮಾಧ್ಯಮ ಬೋಧನೆಯ ಶಾಲೆಗಳ ಸಂಖ್ಯೆ ಹೆಚ್ಚಿದ ಮೇಲೆ ಕನ್ನಡ ಮಾಧ್ಯಮಕ್ಕೆ ಸೇರ್ಪಡೆಯಾಗುವವರ ಪ್ರಮಾಣ ತೀವ್ರ ಕುಸಿತವಾಗಿದೆ. ಜಿಲ್ಲೆಯಲ್ಲಿ ಒಟ್ಟು 238 ದ್ವಿಭಾಷಾ ಮಾಧ್ಯಮ ಶಾಲೆಗಳು ಇದ್ದು, ಹೊಸದಾಗಿ 118 ಶಾಲೆಗಳಿಗೆ ಅನುಮತಿ ದೊರೆತಿದೆ’ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
‘ಮನೆ ಸಮೀಪ ಸರ್ಕಾರಿ ಶಾಲೆ ಇದ್ದರೂ, ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಹುಡುಕಿಕೊಂಡು ಪಾಲಕರು ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ ಇರುವಲ್ಲಿ ಇಂಗ್ಲಿಷ್ ಮಾಧ್ಯಮ ಪ್ರವೇಶಕ್ಕೆ ತೀವ್ರ ಪೈಪೋಟಿ ಇದೆ. ಕನ್ನಡ ಮಾಧ್ಯಮ ಇರುವ ಶಾಲೆಗಳಲ್ಲಿ ಪ್ರವೇಶ ಇಳಿಮುಖವಾಗಿದೆ’ ಎಂದು ಅವರು ವಿವರಿಸಿದರು.
ಇದು ಸರ್ಕಾರಿ ಶಾಲೆಗಳ ಕಥೆಯಾದರೆ, ಅನುದಾನಿತ ಶಾಲೆಗಳು ಶಿಕ್ಷಕರಿಲ್ಲದೆ ಸೊರಗುತ್ತಿವೆ. ಕಾಯಂ ಶಿಕ್ಷಕರು ಇಲ್ಲದ ಕಡೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡು, ಆಡಳಿತ ಮಂಡಳಿಯೇ ಗೌರವಧನ ನೀಡಬೇಕಾಗುತ್ತದೆ. ಹೀಗಾಗಿ, ಪ್ರತಿವರ್ಷ ಬಂದಾಗುವ ಶಾಲೆಗಳಲ್ಲಿ ಅನುದಾನಿತ ಶಾಲೆಗಳ ಸಂಖ್ಯೆ ಹೆಚ್ಚಿರುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.